"ನನಗೆ ಅರ್ಥವೇ ಆಗಿಲ್ಲ": ಹಿಂದಿಯಲ್ಲಿ ಪತ್ರ ಬರೆದ ಕೇಂದ್ರ ಸಚಿವರಿಗೆ ತಮಿಳಿನಲ್ಲಿ ಪ್ರತ್ಯುತ್ತರ ಕಳುಹಿಸಿದ ಡಿಎಂಕೆ ಸಂಸದ
ಹೊಸದಿಲ್ಲಿ: ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು ಹಿಂದಿಯಲ್ಲಿ ತಮಗೆ ಬರೆದಿದ್ದ ಪತ್ರಕ್ಕೆ ತಮಿಳಿನಲ್ಲಿ ಪ್ರತ್ಯುತ್ತರ ನೀಡಿರುವ ಡಿಎಂಕೆ ನಾಯಕ ಹಾಗೂ ರಾಜ್ಯಸಭಾ ಸಂಸದ ಪುದುಕೋಟ್ಟೈ ಎಂ.ಎಂ. ಅಬ್ದುಲ್ಲಾ, ನಿಮ್ಮ ಪತ್ರದ ಒಂದು ಪದವೂ ನನಗೆ ಅರ್ಥವಾಗಲಿಲ್ಲ ಎಂದು ಬರೆದಿದ್ದಾರೆ.
ರೈಲುಗಳಲ್ಲಿನ ಆಹಾರ ಗುಣಮಟ್ಟ ಹಾಗೂ ಶುಚಿತ್ವದ ಕುರಿತು ಅಬ್ದುಲ್ಲಾ ಅವರು ಕೇಳಿದ್ದ ಪ್ರಶ್ನೆಗೆ ರವನೀತ್ ಸಿಂಗ್ ಬಿಟ್ಟು ಬರೆದಿದ್ದ ಪತ್ರಕ್ಕೆ ಸಂಬಂಧಿಸಿದ ಪ್ರತಿಕ್ರಿಯೆ ಇದಾಗಿದೆ.
ಎರಡು ಪತ್ರಗಳನ್ನೂ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಅಬ್ದುಲ್ಲಾ, ನನಗೆ ಹಿಂದಿ ಅರ್ಥವಾಗುವುದಿಲ್ಲ ಎಂದು ಹಲವು ಬಾರಿ ನೆನಪೋಲೆಗಳನ್ನು ಕಳಿಸಿದ್ದರೂ, ಕೇಂದ್ರ ಸಚಿವರ ಕಚೇರಿಯಲ್ಲಿ ನಿಯೋಜನೆಗೊಂಡಿರುವ ಅಧಿಕಾರಿಗಳು ನನಗೆ ಅದೇ ಭಾಷೆಯಲ್ಲಿ ಪತ್ರಗಳನ್ನು ರವಾನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
“ಕೇಂದ್ರ ರೈಲ್ವೆ ಇಲಾಖೆಯ ರಾಜ್ಯ ಸಚಿವರ ಕಚೇರಿಯ ಪತ್ರಗಳು ಯಾವಾಗಲೂ ಹಿಂದಿಯಲ್ಲಿರುತ್ತವೆ. ನನಗೆ ಹಿಂದಿ ಬರುವುದಿಲ್ಲ. ದಯವಿಟ್ಟು ಇಂಗ್ಲಿಷ್ ನಲ್ಲಿ ಪತ್ರ ರವಾನಿಸಿ ಎಂದು ಸಚಿವರ ಕಚೇರಿಯಲ್ಲಿ ನಿಯೋಜನೆಗೊಂಡಿರುವ ಅಧಿಕಾರಿಗಳಿಗೆ ಪದೇ ಪದೇ ಮನವಿ ಮಾಡಿದರೂ, ಪತ್ರ ಮಾತ್ರ ಹಿಂದಿಯಲ್ಲೇ ಇದೆ. ಅವರಿಗೆ ಅರ್ಥವಾಗುವಂಥ ರೀತಿಯಲ್ಲಿ ನಾನು ಪ್ರತ್ಯುತ್ತರ ನೀಡಿದ್ದು, ಅವರು ಅದರಂತೆ ವರ್ತಿಸಲಿದ್ದಾರೆ ಎಂದು ಭಾವಿಸುತ್ತೇನೆ” ಎಂದು ಅಬ್ದುಲ್ಲಾ ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.
ಅಲ್ಲದೆ, ಇನ್ನು ಮುಂದೆ ನನಗೆ ಇಂಗ್ಲಿಷ್ ಭಾಷೆಯಲ್ಲೇ ಪತ್ರಗಳನ್ನು ರವಾನಿಸಬೇಕು ಎಂದು ಅವರು ತಮಿಳಿನಲ್ಲಿ ಸಚಿವರಿಗೆ ಮನವಿ ಮಾಡಿದ್ದಾರೆ.
ಇದಕ್ಕೂ ಮುನ್ನ, 2022ರಲ್ಲೂ ಕೂಡಾ ಕೇಂದ್ರ ಸರಕಾರ ಹಿಂದಿ ಭಾಷೆಯನ್ನು ಹೇರುತ್ತಿದೆ ಎಂದು ಡಿಎಂಕೆ ವಾಗ್ದಾಳಿ ನಡೆಸಿತ್ತು.
ಹಿಂದಿಯನ್ನು ಇಂಗ್ಲಿಷ್ ಭಾಷೆಗೆ ಪರ್ಯಾಯವಾಗಿ ಸ್ವೀಕರಿಸಬೇಕೇ ಹೊರತು ಸ್ಥಳೀಯ ಭಾಷೆಗಳಿಗಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿದ್ದ ಡಿಎಂಕೆ ಅಧ್ಯಕ್ಷ ಹಾಗೂ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಇದರಿಂದ ದೇಶದ ಐಕ್ಯತೆಗೆ ಧಕ್ಕೆಯಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.