ಕೋವಿಡ್‌ನಿಂದ ಮೃತಪಟ್ಟ ವೈದ್ಯರ ಕುಟುಂಬಗಳಿಗೆ ನೀಡಿದ ಪರಿಹಾರದ ದತ್ತಾಂಶ ನೀಡಲು ಕೇಂದ್ರ ಸರಕಾರ ನಿರಾಕರಣೆ
ಹೊಸದಿಲ್ಲಿ: ಕೋವಿಡ್ ಮೊದಲನೇ ಹಾಗೂ ಎರಡನೇ ಅಲೆ ಸಂದರ್ಭ ಮೃತಪಟ್ಟ ವೈದ್ಯರ ಕುಟುಂಬಗಳ ಸಂಖ್ಯೆ ಹಾಗೂ ಅವರಿಗೆ ಇಲ್ಲಿವರೆಗೆ ನೀಡಲಾದ ಪರಿಹಾರದ ದತ್ತಾಂಶವನ್ನು ಹಂಚಿಕೊಳ್ಳಲು ಕೇಂದ್ರ ಸರಕಾರ ನಿರಾಕರಿಸಿದೆ.
ಕಣ್ಣೂರಿನ ಆರ್‌ಟಿಐ ಕಾರ್ಯಕರ್ತ ಡಾ. ಕೆ.ವಿ. ಬಾಬು ಅವರು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್ (ಪಿಎಂಜಿಕೆಪಿ) ವಿಮಾ ಯೋಜನೆಯ ಅಡಿಯಲ್ಲಿ ಪರಿಹಾರ ಸ್ವೀಕರಿಸಿದ ಫಲಾನುಭವಿಗಳ ಒಟ್ಟು ಸಂಖ್ಯೆಯ ಮಾಹಿತಿ ಕೋರಿ ಸಲ್ಲಿಸಿದ ಆರ್‌ಟಿಐ ಅರ್ಜಿಗೆ ಕೇಂದ್ರ ಸರಕಾರ ಈ ಪ್ರತಿಕ್ರಿಯೆ ನೀಡಿದೆ.
ಕಳೆದ ವರ್ಷ ನವೆಂಬರ್‌ನಲ್ಲಿ ಕೇಂದ್ರ ಸರಕಾರ 475 ಅಥವಾ ಶೇ. 29 ವೈದ್ಯರ ಕುಟುಂಬಗಳಿಗೆ ಪರಿಹಾರ ನೀಡಲಾಗಿದೆ ಎಂದು ತಿಳಿಸಿತ್ತು. ಆದರೆ, ಈ ಬಾರಿ ಕೇಂದ್ರ ಆರೋಗ್ಯ ಸಚಿವಾಲಯ ಆರ್‌ಟಿಐ ಅರ್ಜಿಗೆ ನೀಡಿದ ಪ್ರತಿಕ್ರಿಯೆಯಲ್ಲಿ ದತ್ತಾಂಶ ಭೌತಿಕ ರೂಪದಲ್ಲಿ ಲಭ್ಯವಿಲ್ಲ ಎಂದು ಹೇಳಿದೆ.
ಕೋವಿಡ್ ಸಾಂಕ್ರಾಮಿಕ ರೋಗದ ಸಂದರ್ಭ ಮೃತಪಟ್ಟ ವೈದ್ಯರ ಒಟ್ಟು ಸಂಖ್ಯೆ ಕುರಿತ ಮಾಹಿತಿಯ ಕೊರತೆ ಇದೆ ಎಂದು ಕೇಂದ್ರ ಸರಕಾರ ಹೇಳಿದ ಹೊರತಾಗಿಯೂ 1,596ಕ್ಕೂ ಅಧಿಕ ವೈದ್ಯರು ಮೃತಪಟ್ಟಿದ್ದಾರೆ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ (ಐಎಂಎ) ವರದಿ ಮಾಡಿದೆ. ಕೋವಿಡ್‌ನ ಎರಡು ಅಲೆಗಳ ಸಂದರ್ಭ ಮೃತಪಟ್ಟ ವೈದ್ಯರ ಭಾವಚಿತ್ರದೊಂದಿಗೆ ವಿವರವಾದ ಪಟ್ಟಿಯನ್ನು ಅದು ಆರೋಗ್ಯ ಸಚಿವಾಲಯಕ್ಕೆ ಸಲ್ಲಿಸಿದೆ.
