ʼಪಾಮ್ ಸಂಡೆʼ ಮೆರವಣಿಗೆಗೆ ಅನುಮತಿ ನಿರಾಕರಿಸಿದ ದಿಲ್ಲಿ ಪೊಲೀಸರು: ಆಘಾತ ವ್ಯಕ್ತಪಡಿಸಿದ ಕ್ಯಾಥೋಲಿಕ್ ಸಂಸ್ಥೆ

Update: 2025-04-14 16:54 IST
ʼಪಾಮ್ ಸಂಡೆʼ ಮೆರವಣಿಗೆಗೆ ಅನುಮತಿ ನಿರಾಕರಿಸಿದ ದಿಲ್ಲಿ ಪೊಲೀಸರು: ಆಘಾತ ವ್ಯಕ್ತಪಡಿಸಿದ ಕ್ಯಾಥೋಲಿಕ್ ಸಂಸ್ಥೆ

ಸಾಂದರ್ಭಿಕ ಚಿತ್ರ (PTI)

  • whatsapp icon

ಹೊಸದಿಲ್ಲಿ: ಪಾಮ್ ಸಂಡೆ (ಗರಿಗಳ ಹಬ್ಬ)ದ ಹಿನ್ನೆಲೆ ನಗರದಲ್ಲಿ ಕಾಲ್ನಡಿಗೆ ಮೆರವಣಿಗೆ ನಡೆಸಲು ದಿಲ್ಲಿ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಈ ಕ್ರಮವು ಅನ್ಯಾಯ ಮತ್ತು ಆಘಾತಕಾರಿ ಎಂದು ಕ್ಯಾಥೋಲಿಕ್ ಸಂಘಟನೆ ಹೇಳಿದೆ.

ದಿಲ್ಲಿ ಆರ್ಚ್ಡಯಾಸಿಸ್‌ ಕ್ಯಾಥೋಲಿಕ್ ಅಸೋಸಿಯೇಷನ್ (CAAD), ಕಾನೂನು ಸುವ್ಯವಸ್ಥೆ ಮತ್ತು ಟ್ರಾಫಿಕ್ ಕಾರಣವನ್ನು ನೀಡಿ ಪಾಮ್ ಸಂಡೆ ಕಾಲ್ನಡಿಗೆ ಮೆರವಣಿಗೆಗೆ ಪೊಲೀಸರು ಅವಕಾಶ ನೀಡದಿರುವ ಬಗ್ಗೆ ತೀವ್ರವಾದ ಆಘಾತವನ್ನು ವ್ಯಕ್ತಪಡಿಸಿದೆ.

ಇತರ ಸಮುದಾಯಗಳು ಮತ್ತು ರಾಜಕೀಯ ಗುಂಪುಗಳಿಗೆ ಮೆರವಣಿಗೆಗೆ ಅನುಮತಿ ನೀಡಲಾಗುತ್ತಿದೆ. ಕೆಲಸದ ದಿನಗಳಲ್ಲಿ ಕೂಡ ಮೆರವಣಿಗೆ ನಡೆಸಲು ಅನುಮತಿ ನೀಡಿರುವುದರಿಂದ ಪೊಲೀಸರು ನೀಡಿರುವ ಈ ಕಾರಣವನ್ನು ಸ್ವೀಕರಿಸಲು ಸಾಧ್ಯವಿಲ್ಲ. ಧಾರ್ಮಿಕ ಸ್ವಾತಂತ್ರ್ಯದ ಸಾಂವಿಧಾನಿಕ ಹಕ್ಕನ್ನು ಸಮಾನವಾಗಿ ನೀಡಲಾಗುತ್ತಿದೆಯಾ ಎಂದು ಕ್ರಿಶ್ಚಿಯನ್ನರು ಈಗ ಪ್ರಶ್ನಿಸುತ್ತಾರೆ ಎಂದು ಹೇಳಿದರು.

ಈಸ್ಟರ್ ರವಿವಾರದ ಒಂದು ವಾರದ ಮೊದಲು ಪಾಮ್ ಸಂಡೆ ಆಚರಿಸಲಾಗುತ್ತದೆ. ಈ ವರ್ಷ ಎಪ್ರಿಲ್ 13ರಂದು ಪಾಮ್ ಸಂಡೆ ಆಚರಿಸಲಾಯಿತು. ಇದು ಕ್ರಿಶ್ಚಿಯನ್ನರಿಗೆ ಪವಿತ್ರ ವಾರದ ಆರಂಭವನ್ನು ಸೂಚಿಸುತ್ತದೆ.

CAAD ಪ್ರಕಾರ, ಈ ಬಾರಿ ದಿಲ್ಲಿಯ ಸೇಂಟ್ ಮೇರಿ ಚರ್ಚ್‌ನಿಂದ ಹೊಸದಿಲ್ಲಿಯ ಗೋಲ್ ಮಾರ್ಕೆಟ್ ಪ್ರದೇಶದಲ್ಲಿನ ಸೇಕ್ರೆಡ್ ಹಾರ್ಟ್ ಕ್ಯಾಥೆಡ್ರಲ್‌ಗೆ ಕಾಲ್ನಡಿಗೆ ಮೆರವಣಿಗೆ ನಡೆಸಲು ಉದ್ದೇಶಿಸಲಾಗಿತ್ತು. ಒಂದು ದಶಕಕ್ಕೂ ಹೆಚ್ಚು ಕಾಲ ಅತ್ಯಂತ ಶಿಸ್ತು, ಶಾಂತಿ ಮತ್ತು ಅಧಿಕಾರಿಗಳೊಂದಿಗೆ ಸಂಪೂರ್ಣ ಸಹಕಾರದೊಂದಿಗೆ ಮೆರವಣಿಗೆ ನಡೆಸಲಾಗಿದೆ. ಒಂದು ಬಾರಿಯು ನಮ್ಮ ಕಾರ್ಯಕ್ರಮದಿಂದ ಟ್ರಾಫಿಕ್ ಅವ್ಯವಸ್ಥೆ, ಕಾನೂನು ಸುವ್ಯವಸ್ಥೆ ಸಮಸ್ಯೆ ಕಾಣಿಸಿಕೊಂಡಿಲ್ಲ. ಆದರೆ, ಈ ಬಾರಿ ಅನುಮತಿ ನಿರಾಕರಣೆ ಪಕ್ಷಪಾತೀಯವಾಗಿದೆ ಮತ್ತು ಅನ್ಯಾಯವಾಗಿದೆ ಎಂದು ಹೇಳಿದೆ.

ದಿಲ್ಲಿ ಸೇರಿದಂತೆ ಇಡೀ ದೇಶದಲ್ಲಿ ಕ್ರಿಶ್ಚಿಯನ್ನರು ಯಾವಾಗಲೂ ಶಾಂತಿ ಮತ್ತು ಕಾನೂನು ಪಾಲಿಸುವ ಸಮುದಾಯವಾಗಿದೆ. ಆದ್ದರಿಂದ ನ್ಯಾಯಯುತವಾಗಿ ಕಾರ್ಯನಿರ್ವಹಿಸಲು ಮತ್ತು ನ್ಯಾಯ ಮತ್ತು ಸಮಾನತೆಯನ್ನು ಎತ್ತಿಹಿಡಿಯುವಂತೆ ನಾವು ಅಧಿಕಾರಿಗಳಿಗೆ ಮನವಿ ಮಾಡುತ್ತೇವೆ ಎಂದು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News