ಅಪರಾಧ ತಡೆಗೆ ಬಿಎಸ್‌ಎಫ್‌ನಿಂದ ಭಾರತ-ಬಾಂಗ್ಲಾ ಗಡಿಯಲ್ಲಿ ಜೇನುಗಳ ‘ನಿಯೋಜನೆ’
ಹೊಸದಿಲ್ಲಿ: ಸ್ಥಳೀಯರಿಗೆ ಜೀವನೋಪಾಯ ಸೃಷ್ಟಿಸುವುದರ ಜೊತೆಗೆ ಜಾನುವಾರು ಅಕ್ರಮ ಸಾಗಾಟ ಹಾಗೂ ಇತರ ಅಪರಾಧಗಳಿಗೆ ಬೇಲಿ ಕತ್ತರಿಸುವ ಕೃತ್ಯವನ್ನು ತಡೆಯಲು ಪಶ್ಚಿಮಬಂಗಾಳದಲ್ಲಿ ಭಾರತ-ಬಾಂಗ್ಲಾದೇಶ ಗಡಿ ಬೇಲಿಯಲ್ಲಿ ಜೇನುಗೂಡುಗಳನ್ನು ಸ್ಥಾಪಿಸುವ ವಿನೂತನ ಪ್ರಯೋಗವನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಕೈಗೊಂಡಿದೆ.
ಗಡಿ ಭದ್ರತೆಯ ಖಾತರಿ ನೀಡಲು ಹಾಗೂ ಜೇನು ಸಾಕಣೆ ಮೂಲಕ ಸ್ಥಳೀಯ ಜನರಿಗೆ ನೆರವಾಗುವ ಉದ್ದೇಶದಿಂದ ನಾಡಿಯಾ ಜಿಲ್ಲೆಯ ಗಡಿ ಪ್ರದೇಶಗಳಲ್ಲಿರುವ ಬಿಎಸ್‌ಎಫ್‌ನ 32ನೇ ಬೆಟಾಲಿಯನ್ ಮೊದಲ ಬಾರಿಗೆ ಈ ರೀತಿಯ ಉಪಕ್ರಮಗಳನ್ನು ಇತ್ತೀಚೆಗೆ ಆರಂಭಿಸಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಆಯುಷ್ ಸಚಿವಾಲಯ ಗಡಿ ಭದ್ರತಾ ಪಡೆಗೆ ಜೇನುಗೂಡು ಹಾಗೂ ಮಿಶ್ರ ಲೋಹದಿಂದ ತಯಾರಿಸಿದ ‘ಸ್ಮಾರ್ಟ್ ಬೇಲಿ’ಯಲ್ಲಿ ಅದನ್ನು ಅಳವಡಿಸಲು ಅಗತ್ಯ ಇರುವ ತಜ್ಞರನ್ನು ಒದಗಿಸಿದೆ.
ಗಡಿ ಬೇಲಿಗಳಲ್ಲಿ ಜೇನು ಗೂಡುಗಳನ್ನು ಇರಿಸುವ ತಂತ್ರವನ್ನು ರೂಪಿಸಿದ ಬಿಎಸ್‌ಎಫ್‌ನ 32ನೇ ಬೆಟಾಲಿಯನ್‌ನ ಕಮಾಂಡೆಂಟ್ ಸುಜೀತ್ ಕುಮಾರ್, ಕೇಂದ್ರ ಸರಕಾರದ ‘ವೈಬ್ರೆಂಟ್ ವಿಲೇಜ್ ಪ್ರೋಗ್ರಾಂ’ (ವಿವಿಪಿ)ಅಡಿಯಲ್ಲಿ ಈ ಕಾರ್ಯಕ್ರಮ ಆರಂಭಿಸಲಾಗಿದೆ. ಇದರೊಂದಿಗೆ ಹೂವುಗಳನ್ನು ಹೊಂದಿರುವ ವೈದ್ಯಕೀಯ ಸಸ್ಯಗಳನ್ನು ಒದಗಿಸುವಂತೆ ಬಿಎಸ್‌ಎಫ್ ಆಯುಷ್ ಸಚಿವಾಲಯದಲ್ಲಿ ಮನವಿ ಮಾಡಿದೆ. ಈ ಗಿಡಗಳನ್ನು ಜೇನು ಪೆಟ್ಟಿಗೆಯ ಸುತ್ತಮುತ್ತ ನೆಡಲಾಗುವುದು. ಇದರಿಂದ ಜೇನುಗಳು ಹೇರಳವಾಗಿ ಪರಾಗಸ್ಪರ್ಶ ಮಾಡಬಹುದು. ಇದು ಜೇನು ಉತ್ಪಾದನೆ ಹಾಗೂ ಪರಾಗಸ್ಪರ್ಶವನ್ನು ಉತ್ತೇಜಿಸಲು ನೆರವಾಗಬಹುದು ಎಂದಿದ್ದಾರೆ.
