ಬಾಂಬ್ ಹಾಕಲು ಆದೇಶ ನೀಡಿದ್ದರೇ ಮಣಿಪುರ ಸಿಎಂ?
ಮಣಿಪುರದಲ್ಲಿ ಕುಕಿ ಮತ್ತು ಮೈತೈ ಸಮುದಾಯಗಳ ನಡುವಿನ ಜನಾಂಗೀಯ ಹಿಂಸಾಚಾರವನ್ನು ಪ್ರಚೋದಿಸುವಲ್ಲಿ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ನೇರ ಪಾತ್ರವಿದೆ ಎಂಬ ಆರೋಪವನ್ನು ಪುಷ್ಟೀಕರಿಸುವಂತೆ ಆಡಿಯೊ ಕ್ಲಿಪ್ ಒಂದು ಸೋರಿಕೆಯಾಗಿದೆ.
The Wire ಗೆ ಲಭ್ಯವಾಗಿರುವ ಈ 48 ನಿಮಿಷಗಳ ಕ್ಲಿಪ್ ನಲ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಆದೇಶದ ಹೊರತಾಗಿಯೂ ಹಿಂಸಾತ್ಮಕ ಕಾರ್ಯಾಚರಣೆ ಪ್ರಾರಂಭಿಸಿದ್ದುದನ್ನು ಮತ್ತು ಬಾಂಬ್‌ಗಳನ್ನು ಬಳಸಲು ತಾನೇ ಹೇಳಿದ್ದುದನ್ನು ಬಿರೇನ್ ಸಿಂಗ್ ಚರ್ಚಿಸಿರುವುದು ರೆಕಾರ್ಡ್ ಆಗಿದೆಯೆಂದು ವರದಿಗಳು ಹೇಳಿವೆ.
ಇಬ್ಬರು ಕುಕಿ ಮಹಿಳೆಯರ ಮೇಲೆ ಅತ್ಯಾಚಾರ ನಡೆದ ಘಟನೆಗೆ ಸಂಬಂಧಿಸಿ ಫೋಟೋಗಳು ನಿಜವೆಂದು ಸಿಂಗ್ ಒಪ್ಪಿಕೊಂಡರೂ, ಅತ್ಯಾಚಾರ ನಡೆದಿರುವುದಕ್ಕೆ ಪುರಾವೆ ಕೇಳಿರುವುದು ಕೂಡ ಆಡಿಯೊದಲ್ಲಿದೆ.
ಆದರೆ ಮಣಿಪುರ ಸರ್ಕಾರ ಇದು ಸಿಎಂ ಆಡಿಯೊ ಎಂಬುದರ ಕುರಿತ ಆರೋಪಗಳನ್ನು ತಳ್ಳಿಹಾಕಿದ್ದು, ಆಡಿಯೊ ಕ್ಲಿಪ್ ಅನ್ನು ಹಿಂಸೆ ಹೆಚ್ಚಿಸುವ ಉದ್ದೇಶದಿಂದ ಸೃಷ್ಟಿಸಲಾಗಿದೆ ಎಂದು ಹೇಳಿದೆ. ಇಂತಹ ಆಡಿಯೋ ಬಿಡುಗಡೆ ಮಾಡಿರುವುದು ದೇಶದ್ರೋಹದ ಕೆಲಸವಾಗಿದೆ ಎಂದು ಮಣಿಪುರ ಸಿಎಂ ಬಿರೇನ್ ಸಿಂಗ್ ಹೇಳಿದ್ದಾರೆ.
ಈ ಆಡಿಯೊ ಸೋರಿಕೆ ಬೆನ್ನಲ್ಲೇ 10 ಕುಕಿ ಜೋ ಶಾಸಕರು ಆಗಸ್ಟ್ 21ರಂದು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಇದು ಮಣಿಪುರದ ಜನಾಂಗೀಯ ಸಂಘರ್ಷದಲ್ಲಿ ಬಿರೇನ್ ಸಿಂಗ್ ಪಾತ್ರದ ಕುರಿತು ಈವರೆಗೆ ಇದ್ದ ಅನುಮಾನವನ್ನು ಸಾಬೀತು ಮಾಡಿದೆ ಎಂದಿದ್ದಾರೆ. ಕೇಂದ್ರ ಸರ್ಕಾರ ರಚಿಸಿರುವ ತನಿಖಾ ಆಯೋಗ ತನ್ನ ತನಿಖೆ ಚುರುಕುಗೊಳಿಸಬೇಕು ಮತ್ತು ತಪ್ಪಿತಸ್ಥರೆಂದು ಕಂಡುಬಂದಲ್ಲಿ ಮುಖ್ಯಮಂತ್ರಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕುಕಿ ಶಾಸಕರು ಒತ್ತಾಯಿಸಿದ್ದಾರೆ.
ತನಿಖೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಅದನ್ನು ತಡೆಯಲು ಬೈರೆನ್ ಸಿಂಗ್ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಬೇಕೆಂದೂ ಶಾಸಕರು ಒತ್ತಾಯಿಸಿದ್ಧಾರೆ. 2023ರ ಮೇ ತಿಂಗಳಿಂದಲೂ ಹಿಂಸಾಚಾರ ನಡೆಯುತ್ತಿದ್ದು, 200ಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆದಿದೆ. ಹಿಂಸಾಚಾರದ ತನಿಖೆಗಾಗಿ ಗೃಹ ಸಚಿವಾಲಯ ನೇಮಿಸಿರುವ ತನಿಖಾ ಆಯೋಗಕ್ಕೆ ಈ ಆಡಿಯೊ ರೆಕಾರ್ಡಿಂಗ್ ಸಲ್ಲಿಸಲಾಗಿದೆ ಎಂದು ವರದಿಗಳು ಹೇಳಿವೆ.
