ಅಸ್ಪಶ್ಯತೆಯು ಕೇವಲ ಜಾತಿ ಆಧಾರಿತವಾಗಿಲ್ಲ : ಅನುಭವ ಬಿಚ್ಚಿಟ್ಟ ಬ್ಲಿಂಕಿಟ್ ಡೆಲಿವರಿ ಬಾಯ್

ಹೊಸದಿಲ್ಲಿ: ದಿಲ್ಲಿಯ ಸಂಸ್ಥೆಯೊಂದರಲ್ಲಿ ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡುತ್ತಿರುವ ವ್ಯಕ್ತಿಯೋರ್ವರು ಡೆಲಿವರಿ ಬಾಯ್ ಗಳು ಪ್ರತಿದಿನ ಅನುಭವಿಸುತ್ತಿರುವುದನ್ನು ದಾಖಲಿಸಲು ಸ್ವತಃ ಬ್ಲಿಂಕಿಟ್ ಡೆಲಿವರಿ ಪಾರ್ಟನರ್ ಆಗಿ ಕೆಲಸ ಮಾಡಿದ್ದಾರೆ. ಡೆಲಿವರಿ ಬಾಯ್ ಗಳಿಗೆ ಕಳಂಕ ಮೆತ್ತಿಕೊಂಡಿರುವುದು ಮತ್ತು ಅವರ ವಿರುದ್ಧ ತಾರತಮ್ಯ ನಿಜ ಎನ್ನುವುದನ್ನು ಅವರು ತನ್ನ ಅನುಭವದಲ್ಲಿ ಕಂಡುಕೊಂಡಿದ್ದಾರೆ.
ಲಿಂಕ್ಡ್ಇನ್ ನಲ್ಲಿ ವೈರಲ್ ಆಗಿರುವ ಪೋಸ್ಟ್ ನಲ್ಲಿ ಸಲ್ಮಾನ್ ಸಲೀಮ್ ಅವರು ತಾನು ಆ್ಯಪ್ ಗೆ ಸೇರ್ಪಡೆಗೊಂಡಿದ್ದೆ ಮತ್ತು ಸಮೀಪದ ಬ್ಲಿಂಕಿಟ್ ಸ್ಟೋರ್ ನಿಂದ ಡೆಲಿವರಿಗಾಗಿ ಆರ್ಡರ್ ಗಳನ್ನು ಪಡೆದುಕೊಂಡಿದ್ದೆ ಎಂದು ತಿಳಿಸಿದ್ದಾರೆ.


