ಅಂಬೇಡ್ಕರ್ ಜಯಂತಿಯಲ್ಲಿ ಭಾಷಣಕ್ಕೆ ಅವಕಾಶ ನಿರಾಕರಣೆ; ಏಕನಾಥ್ ಶಿಂದೆ, ಅಜಿತ್ ಪವಾರ್‌ಗೆ ಮುಜುಗರ

Image Credit: X/@CMOMaharashtra
ಮುಂಬೈ: ಸೋಮವಾರ ನಡೆದ ಸರಕಾರಿ ಪ್ರಾಯೋಜಿತ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ತಮ್ಮ ನಿಗದಿತ ಭಾಷಣಗಳನ್ನು ಮಾಡುವ ಅವಕಾಶದಿಂದ ನಿರಾಕರಣೆಗೊಳಗಾಗುವ ಮೂಲಕ, ಮಹಾರಾಷ್ಟ್ರ ಉಪ ಮುಖ್ಯಮಂತ್ರಿಗಳಾದ ಏಕನಾಥ್ ಶಿಂದೆ ಹಾಗೂ ಅಜಿತ್ ಪವಾರ್ ಮುಜುಗರಕ್ಕೊಳಗಾದ ಅನಿರೀಕ್ಷಿತ ಘಟನೆ ನಡೆದಿದೆ.
ಚೈತ್ಯ ಭೂಮಿಯಲ್ಲಿ ಆಯೋಜನೆಗೊಂಡಿದ್ದ ಈ ಕಾರ್ಯಕ್ರಮವನ್ನುದ್ದೇಶಿಸಿ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್, ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹಾಗೂ ಇಬ್ಬರು ಉಪ ಮುಖ್ಯಮಂತ್ರಿಗಳಾದ ಏಕನಾಥ್ ಶಿಂದೆ ಹಾಗೂ ಅಜಿತ್ ಪವಾರ್ ಸೇರಿದಂತೆ ಹಲವು ಗಣ್ಯರ ಭಾಷಣ ನಿಗದಿಯಾಗಿತ್ತು. ವರದಿಗಳ ಪ್ರಕಾರ, ಏಕನಾಥ್ ಶಿಂದೆ ಹಾಗೂ ಅಜಿತ್ ಪವಾರ್ ಅವರಿಗೆ ಭಾಷಣ ಮಾಡಲು ಕ್ರಮವಾಗಿ ಬೆಳಗ್ಗೆ 10.10 ಗಂಟೆ ಹಾಗೂ ಬೆಳಗ್ಗೆ 10.15 ಗಂಟೆಗೆ ತಲಾ ಐದು ನಿಮಿಷಗಳ ಅವಧಿಯನ್ನು ನಿಗದಿಗೊಳಿಸಲಾಗಿತ್ತು.
ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ಹಾಗೂ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸಭೆಯನ್ನುದ್ದೇಶಿಸಿ ಮಾತನಾಡುವಾಗ, ಏಕನಾಥ್ ಶಿಂದೆ ಹಾಗೂ ಅಜಿತ್ ಪವಾರ್ ಇಬ್ಬರೂ ಸಮಯದ ಅಭಾವವನ್ನು ಮುಂದು ಮಾಡಿ, ಅನಿರೀಕ್ಷಿತವಾಗಿ ಸಭೆಯಿಂದ ನಿರ್ಗಮಿಸಿದರು. ಈ ವೇಳೆ ಅವರು ಅಸಮಾಧಾನಗೊಂಡಿದ್ದಂತೆ ಕಂಡು ಬಂದಿತು. ಇಬ್ಬರೂ ನಾಯಕರು ಮಾಧ್ಯಮಗಳೊಂದಿಗೆ ಮಾತನಾಡದೆ ಸ್ಥಳದಿಂದ ನಿರ್ಗಮಿಸಿದರು ಎಂದು ವರದಿಯಾಗಿದೆ.
ಈ ಕುರಿತು ಭುಗಿಲೆದ್ದಿರುವ ವಿವಾದವನ್ನು ತಣ್ಣಗಾಗಿಸುವ ಪ್ರಯತ್ನದ ಭಾಗವಾಗಿ, ನಾನು ಭಾಷಣ ಮಾಡುವುದಕ್ಕಿಂತ, ಅಂಬೇಡ್ಕರ್‌ರಂತಹ ದಂತಕತೆಗೆ ಗೌರವ ನಮನ ಸಲ್ಲಿಸುವುದು ಮುಖ್ಯವಾಗಿತ್ತು ಎಂದು ಏಕನಾಥ್ ಶಿಂದೆ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
"ಚೈತ್ಯ ಭೂಮಿಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ದರ್ಶನ ಪಡೆಯುವುದಕ್ಕಿಂತ ಮತ್ತೇನು ಮುಖ್ಯವಾಗಲು ಸಾಧ್ಯ? ನಾನು ಭಾಷಣ ಮಾಡುವುದಕ್ಕಿಂತ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ದರ್ಶನ ಪಡೆಯುವುದು ಮುಖ್ಯವಾಗಿತ್ತು" ಎಂದು ಸ್ಪಷ್ಟನೆ ನೀಡಿದ್ದಾರೆ.
ಏಕನಾಥ್ ಶಿಂದೆಯವರ ಹೇಳಿಕೆಯನ್ನೇ ಪುನರುಚ್ಚರಿಸಿದ ಅಜಿತ್ ಪವಾರ್, ಸಮಯದ ಅಭಾವದಿಂದಾಗಿ ನಾನು ಸ್ವಯಂಪ್ರೇರಿತವಾಗಿ ಭಾಷಣ ಮಾಡದಿರಲು ನಿರ್ಧರಿಸಿದೆ ಎಂದು ಸಮಜಾಯಿಷಿ ನೀಡಿದ್ದಾರೆ.
ಮಹಾರಾಷ್ಟ್ರದ ಆಡಳಿತಾರೂಢ ಮಹಾಯುತಿ ಸರಕಾರದೊಳಗೆ ಸ್ಫೋಟಗೊಂಡಿರುವ ಆಂತರಿಕ ಭಿನ್ನಮತದ ಕುರಿತು ರಾಜಕೀಯ ವಲಯದಲ್ಲಿ ಚರ್ಚೆಗಳು ನಡೆಯುತ್ತಿರುವ ಹೊತ್ತಿನಲ್ಲೇ ಈ ಘಟನೆ ನಡೆದಿದೆ. ಆದರೆ, ಇತ್ತೀಚೆಗೆ ಇಂತಹ ವದಂತಿಗಳನ್ನು ಅಲ್ಲಗಳೆದಿದ್ದ ಏಕನಾಥ್ ಶಿಂದೆ, ಯಾವುದೇ ಬಗೆಯ ಭಿನ್ನಾಭಿಪ್ರಾಯಗಳನ್ನು ಪರಸ್ಪರ ಮಾತುಕತೆಯ ಮೂಲಕ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲಾಗುವುದು ಎಂದು ಹೇಳಿದ್ದರು.