ದೇಶವನ್ನು ಆಳಲು ಬಿಜೆಪಿಗೆ ಇನ್ನೊಂದು ಅವಕಾಶ ನೀಡಬೇಡಿ: ಕಮಲ್ ಹಾಸನ್

Update: 2024-04-04 20:58 IST
ದೇಶವನ್ನು ಆಳಲು ಬಿಜೆಪಿಗೆ ಇನ್ನೊಂದು ಅವಕಾಶ ನೀಡಬೇಡಿ: ಕಮಲ್ ಹಾಸನ್

ಕಮಲ್ ಹಾಸನ್ | Photo: ANI 

  • whatsapp icon

ಚೆನ್ನೈ : ದೇಶವನ್ನು ಆಳಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಗೆ ಇನ್ನೊಂದು ಅವಕಾಶ ನೀಡಬೇಡಿ ಎಂದು ಮಕ್ಕಳ್ ನೀದಿ ಮೈಯ್ಯಮ್ (ಎಂಎನ್ಎಂ)ನ ಸ್ಥಾಪಕ ಕಮಲ್ ಹಾಸನ್ ಅವರು ತಮಿಳುನಾಡಿನ ಜನರನ್ನು ಬುಧವಾರ ಆಗ್ರಹಿಸಿದ್ದಾರೆ

ವಿಸಿಕೆ ಅಧ್ಯಕ್ಷ ಹಾಗೂ ‘ಇಂಡಿಯಾ’ ಮೈತ್ರಿಕೂಟದ ಚಿದಂಬರಂ ಲೋಕಸಭಾ ಕ್ಷೇತ್ರ (ಮೀಸಲು) ದ ಅಭ್ಯರ್ಥಿ ತೋಲ್ ತಿರುಮಾವಲವನ್ ಅವರ ಪರವಾಗಿ ಚಿದಂಬರಂನಲ್ಲಿ ಬುಧವಾರ ರಾತ್ರಿ ಕಮಲ್ ಹಾಸನ್ ಪ್ರಚಾರ ನಡೆಸಿದರು.

ಬಿಜೆಪಿ ನೇತೃತ್ವದ ಎನ್ಡಿಎ ಸಂಪೂರ್ಣವಾಗಿ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ. ಬಿಜೆಪಿ ಕೂಡ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ. ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ, ದೇಶ ಪ್ರಜಾಪ್ರಭುತ್ವದ ತತ್ವಗಳಿಂದ ಸಂಪೂರ್ಣವಾಗಿ ವಂಚಿತವಾಗಲಿದೆ ಎಂದು ಅವರು ಹೇಳಿದರು.

ದೇಶದಲ್ಲಿ ಪ್ರಜಾಪ್ರಭುತ್ವ ಅತಿ ದೊಡ್ಡ ಅಪಾಯದಲ್ಲಿದೆ. ಪ್ರಜಾಪ್ರಭುತ್ವವನ್ನು ರಕ್ಷಿಸಲು ಹಾಗೂ ಬಿಜೆಪಿಯ ಕುತಂತ್ರದಿಂದ ದೇಶವನ್ನು ಉಳಿಸಲು ಎಲ್ಲಾ ಜಾತ್ಯತೀತ ಹಾಗೂ ಸಮಾನ ಮನಸ್ಕ ಶಕ್ತಿಗಳೊಂದಿಗೆ ತಾನು ಕೈಜೋಡಿಸಿದ್ದೇನೆ ಎಂದು ಅವರು ಹೇಳಿದರು.

ತೋಲ್ ತಿರುಮಾವಲವನ್ ಅವರು 25 ವರ್ಷಗಳ ಹಿಂದೆ ತಮ್ಮ ಎಲ್ಲಾ ಬದ್ಧತೆಗಳನ್ನು ತ್ಯಜಿಸಿ ಜನರ ಸೇವೆಗಾಗಿ ಸಾರ್ವಜನಿಕ ಬದುಕಿಗೆ ಬಂದರು. ರಾಜಕೀಯದಲ್ಲಿ ಜಾತಿವಾದ ನನ್ನ ಮೊದಲ ಶತ್ರು. ನನ್ನ ಬದುಕು ಹಾಗೂ ಸಿನೆಮಾದಲ್ಲಿ ಜಾತಿಗೆ ಅವಕಾಶವಿಲ್ಲ ಎಂದು ಅವರು ಹೇಳಿದರು.

ಕೇಂದ್ರ ಸರಕಾರ ಕಳೆದ 10 ವರ್ಷಗಳಿಂದ ಏನನ್ನೂ ಮಾಡಿಲ್ಲ ಎಂದು ಆರೋಪಿಸಿದ ಅವರು, ರೈತರಿಗೆ ಕನಿಷ್ಠ ಬೆಂಬಲ ಬೆಲೆ ನೀಡುವ ತನ್ನ ಭರವಸೆಯನ್ನು ಈಡೇರಿಸುವಲ್ಲಿ ಅದು ವಿಫಲವಾಗಿದೆ. ಇದಕ್ಕೆ ಬದಲಾಗಿ ಅದು ರೈತರ ಮೇಲೆ ಜಲ ಪಿರಂಗಿಯನ್ನು ಪ್ರಯೋಗಿಸಿತು ಹಾಗೂ ಅವರನ್ನು ತುಂಬಾ ಕೆಟ್ಟದಾಗಿ ನಡೆಸಿಕೊಂಡಿತು. ಭರವಸೆ ನೀಡಿದಂತೆ ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವಲ್ಲಿ ಕೂಡ ಬಿಜೆಪಿ ಸರಕಾರ ವಿಫಲವಾಗಿದೆ ಎಂದು ಕಮಲ್ ಹಾಸನ್ ಹೇಳಿದರು. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News