ಮೋದಿ ಸೌದಿ ಭೇಟಿ ಬಳಿಕವೂ ಸಿಗದ ಪರಿಹಾರ: ಅನಿಶ್ಚಿತತೆಯಲ್ಲಿ 42,500 ಹಜ್ ಯಾತ್ರಿಕರು!

Update: 2025-04-26 15:26 IST
ಮೋದಿ ಸೌದಿ ಭೇಟಿ ಬಳಿಕವೂ ಸಿಗದ ಪರಿಹಾರ: ಅನಿಶ್ಚಿತತೆಯಲ್ಲಿ 42,500 ಹಜ್ ಯಾತ್ರಿಕರು!

Photo credit: PTI

  • whatsapp icon

ಮಲಪ್ಪುರಂ: ಪ್ರಧಾನಿ ಮೋದಿ ಸೌದಿ ಭೇಟಿ ಬಳಿಕವೂ ಖಾಸಗಿ ಟೂರ್ ಆಪರೇಟರ್‌ಗಳ ಮೂಲಕ ಹಜ್ ಯಾತ್ರೆಗೆ ತೆರಳಬೇಕಿದ್ದ 42,500 ಹಜ್ ಯಾತ್ರಿಕರ ಪ್ರಯಾಣ ಇನ್ನು ಕೂಡ ಅನಿಶ್ಚಿತವಾಗಿದೆ.

ಸೌದಿ ಅರೇಬಿಯಾ ಭಾರತದ ಹಜ್ ಕೋಟಾದಲ್ಲಿ ಹಠಾತ್ ಕಡಿತವನ್ನು ಮಾಡಿತ್ತು. ಖಾಸಗಿ ಹಜ್ ಟೂರ್ ಆಪರೇಟರ್‌ಗಳಿಗೆ ಮೀಸಲಿಟ್ಟ ಸುಮಾರು 52,000 ಹಜ್ ಸೀಟುಗಳನ್ನು ರದ್ದುಗೊಳಿಸಿತ್ತು. ಈ ಹಠಾತ್ ನಿರ್ಧಾರ ಈಗಾಗಲೇ ಪಾವತಿಗಳನ್ನು ಪೂರ್ಣಗೊಳಿಸಿದ ಅನೇಕ ಯಾತ್ರಾರ್ಥಿಗಳಲ್ಲಿ ಆತಂಕ ಮತ್ತು ಅನಿಶ್ಚಿತತೆ ಉಂಟು ಮಾಡಿತ್ತು. ಪ್ರಧಾನಿ ಮೋದಿ ಸೌದಿ ಅರೇಬಿಯಾ ಭೇಟಿಯಿಂದ ಇದಕ್ಕೆ ಪರಿಹಾರ ಸಿಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಅದು ಫಲಕಾರಿಯಾಗಲಿಲ್ಲ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿನ್ನೆಲೆ ಸೌದಿ ಅರೇಬಿಯಾ ಪ್ರವಾಸದಲ್ಲಿದ್ದ ಪ್ರಧಾನಿ ಮೋದಿ ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಭಾರತಕ್ಕೆ ಮರಳಿದರು. ಪ್ರವಾಸವನ್ನು ಮೊಟಕುಗೊಳಿಸಿದ ಕಾರಣ ಈ ವಿಷಯದ ಬಗ್ಗೆ ಚರ್ಚೆ ನಡೆಸಲಾಗಿದ್ಯಾ ಅಥವಾ ಇಲ್ಲವಾ ಎನ್ನುವುದು ಸ್ಪಷ್ಟವಾಗಿಲ್ಲ.

ರದ್ದಾದ 52,000 ಸೀಟುಗಳಲ್ಲಿ 10 ಸಾವಿರ ಮಂದಿಗೆ ಹಜ್ ಯಾತ್ರೆಗೆ ಅವಕಾಶ ನೀಡುವುದಾಗಿ ಸೌದಿ ಅರೇಬಿಯಾ ಘೋಷಿಸಿದೆ. ಅದರಂತೆ ಗುರುವಾರ ಸಂಜೆ ನುಸುಖ್ ಪೋರ್ಟಲ್ ತೆರೆಯಲಾಗಿದೆ. ಮೇ 5ರಂದು ಈ ಪೋರ್ಟಲ್ ಸ್ಥಗಿತಗೊಳ್ಳಲಿದೆ. ಆದರೆ, ಅದಕ್ಕೆ ಮೊದಲೇ ಈ ಪೋರ್ಟಲ್‌ನಲ್ಲಿ ಅಪ್ಲೋಡ್ ಆಗುತ್ತಿಲ್ಲ ಎಂದು ಟೂರ್ ಆಪರೇಟರ್‌ಗಳು ಹೇಳುತ್ತಿದ್ದಾರೆ.