‘ಅಸ್ಪಶ್ಯತೆ ಜಾತಿಗೆ ಮಾತ್ರ ಸೀಮಿತವಾಗಿಲ್ಲ. ನಾನು ಡೆಲಿವರಿ ಮಾಡಬೇಕಾಗಿದ್ದ ಸರಕುಗಳನ್ನು ಸ್ಟೋರ್ ನಿಂದ ಪಡೆದುಕೊಂಡು ಸಂಚಾರ ದಟ್ಟಣೆ, ಬಿರುಬಿಸಿಲು ಮತ್ತು ಧೂಳಿನ ನಡುವೆಯೇ ಅವುಗಳನ್ನು ಗ್ರಾಹಕರಿಗೆ ತಲುಪಿಸಲು ಧಾವಿಸಿದ್ದೆ. ಈ ವೃತ್ತಿಯು ತನಗೆ ಅರ್ಹ ಘನತೆಯನ್ನು ಪಡೆದುಕೊಳ್ಳಲು ಇನ್ನೂ ಹೆಣಗಾಡುತ್ತಿದೆ ಎನ್ನುವುದನ್ನು ನಾನು ಅರಿತುಕೊಂಡೆ’ ಎಂದು ತನ್ನ ಪೋಸ್ಟ್ನಲ್ಲಿ ತಿಳಿಸಿರುವ ಸಲೀಮ್,ಪೋಲಿಸರು ಮಾತ್ರವಲ್ಲ,ತಮ್ಮ ಎಸಿ ಕಾರುಗಳಲ್ಲಿಯ ಜನರು ಸಹ ಡೆಲಿವರಿ ಬಾಯ್ಗಳನ್ನು ಎರಡನೇ ದರ್ಜೆಯ ಪ್ರಯಾಣಿಕರಂತೆ ನೋಡುತ್ತಾರೆ ಎಂದಿದ್ದಾರೆ.
ಆದರೆ ಅವರಿಗೆ ನೋವು ನೀಡಿದ್ದು ಬಿರುಬಿಸಿಲಲ್ಲ, ಒಳಗೊಳ್ಳುವಿಕೆಯನ್ನು ಆನ್ಲೈನ್ನಲ್ಲಿ ಬೋಧಿಸುವ ಜನರ ವರ್ತನೆ ಅವರಿಗೆ ನೋವನ್ನುಂಟು ಮಾಡಿದೆ. ಅನೇಕ ಹೌಸಿಂಗ್ ಸೊಸೈಟಿಗಳಲ್ಲಿ ಭದ್ರತಾ ಸಿಬ್ಬಂದಿಗಳು ಮುಖ್ಯ ಲಿಫ್ಟ್ ಅನ್ನು ಬಳಸಲು ಅವರಿಗೆ ನಿರಾಕರಿಸಿದ್ದರು. ಕೆಲವೊಮ್ಮೆ ನಾಲ್ಕನೇ ಅಂತಸ್ತಿನವರೆಗೂ ಮೆಟ್ಟಲುಗಳನ್ನು ಬಳಸುವಂತೆ ಅಥವಾ ಸರ್ವಿಸ್ ಲಿಫ್ಟ್ ಬಳಸುವಂತೆ ಅವರಿಗೆ ಸೂಚಿಸಲಾಗಿತ್ತು.
ಶ್ರೀಮಂತರು ಮತ್ತು ವಿದ್ಯಾವಂತರು ಎಂದು ಕರೆಯಲ್ಪಡುವವರು ವಾಸವಾಗಿರುವ ಹೌಸಿಂಗ್ ಸೊಸೈಟಿಗಳಲ್ಲಿ ಇಂತಹ ಅಸಡ್ಡೆ ಸಾಮಾನ್ಯವಾಗಿತ್ತು, ವ್ಯಂಗ್ಯವೆಂದರೆ ಇದೇ ಜನರು ಸಾಮಾಜಿಕ ಮಾಧ್ಯಮಗಳಲ್ಲಿ ತಾರತಮ್ಯದ ಎಲ್ಲ ರೂಪಗಳ ವಿರುದ್ಧ ತಮ್ಮ ಅಭಿಪ್ರಾಯಗಳನ್ನು ಹೇಳಿಕೊಳ್ಳುತ್ತಾರೆ ಎಂದು ಸಲೀಮ್ ಬರೆದಿದ್ದಾರೆ.

‘ಗೌರವವು ವ್ಯಕ್ತಿಯ ಉಡುಪಿನೊಂದಿಗೆ ಬರಬಾರದು. ಒಂದು ಸಮಾಜವಾಗಿ ಡೆಲಿವರಿ ಬಾಯ್ಗಳೂ ಇತರರಂತೆ ಮನುಷ್ಯರು ಎನ್ನುವುದನ್ನು ನಾವು ತಿಳಿದುಕೊಳ್ಳುವ ಅಗತ್ಯವಿದೆ. ಯಾವುದೇ ವ್ಯಕ್ತಿಯ ಸಮವಸ್ತ್ರ ಅಥವಾ ನೋಟವನ್ನು ಆಧರಿಸಿ ಆತನ ಗುಣ,ಸ್ಥಿತಿ ಅಥವಾ ಮೌಲ್ಯದ ಬಗ್ಗೆ ಊಹೆಗಳನ್ನು ಮಾಡುವುದನ್ನು ನಿಲ್ಲಿಸಬೇಕು. ವೃತ್ತಿ ಯಾವುದೇ ಆಗಿರಲಿ, ಪ್ರತಿಯೊಬ್ಬರೂ ಗೌರವಕ್ಕೆ ಅರ್ಹರಾಗಿದ್ದಾರೆ ’ ಎಂದು ಹೇಳಿರುವ ಸಲೀಮ್,ತಮ್ಮ ಡೆಲಿವರಿ ಬಾಯ್ಗಳು ಎದುರಿಸುತ್ತಿರುವ ತಾರತಮ್ಯದ ವಿರುದ್ಧ ಜಾಗ್ರತಿ ಅಭಿಯಾನಗಳನ್ನು ನಡೆಸಲು ಬ್ಲಿಂಕಿಟ್ ಮತ್ತು ಝೆಪ್ಟೋದಂತಹ ವಿತರಣಾ ಸಂಸ್ಥೆಗಳು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.