ಆಡಿಯೊದಲ್ಲಿನ ಧ್ವನಿ ಸಿಎಂ ಬಿರೇನ್ ಸಿಂಗ್ ಅವರದ್ದು ಎನ್ನಲಾಗಿದ್ದು, ಅಮಿತ್ ಶಾ ಜೊತೆಗೆ ನಡೆದಿರುವ ಸಂಭಾಷಣೆ ಆಡಿಯೊ ಕ್ಲಿಪ್ ನಲ್ಲಿ ದಾಖಲಾಗಿದೆ.
ಕ್ಲಿಪ್ ನಲ್ಲಿ ಇರುವಂತೆ, ಬಾಂಬ್ ಗಳ ಬಳಕೆಯನ್ನು ಅಮಿತ್ ಶಾ ಪ್ರಶ್ನಿಸುತ್ತಾರೆ. ಅದನ್ನು ನಿಲ್ಲಿಸಲು ಶಾ ಸೂಚಿಸಿರುವುದೂ ಇದೆ. ಆಗ ಇನ್ನು ಮುಂದೆ ಬಾಂಬ್ ಬಳಸಬೇಡಿ ಎಂದು ಡಿಜಿಪಿಗೆ ಸಿಎಂ ಸೂಚಿಸುತ್ತಾರೆ. ಆದರೆ ಅಮಿತ್ ಶಾ ಹೋದ ಬಳಿಕ " ಬಾಂಬ್‌ಗಳನ್ನು ರಹಸ್ಯವಾಗಿ ಬಳಸುವುದನ್ನು ಮುಂದುವರಿಸಲು" ಸಿಂಗ್ ತನ್ನ ತಂಡಕ್ಕೆ ಹೇಳಿದ್ದರು ಎಂಬುದು ಕ್ಲಿಪ್ ನಲ್ಲಿ ಬಯಲಾಗಿದೆ.
ಅದೇ ಕ್ಲಿಪ್‌ನಲ್ಲಿ, 2023ರ ಮೇ ತಿಂಗಳಲ್ಲಿ ಇಬ್ಬರು ಕುಕಿ ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಮತ್ತು ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆಯ ಬಗ್ಗೆ ಸಿಂಗ್ ಅನುಮಾನ ವ್ಯಕ್ತಪಡಿಸಿದ್ದಾರೆ.
ಮಹಿಳೆಯರ ಮೇಲೆ ಮೈತೈ ಸಮುದಾಯದವರು ಅತ್ಯಾಚಾರ ನಡೆಸಿದರು ಎಂಬುದರ ಬದಲಾಗಿ, ಅವರು ಮಹಿಳೆಯರನ್ನು ರಕ್ಷಿಸಿದ್ದಾಗಿ ಮೈತೈ ಸಮುದಾಯ ಹೇಳಿಕೊಳ್ಳಬೇಕು ಎಂದು ಬಿರೇನ್ ಸಿಂಗ್ ಸೂಚಿಸಿರುವುದು ಆಡಿಯೊದಲ್ಲಿದೆ ಎಂದು ವರದಿಗಳು ಹೇಳಿವೆ.
ಸರ್ಕಾರದಲ್ಲಿ ಕುಕಿ ಸಮುದಾಯದ ಹೆಚ್ಚುತ್ತಿರುವ ಪ್ರಭಾವದ ಬಗ್ಗೆ ಬಿರೇನ್ ಸಿಂಗ್ ಹತಾಶೆಗೊಂಡಿದ್ದುದನ್ನು ಕೂಡ ಆಡಿಯೋ ಬಹಿರಂಗಪಡಿಸುತ್ತದೆ. ಇದಕ್ಕಾಗಿಯೇ ಅವರ ವಿರುದ್ಧ ಕಾರ್ಯಾಚರಣೆ ಪ್ರಾರಂಭಿಸಿರುವುದು ಎಂದು ಬಿರೇನ್ ಸಿಂಗ್ ಹೇಳಿರುವುದೂ ಆಡಿಯೊದಲ್ಲಿದೆ.
ಹಿಂಸಾಚಾರದಲ್ಲಿ ಸಿಂಗ್ ಅವರ ಪಾತ್ರ ಮತ್ತು ಕೋಮು ಉದ್ವಿಗ್ನತೆಗೆ ಉತ್ತೇಜನ ನೀಡಲು ಅವರು ಸಾಮಾಜಿಕ ಮಾಧ್ಯಮವನ್ನು ಬಳಸಿದ್ದುದರ ಬಗ್ಗೆ ಈಗ ಸೋರಿಕೆಯಾಗಿರುವ ಆಡಿಯೊ ಗಂಭೀರ ಕಳವಳವನ್ನು ಮೂಡಿಸಿದೆ.
ಆದರೆ, ಮಣಿಪುರ ಸರ್ಕಾರ ಮಾತ್ರ ಸೋರಿಕೆಯಾದ ಆಡಿಯೊ ಕ್ಲಿಪ್ ನೈಜವಲ್ಲ ಎಂದು ಹೇಳಿದ್ದು, ಮಾಡಿರುವ ಎಲ್ಲಾ ಆರೋಪಗಳನ್ನು ನಿರಾಕರಿಸಿದೆ.