ಅಪ್ರಾಪ್ತ ವಯಸ್ಕರಿಂದ ರಸ್ತೆ ಅಪಘಾತಗಳ ಕುರಿತು ಕೇಂದ್ರದ ದತ್ತಾಂಶಗಳಲ್ಲಿ ವ್ಯತ್ಯಾಸ: ವರದಿ

ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಅಪ್ರಾಪ್ತ ವಯಸ್ಕರಿಂದ ಅಪಘಾತಗಳ ಪಟ್ಟಿಯಲ್ಲಿ ತಮಿಳುನಾಡು ದೇಶದಲ್ಲಿ ಅಗ್ರಸ್ಥಾನದಲ್ಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ರಾಜ್ಯಸಭೆಯಲ್ಲಿ ಒದಗಿಸಿರುವ ದತ್ತಾಂಶಗಳು ಮತ್ತು ರಾಜ್ಯ ಸರಕಾರದ ದತ್ತಾಂಶಗಳ ನಡುವೆ ಅಗಾಧ ವ್ಯತ್ಯಾಸಗಳಿವೆ ಎಂದು The Hindu ವರದಿ ಮಾಡಿದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿಯವರು ಮಾ.19ರಂದು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿದ ಲಿಖಿತ ಉತ್ತರದಲ್ಲಿ ಹಂಚಿಕೊಂಡಿರುವ ಇಂಟಿಗ್ರೇಟೆಡ್ ರೋಡ್ ಆ್ಯಕ್ಸಿಡೆಂಟ್ ಡಾಟಾಬೇಸ್( iRAD) ಸಿಸ್ಟಮ್‌ನ ದತ್ತಾಂಶಗಳು 2023 ಮತ್ತು 2024ರಲ್ಲಿ 2063 ಪ್ರಕರಣಗಳೊಂದಿಗೆ ತಮಿಳುನಾಡು ಅಪ್ರಾಪ್ತ ವಯಸ್ಕರಿಂದ ಉಂಟಾದ ಅತ್ಯಂತ ಹೆಚ್ಚಿನ ಸಂಖ್ಯೆ ರಸ್ತೆ ಅಪಘಾತಗಳನ್ನು ದಾಖಲಿಸಿದೆ ಎಂದು ತೋರಿಸಿವೆ. ನಂತರದ ಸ್ಥಾನಗಳಲ್ಲಿ ಮಧ್ಯಪ್ರದೇಶ(1,138) ಮತ್ತು ಮಹಾರಾಷ್ಟ್ರ(1,067) ರಾಜ್ಯಗಳಿವೆ.
ಆದರೆ ಕೇಂದ್ರವು ರಾಜ್ಯಸಭೆಯಲ್ಲಿ ಒದಗಿಸಿರುವ ದತ್ತಾಂಶಗಳನ್ನು ಪರಿಶೀಲಿಸಿದ ತಮಿಳುನಾಡು ಪೋಲಿಸರು ಅದೇ iRAD ಸಿಸ್ಟಮ್‌ನಲ್ಲಿ 2023 ಮತ್ತು 2024ರಲ್ಲಿ ತಮಿಳುನಾಡಿನಲ್ಲಿ ಅಪ್ರಾಪ್ತ ವಯಸ್ಕರಿಂದ ಉಂಟಾದ ಅಪಘಾತಗಳ ಒಟ್ಟು ಸಂಖ್ಯೆ 473 ಎಂದು ದಾಖಲಾಗಿರುವುದನ್ನು ಪತ್ತೆ ಹಚ್ಚಿದ್ದಾರೆ. ಈ ಪೈಕಿ 204 ಅಪಘಾತಗಳು 2023ರಲ್ಲಿ ಮತ್ತು 269 ಅಪಘಾತಗಳು 2024ರಲ್ಲಿ ಸಂಭವಿಸಿವೆ.
‘200 ಎಲ್ಲಿ ಮತ್ತು 2,000 ಎಲ್ಲಿ? ಸ್ಪಷ್ಟವಾಗಿ ಇಲ್ಲಿ ತಪ್ಪು ಉಂಟಾಗಿದೆ ಎಂದು ರಾಜ್ಯ ಪೋಲಿಸ್ ಮಹಾ ನಿರ್ದೇಶಕರ ಸಂಚಾರ ಮತ್ತು ರಸ್ತೆ ಸುರಕ್ಷತಾ ಘಟಕದ ಹಿರಿಯ ಅಧಿಕಾರಿಯೋರ್ವರು ಹೇಳಿದ್ದನ್ನು ವರದಿಯು ಉಲ್ಲೇಖಿಸಿದೆ.
ರಾಜ್ಯದ ದತ್ತಾಂಶಗಳ ಪ್ರಕಾರ ಬಾಲಾಪರಾಧಿಗಳ ಪೋಷಕರಿಗೆ 2023ರಲ್ಲಿ 41 ಮತ್ತು 2024ರಲ್ಲಿ 80 ಚಲನ್‌ಗಳನ್ನು ನೀಡಲಾಗಿತು. ದತ್ತಾಂಶಗಳ ಪ್ರಕಾರ ಬಿಹಾರ ಅಪ್ರಾಪ್ತ ವಯಸ್ಕರಿಗೆ 1,316 ಚಲನ್‌ಗಳನ್ನು ನೀಡುವ ಮೂಲಕ ಅಗ್ರಸ್ಥಾನದಲ್ಲಿತ್ತು ಮತ್ತು ಚಲನ್‌ಗಳ ಮೂಲಕ ಅದು 44.27 ಲಕ್ಷ ರೂ.ಗಳ ಆದಾಯವನ್ನು ಸಂಗ್ರಹಿಸಿತ್ತು.
ರಾಜ್ಯ ಅಪರಾಧ ದಾಖಲೆ ಘಟಕದ ಮೂಲಕ ತಮಿಳುನಾಡಿನಲ್ಲಿಯ ಅಪಘಾತ ಮತ್ತು ಅಪರಾಧ ಪ್ರಕರಣಗಳನ್ನು iRAD ಸಿಸ್ಟಮ್‌ನಲ್ಲಿ ಸೇರಿಸಲಾಗುತ್ತದೆ ಎಂದು ಪೋಲಿಸ್ ಅಧಿಕಾರಿ ತಿಳಿಸಿದರು.
ಅಧಿಕಾರಿಯ ಪ್ರಕಾರ ತಮಿಳುನಾಡಿನಲ್ಲಿ ಜನವರಿ ಮತ್ತು ಫೆಬ್ರವರಿಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಗಳಲ್ಲಿ ಶೇ.17ರಷ್ಟು ಇಳಿಕೆ ಕಂಡುಬಂದಿದೆ.