ಕೇರಳದ 500ಕ್ಕಿಂತ ಕಡಿಮೆ ಯಾತ್ರಿಕರು ಮಾತ್ರ ಈ ಕೋಟಾದ ಪ್ರಯೋಜನ ಪಡೆಯಬಹುದಾಗಿದೆ.

ಕೇರಳದಿಂದ ಈ ಬಾರಿ ಸುಮಾರು 11,000 ಜನರು ಖಾಸಗಿ ಟೂರ್ ಆಪರೇಟರ್‌ಗಳ ಮೂಲಕ ಹಜ್ ಯಾತ್ರೆಗೆ ಹೋಗಲು ತಯಾರಿ ನಡೆಸುತ್ತಿದ್ದರು. ಕೇರಳದ ಅಧಿಕೃತ ಏಜೆನ್ಸಿಗಳನ್ನು ಹೊರತುಪಡಿಸಿ ಬೇರೆ ರಾಜ್ಯಗಳ ಏಜೆನ್ಸಿಗಳ ಮೂಲಕ ಪ್ರಯಾಣಿಸಲು ಸಾಕಷ್ಟು ಜನರು ತಯಾರಿ ನಡೆಸುತ್ತಿದ್ದರು. ಖಾಸಗಿ ಏಜೆನ್ಸಿಗಳು ದರಗಳನ್ನು 6 ಲಕ್ಷ.ರೂವರೆಗೆ ನಿಗದಿಪಡಿಸಿತ್ತು. ಕೆಲವರು ಮೊದಲ ಕಂತು ಪಾವತಿಸಿದರೆ ಇನ್ನು ಕೆಲವರು ಸಂಪೂರ್ಣ ಮೊತ್ತವನ್ನು ಪಾವತಿಸಿದ್ದಾರೆ. ಯಾತ್ರಿಕರಿಂದ ಸಂಗ್ರಹಿಸಿದ ಮುಂಗಡ ಮೊತ್ತವನ್ನು ಕೇಂದ್ರ ಸರಕಾರಕ್ಕೆ ಪಾವತಿಸಲಾಗಿದೆ ಎಂದು ಏಜೆನ್ಸಿಗಳು ಹೇಳುತ್ತಿದೆ.

ಕೇರಳದಲ್ಲಿ ಸರಕಾರಿ ಹಜ್ ಸಮಿತಿ ಮೂಲಕ ಹಜ್ ಯಾತ್ರೆಗೆ ತೆರಳಲು ಸಿದ್ಧತೆ ನಡೆಸುತ್ತಿದ್ದ ಹಲವರು ಹೆಚ್ಚಿನ ಸೌಲಭ್ಯಗಳ ನಿರೀಕ್ಷೆಯಲ್ಲಿ ಖಾಸಗಿ ಆಪರೇಟರ್‌ಗಳ ಮೊರೆ ಹೋಗಿದ್ದರು. ಈ ನಡುವೆ ಯಾತ್ರಾರ್ಥಿಗಳನ್ನು ಆಕರ್ಷಿಸಲು ಖಾಸಗಿ ಟೂರ್ ಆಪರೇಟರ್‌ಗಳು ದರ ಇಳಿಕೆ ಮಾಡಿದ್ದರು. ಈಗ ಎಲ್ಲರೂ ಇಕ್ಕಟ್ಟಿಗೆ ಸಿಲುಕಿದ್ದಾರೆ.

ಯಾತ್ರಿಕರ ಪ್ರಯಾಣದ ವ್ಯವಸ್ಥೆಗೆ ಸಂಬಂಧಿಸಿದಂತೆ ಖಾಸಗಿ ಟೂರ್ ಆಪರೇಟರ್‌ಗಳಿಗೆ ಯಾವುದೇ ಹೊಸ ಅಧಿಸೂಚನೆಗಳನ್ನು ಹೊರಡಿಸಲಾಗಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News