ಸಂಕುಚಿತ ಮನಸ್ಸಿನವರಾಗಬೇಡಿ: ಪಾಕಿಸ್ತಾನ ಕಲಾವಿದರಿಗೆ ನಿಷೇಧ ಹೇರಬೇಕು ಎಂದ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ: ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಪಾಕಿಸ್ತಾನ ಕಲಾವಿದರಿಗೆ ನಿಷೇಧ ಹೇರಬೇಕು ಎಂದು ಮನವಿ ಮಾಡಿದ್ದ ಅರ್ಜಿಯನ್ನು ಮಂಗಳವಾರ ವಜಾಗೊಳಿಸಿದ ಸುಪ್ರೀಂ ಕೋರ್ಟ್, “ಇಷ್ಟು ಸಂಕುಚಿತ ಮನಸ್ಸಿನವರಾಗಬೇಡಿ” ಎಂದು ಅರ್ಜಿದಾರರಿಗೆ ಕಿವಿಮಾತು ಹೇಳಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ತಮ್ಮನ್ನು ತಾವು ಸಿನಿಮಾ ಉದ್ಯೋಗಿ ಹಾಗೂ ಕಲಾವಿದ ಎಂದು ಹೇಳಿಕೊಂಡಿರುವ ಫಾಯಿಝ್ ಅನ್ವರ್ ಖುರೇಷಿ ಎಂಬವರ ಅರ್ಜಿಯನ್ನು ವಜಾಗೊಳಿಸಿದ್ದ ಬಾಂಬೆ ಹೈಕೋರ್ಟ್ ಆದೇಶದ ನಡುವೆ ಮಧ್ಯಪ್ರವೇಶಿಸಲು ನ್ಯಾ. ಸಂಜೀವ್ ಖನ್ನಾ ಹಾಗೂ ನ್ಯಾ. ಎಸ್.ವಿ.ಎನ್.ಭಟ್ಟಿ ಅವರನ್ನೊಳಗೊಂಡಿದ್ದ ನ್ಯಾಯಪೀಠವು ನಿರಾಕರಿಸಿದೆ.
“ನೀವು ಈ ಮನವಿಯನ್ನು ಮತ್ತೆ ಮಾಡಬಾರದು. ಅಷ್ಟು ಸಂಕುಚಿತ ಮನಸ್ಸಿನವರಾಗಬೇಡಿ” ಎಂದು ನ್ಯಾಯಪೀಠವು ಹೇಳಿದೆ.
ಇದಲ್ಲದೆ, ಅರ್ಜಿದಾರರ ವಿರುದ್ಧ ಬಾಂಬೆ ಹೈಕೋರ್ಟ್ ಮಾಡಿದ್ದ ಕೆಲವು ಟೀಕೆಗಳನ್ನು ಕೈಬಿಡಲೂ ಸುಪ್ರೀಂ ಕೋರ್ಟ್ ನಿರಾಕರಿಸಿದೆ.
“ದೇಶಪ್ರೇಮಿಯಾಗಿರಬೇಕಾದರೆ, ವಿದೇಶಿಗರು, ವಿಶೇಷವಾಗಿ ನೆರೆ ದೇಶದವರ ಬಗ್ಗೆ ಸಂಕುಚಿತರಾಗಿರಬಾರದು ಎಂದು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು” ಎಂದು ಸುಪ್ರೀಂ ಕೋರ್ಟ್ ಕಿವಿಮಾತು ಹೇಳಿದೆ.
ಕಲೆಗಳು, ಸಂಗೀತ, ಕ್ರೀಡೆಗಳು, ಸಂಸ್ಕೃತಿ, ನೃತ್ಯ ಹಾಗೂ ಇನ್ನೂ ಹಲವಾರು ಚಟುವಟಿಕೆಗಳು ರಾಷ್ಟ್ರೀಯತೆ, ಸಂಸ್ಕೃತಿಗಳು ಹಾಗೂ ದೇಶಗಳಿಗಿಂತಲೂ ಮೇಲಿನವಾಗಿದ್ದು, ಅವು ದೇಶದಲ್ಲಿ ಹಾಗೂ ದೇಶಗಳ ನಡುವೆ ನಿಜವಾಗಿಯೂ ಶಾಂತಿ, ಐಕ್ಯತೆ ಹಾಗೂ ಸೌಹಾರ್ದತೆಯನ್ನು ಮೂಡಿಸುತ್ತವೆ ಎಂದು ಬಾಂಬೆ ಹೈಕೋರ್ಟ್ ಹೇಳಿತ್ತು. ಈ ತೀರ್ಪಿನ ವಿರುದ್ಧ ಅರ್ಜಿದಾರ ಫಾಯಿಝ್ ಅನ್ವರ್ ಖುರೇಷಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್, ಈ ವಿಚಾರದಲ್ಲಿ ಮತ್ತೆ ಮುಂದುವರಿಯಬೇಡಿ ಎಂದೂ ಅವರಿಗೆ ತಾಕೀತು ಮಾಡಿದೆ.