ಭಾರತ-ಬಾಂಗ್ಲಾದೇಶದ ಗಡಿ ಬೇಲಿಯಲ್ಲಿ ಜೇನು ಪೆಟ್ಟಿಗೆಗಳನ್ನು ಕಟ್ಟುವ ಪ್ರಕ್ರಿಯೆಯನ್ನು ನ.2ರಂದು ಆರಂಭಿಸಲಾಗಿದೆ. ಜೇನು ಕೃಷಿಯಲ್ಲಿ ತೊಡಗಿರುವ ಸ್ಥಳೀಯರಿಗೆ ಈ ಜೇನು ಪೆಟ್ಟಿಗೆಗಳು ಲಭ್ಯವಾಗುವುದನ್ನು ಬಿಎಸ್‌ಎಫ್ ಖಚಿತಪಡಿಸುತ್ತದೆ. ಈ ಕ್ರಮಕ್ಕೆ ಗ್ರಾಮಸ್ಥರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಅವರು ಹೇಳಿದ್ದಾರೆ.
ನಾಡಿಯಾ ಜಿಲ್ಲೆಯಲ್ಲಿರುವ ಬಿಎಸ್‌ಎಫ್‌ನ ದಕ್ಷಿಣ ಬಂಗಾಳ ಮುಂಚೂಣಿಯ ಅಡಿಯಲ್ಲಿ ಬರುವ ಗಡಿ ಪ್ರದೇಶಗಳಲ್ಲಿ ಜಾನುವಾರು, ಚಿನ್ನ, ಬೆಳ್ಳಿ ಹಾಗೂ ಮಾದಕ ದ್ರವ್ಯ ಸಾಗಾಟದಂತಹ ಗಡಿಯಾಚೆಗಿನಿಂದ ಅಪರಾಧಗಳು ನಡೆಯುತ್ತಿವೆ. ದುಷ್ಕರ್ಮಿಗಳು ಹಾಗೂ ಕಳ್ಳ ಸಾಗಾಟಗಾರರು ತಮ್ಮ ಅಕ್ರಮ ಚಟುವಟಿಕೆಗಳಿಗೆ ಗಡಿ ಬೇಲಿಗಳನ್ನು ಕತ್ತರಿಸಿದ ಹಾಗೂ ಕತ್ತರಿಸಲು ಪ್ರಯತ್ನಿಸಿದ ಹಲವು ನಿದರ್ಶನಗಳು ಇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಡಿ ಬೇಲಿಯನ್ನು ಕತ್ತರಿಸಲು ಪ್ರಯತ್ನಿಸುವ ಕಳ್ಳ ಸಾಗಾಟಗಾರರಿಗೆ ಜೇನು ನೋಣಗಳು ಅಡ್ಡಿ ಉಂಟು ಮಾಡಲಿವೆ. ಅವುಗಳು ಅವರ ಮೇಲೆ ಗಂಭೀರ ದಾಳಿ ನಡೆಸಲಿವೆ ಎಂದು ಬಿಎಸ್‌ಎಫ್ ಅಧಿಕಾರಿ ವಿವರಿಸಿದ್ದಾರೆ.