ಕಚ್ಚತೀವು ದ್ವೀಪವನ್ನು ಲಂಕಾಗೆ ಬಿಟ್ಟುಕೊಡುವಾಗ ಡಿಎಂಕೆ ಮೌನ ವಹಿಸಿತ್ತು : ಮೋದಿ
ಚೆನ್ನೈ: 1974ರಲ್ಲಿ ಕಚ್ಚತೀವು ದ್ವೀಪವನ್ನು ಶ್ರೀಲಂಕಾಗೆ ಬಿಟ್ಟುಕೊಡುವಾಗ ರಾಜ್ಯದ ಹಿತಾಸಕ್ತಿಯನ್ನು ರಕ್ಷಿಸಲು ತಮಿಳುನಾಡಿನ ಆಡಳಿತಾರೂಢ ಪಕ್ಷ ದ್ರಾವಿಡ ಮುನ್ನೇತ್ರ ಕಳಗಮ್ (ಡಿಎಂಕೆ) ಏನೂ ಮಾಡಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಆರೋಪಿಸಿದ್ದಾರೆ.
ಕಚ್ಚತೀವು, ಭಾರತ ಮತ್ತು ಶ್ರೀಲಂಕಾ ನಡುವಿನ ಪಾಕ್ ಜಲಸಂಧಿಯಯಲ್ಲಿರುವ ಸಣ್ಣ ನಿರ್ಜನ ದ್ವೀಪವಾಗಿದೆ. ಈ ದ್ವೀಪವು ತಮಗೆ ಸೇರಿದ್ದು ಎಂಬುದಾಗಿ ಕನಿಷ್ಠ 1921ರಿಂದಲೂ ಭಾರತ ಮತ್ತು ಶ್ರೀಲಂಕಾಗಳು ಹೇಳಿಕೊಂಡು ಬಂದಿದ್ದವು. 1974ರಲ್ಲಿ ಉಭಯ ದೇಶಗಳು ತಮ್ಮ ಸಾಗರ ಗಡಿಯನ್ನು ಗುರುತಿಸುವ ಒಪ್ಪಂದವೊಂದಕ್ಕೆ ಸಹಿ ಹಾಕಿದವು. ಗಡಿಯು ಕಚ್ಚತೀವುನ ಪಶ್ಚಿಮ ಕರಾವಳಿಯಿಂದ ಒಂದು ಮೈಲಿ ದೂರದಲ್ಲಿ ಹಾದು ಹೋಗುತ್ತದೆ ಎಂದು ಒಪ್ಪಂದವು ಹೇಳುತ್ತದೆ. ಅಂದರೆ ಕಚ್ಚತೀವು ದ್ವೀಪವು ಶ್ರೀಲಂಕಾ ಜಲಪ್ರದೇಶದ ವ್ಯಾಪ್ತಿಗೆ ಒಳಪಟ್ಟಿತು.
ಒಪ್ಪಂದ ಏರ್ಪಟ್ಟ ಸಮಯದಲ್ಲಿ ಇಂದಿರಾ ಗಾಂಧಿ ಭಾರತದ ಪ್ರಧಾನಿಯಾಗಿದ್ದರು.
ಒಪ್ಪಂದಕ್ಕೆ ಸಂಬಂಧಿಸಿ ಹೊರಬಂದಿರುವ ‘‘ಹೊಸ ವಿಷಯಗಳು’’ ಡಿಎಂಕೆಯ ‘‘ಎರಡು ಮಾನದಂಡ’’ಗಳನ್ನು ಬಹಿರಂಗಪಡಿಸಿದೆ ಎಂದು ಪ್ರಧಾನಿ ಆರೋಪಿಸಿದ್ದಾರೆ.
ಈ ಒಪ್ಪಂದಕ್ಕೆ ಸಾರ್ವಜನಿಕವಾಗಿ ವಿರೋಧ ವ್ಯಕ್ತಪಡಿಸಿದ್ದರೂ, ಕಚ್ಚತೀವು ದ್ವೀಪವನ್ನು ಶ್ರೀಲಂಕಾಗೆ ಒಪ್ಪಿಸಲು ಆಗಿನ ತಮಿಳುನಾಡು ಮುಖ್ಯಮಂತ್ರಿ ಎಮ್. ಕರುಣಾನಿಧಿ ಒಪ್ಪಿಗೆ ನೀಡಿದ್ದರು ಎಂಬುದಾಗಿ ಪತ್ರಿಕೆಯೊಂದರ ವರದಿಯನ್ನು ಉಲ್ಲೇಖಿಸಿ ಮೋದಿ ಆರೋಪಿಸಿದ್ದಾರೆ.