ಆಸ್ಪತ್ರೆಗಳಿಗೆ ಕಳಪೆ ಔಷಧಿಗಳ ಪೂರೈಕೆ ಕುರಿತು ಸಿಬಿಐ ತನಿಖೆಗೆ ದಿಲ್ಲಿ ಲೆ.ಗವರ್ನರ್ ಶಿಫಾರಸು
ಹೊಸದಿಲ್ಲಿ: ದಿಲ್ಲಿಯ ಲೆಫ್ಟಿನಂಟ್ ಗವರ್ನರ್ (ಎಲ್‌ಜಿ) ವಿ.ಕೆ.ಸಕ್ಸೇನಾ ಅವರು ರಾಷ್ಟ್ರ ರಾಜಧಾನಿಯಲ್ಲಿನ ಸರಕಾರಿ ಆಸ್ಪತ್ರೆಗಳಿಗಾಗಿ ಕಳಪೆ ಗುಣಮಟ್ಟದ ಔಷಧಿಗಳ ಖರೀದಿ ಮತ್ತು ಪೂರೈಕೆಯ ಕುರಿತು ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದಾರೆ.
ಖಾಸಗಿ ಮತ್ತು ಸರಕಾರಿ ಪ್ರಯೋಗಶಾಲೆಗಳಲ್ಲಿ ಪರೀಕ್ಷೆಗೊಳಪಡಿಸಲಾದ ಈ ಔಷಧಿಗಳು ಕಳಪೆ ಗುಣಮಟ್ಟದ್ದಾಗಿರುವುದು ಕಳವಳದ ವಿಷಯವಾಗಿದೆ ಎಂದು ಸಕ್ಸೇನಾ ಮುಖ್ಯ ಕಾರ್ಯದರ್ಶಿಗಳಿಗೆ ಬರೆದಿರುವ ಟಿಪ್ಪಣಿಯಲ್ಲಿ ಹೇಳಿದ್ದಾರೆ.
ಈ ಔಷಧಿಗಳನ್ನು ದಿಲ್ಲಿಯಾದ್ಯಂತ ಸರಕಾರಿ ಆಸ್ಪತ್ರೆಗಳಲ್ಲಿ ಲಕ್ಷಾಂತರ ರೋಗಿಗಳಿಗೆ ನೀಡಲಾಗುತ್ತಿದೆ ಮತ್ತು ಮೊಹಲ್ಲಾ ಕ್ಲಿನಿಕ್‌ಗಳಿಗೂ ಇವು ಪೂರೈಕೆಯಾಗುತ್ತಿರುವ ಸಾಧ್ಯತೆಯಿದೆ ಎಂದು ಸಕ್ಸೇನಾ ತಿಳಿಸಿದ್ದಾರೆ.
ಔಷಧಿಗಳ ಖರೀದಿಗಾಗಿ ಬಜೆಟ್‌ನಲ್ಲಿಯ ಬೃಹತ್ ಹಂಚಿಕೆಯ ಕುರಿತು ಕಳವಳ ವ್ಯಕ್ತಪಡಿಸಿರುವ ಅವರು,ಕಳಪೆ ಗುಣಮಟ್ಟದ ಔಷಧಿಗಳ ಪೂರೈಕೆಯಲ್ಲಿ ಇತರ ರಾಜ್ಯಗಳ ಪೂರೈಕೆದಾರರು ಮತ್ತು ತಯಾರಕರು ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಕಳಪೆ ಗುಣಮಟ್ಟದ ಔಷಧಿಗಳ ಕುರಿತು ಜಾಗ್ರತ ನಿರ್ದೇಶನಾಲಯದ ವರದಿಯನ್ನು ಉಲ್ಲೇಖಿಸಿರುವ ಸಕ್ಸೇನಾ, ಸರಕಾರಿ ಪ್ರಯೋಗಶಾಲೆಗಳಿಗೆ ಕಳುಹಿಸಲಾಗಿದ್ದ 43 ಸ್ಯಾಂಪಲ್‌ಗಳ ಪೈಕಿ ಮೂರು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲಗೊಂಡಿವೆ ಮತ್ತು 12 ಪರೀಕ್ಷಾ ವರದಿಗಳು ಈಗಲೂ ಬಾಕಿಯಿವೆ. ಖಾಸಗಿ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದ್ದ 43 ಸ್ಯಾಂಪಲ್‌ಗಳ ಪೈಕಿ ಐದು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲಗೊಂಡಿವೆ ಮತ್ತು 38 ಮಾದರಿಗಳು ಪ್ರಮಾಣಿತ ಗುಣಮಟ್ಟದ್ದಾಗಿವೆ ಎಂದು ಹೇಳಿದ್ದಾರೆ.
ಆಮ್ಲೊಡಿಪಿನ್, ಲೆವೆಟಿರಾಸೆಟಂ, ಪ್ಯಾಂಟೊಪ್ರರೆಲ್, ಸೆಫಾಲೆಕ್ಸಿನ್ ಮತ್ತು ಡೆಕ್ಸಾಮಿಥೆಸೋನ್‌ನಂತಹ ಔಷಧಿಗಳು ಸರಕಾರಿ ಮತ್ತು ಖಾಸಗಿ ಪ್ರಯೋಗಶಾಲೆಗಳೆರಡಲ್ಲೂ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲಗೊಂಡಿವೆ ಎಂದು ಅವರು ತಿಳಿಸಿದ್ದಾರೆ.
ಇನ್ನೂ 11 ಸ್ಯಾಂಪಲ್‌ಗಳ ವರದಿಯು ಚಂಡಿಗಡದ ಸರಕಾರಿ ಪ್ರಯೋಗಶಾಲೆಯಲ್ಲಿ ಬಾಕಿಯಿದೆ.
ಶೇ.10ಕ್ಕೂ ಅಧಿಕ ಸ್ಯಾಂಪಲ್‌ಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲಗೊಂಡಿರುವುದರಿಂದ ಮಾದರಿಗಳ ವ್ಯಾಪ್ತಿಯನ್ನು ಹೆಚ್ಚಿಸಲು ಜಾಗ್ರತ ನಿರ್ದೇಶನಾಲಯವು ಶಿಫಾರಸು ಮಾಡಿದೆ.
ಸುದ್ದಿಸಂಸ್ಥೆಯು ಈ ಕುರಿತು ದಿಲ್ಲಿ ಪರಿಸರ ಸಚಿವ ಗೋಪಾಲ ರಾಯ್ ಅವರನ್ನು ಪ್ರಶ್ನಿಸಿದಾಗ, ಸರಕಾರವು ವಿವರವಾದ ಪ್ರತಿಕ್ರಿಯೆಯನ್ನು ನೀಡಲಿದೆ ಎಂದು ಉತ್ತರಿಸಿದರು. ಇಂತಹ ವಿಚಾರಣೆಗಳ ಮೂಲಕ ಸರಕಾರದ ಕೆಲಸಕ್ಕೆ ಅಡ್ಡಿಯನ್ನುಂಟು ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ರಾಯ್ ಆರೋಪಿಸಿದರು.