ಕೇಂದ್ರ ಸರಕಾರ 2020 ಮಾರ್ಚ್ 30ರಂದು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್ (ಪಿಎಂಜಿಕೆಪಿ) ವಿಮಾ ಯೋಜನೆಯನ್ನು ಆರಂಭಿಸಿತ್ತು. ಈ ಯೋಜನೆ ಅಡಿಯಲ್ಲಿ ಕೇಂದ್ರ ಸರಕಾರ ಕೋವಿಡ್ ಸೋಂಕಿನ ಅಪಾಯದಲ್ಲಿರುವ ಸಮುದಾಯ ಹಾಗೂ ಖಾಸಗಿ ಆರೋಗ್ಯ ಕಾರ್ಯಕರ್ತರು ಸೇರಿದಂತೆ 50 ಲಕ್ಷ ಆರೋಗ್ಯ ಸೇವೆ ಪೂರೈಕೆದಾರರನ್ನು ಒಳಗೊಳ್ಳುವ ವಿಮೆಯನ್ನು ಘೋಷಿಸಿತ್ತು.
ಡಿಸೆಂಬರ್ 7ರ ತನ್ನ ಆರ್‌ಟಿಐ ಅರ್ಜಿಯಲ್ಲಿ ಡಾ. ಬಾಬು ಅವರು ಈ ಯೋಜನೆ ಅಡಿಯ ಒಟ್ಟು ಫಲಾನುಭವಿಗಳ ಸಂಖ್ಯೆ ಹಾಗೂ 2020 ಮಾರ್ಚ್ 30ರಿಂದ 2024 20ರ ವರೆಗೆ ವಿತರಿಸಲಾದ ಒಟ್ಟು ಮೊತ್ತದ ಬಗ್ಗೆ ಮಾಹಿತಿ ಕೇಳಿದ್ದರು.
ಈ ಕೋವಿಡ್ ಸಾಂಕ್ರಾಮಿಕ ರೋಗದ ಸಂದರ್ಭ ಕೋವಿಡ್ ಯೋಧರು ಎಂದು ಕರೆದು ಸಂಭ್ರಮಿಸಲಾದ ಮೃತಪಟ್ಟ ವೈದ್ಯರ ಎಷ್ಟು ಕುಟುಂಬಕ್ಕೆ ಪರಿಹಾರ ನೀಡಲಾಗಿದೆ ಹಾಗೂ ವಿತರಿಸಲಾದ ಒಟ್ಟು ಮೊತ್ತವೆಷ್ಟು ಎಂದು ಪ್ರಶ್ನಿಸಿದ್ದರು. ಆದರೆ, ಡಿಸೆಂಬರ್ 17ರ ದಿನಾಂಕದ ಆರ್‌ಟಿಐ ಪ್ರತಿಕ್ರಿಯೆ, ದತ್ತಾಂಶ ಭೌತಿಕ ರೂಪದಲ್ಲಿ ಲಭ್ಯವಿಲ್ಲ. ಆದುದರಿಂದ ಆರ್‌ಟಿಐ ಕಾಯ್ದೆಯ ಸೆಕ್ಷನ್ 7 (9)ರ ಅಡಿಯಲ್ಲಿ ಇದನ್ನು ಒದಗಿಸಲು ಸಾಧ್ಯವಿಲ್ಲ ಎಂದು ಹೇಳಿತು.
ಕೇಂದ್ರ ಆರೋಗ್ಯ ಸಚಿವಾಲಯದ ದತ್ತಾಂಶ ಕೋವಿಡ್‌ನಿಂದ ಹುತಾತ್ಮರಾದ ಭಾರತೀಯ ವೈದ್ಯರಲ್ಲಿ ಹೆಚ್ಚಿನವರು ವಿಮಾ ಯೋಜನೆಯ ಫಲಾನುಭವಿಗಳಲ್ಲ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ ಎಂದು ಡಾ. ಬಾಬು ಹೇಳಿದ್ದಾರೆ.