ವಿವಾದಾತ್ಮಕ ತೀರ್ಪು: ಅಂಪೈರ್ ಜೊತೆ ರಿಯಾನ್ ಪರಾಗ್ ವಾಗ್ವಾದ

PC | timesofindia
ಹೊಸದಿಲ್ಲಿ: ಗುಜರಾತ್ ಟೈಟನ್ಸ್ ವಿರುದ್ಧ ಅಹ್ಮದಾಬಾದ್‍ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ ವಿವಾದಾತ್ಮಕ ತೀರ್ಪಿಗೆ ಬಲಿಯಾದ ರಾಜಸ್ಥಾನ ರಾಯಲ್ಸ್ ಆಟಗಾರ ರಿಯಾನ್ ಪರಾಗ್ ಅಂಪೈರ್ ಜತೆ ಮೈದಾನದಲ್ಲೇ ವಾಗ್ವಾದ ನಡೆಸಿದ ಘಟನೆ ನಡೆದಿದೆ.
ಗುಜರಾತ್ ಟೈಟನ್ಸ್ ನೀಡಿದ್ದ 218 ರನ್‍ಗಳ ಬೃಹತ್ ಗುರಿಯನ್ನು ಬೆನ್ನಟ್ಟುವ ವೇಳೆ ರಾಜಸ್ಥಾನ ರಾಯಲ್ಸ್ ಆರಂಭದಲ್ಲೇ ಆಘಾತ ಅನುಭವಿಸಿತು. ನಾಯಕ ಸಂಜು ಸ್ಯಾಮ್ಸನ್ ಜತೆ ಪರಾಗ್ ಕ್ರೀಸ್‍ಗೆ ಆಗಮಿಸುವ ಹಂತದಲ್ಲಿ 2 ವಿಕೆಟ್ ನಷ್ಟಕ್ಕೆ 12 ರನ್ ಗಳಿಸಿತ್ತು. ಏಳನೇ ಓವರ್ ನಲ್ಲಿ ನಡೆದ ನಾಟಕೀಯ ಘಟನೆಗೆ ಮುನ್ನ ಈ ಜೋಡಿ 48 ರನ್‍ಗಳ ಜತೆಯಾಟದ ಮೂಲಕ ತಂಡದ ಚೇತರಿಕೆಗೆ ಕಾರಣವಾಯಿತು.
ವೇಗಿ ಕುಲ್ವಂತ್ ಖೇಜ್ರೋಲಿಯಾ ಅವರ ಎಸೆತವನ್ನು ಪರಾಗ್, ಥರ್ಡ್‍ಮನ್ ಕಡೆಗೆ ಹೊಡೆಯುವ ಯತ್ನ ಮಾಡಿದರು. ಬ್ಯಾಟ್ ಸೋಕಿದ ಚೆಂಡನ್ನು ವಿಕೆಟ್ ಕೀಪರ್ ಜೋಸ್ ಬಟ್ಲರ್ ಅದ್ಭುತವಾಗಿ ಹಿಡಿದರು. ರಾಯಲ್ಸ್ ಬ್ಯಾಟರ್ ಡಿಆರ್ ಎಸ್ ರಿವ್ಯೂ ಪಡೆದರು. ಬ್ಯಾಟ್‍ಗೆ ಚೆಂಡು ಸೋಕಿರುವುದು ಅಲ್ಟ್ರಾಎಡ್ಜ್ ವಿಶ್ಲೇಷಣೆಯಿಂದ ಕಂಡುಬಂತು. ಇದರಿಂದಾಗಿ ಅಂಪೈರ್ ತೀರ್ಪನ್ನು ಡಿಆರ್ ಎಸ್ ರಿವ್ಯೂ ಎತ್ತಿಹಿಡಿಯಿತು.
ಆದಾಗ್ಯೂ ತೀರ್ಪಿನಿಂದ ಅಸಮಾಧಾನಗೊಂಡ ಪರಾಗ್, ಬ್ಯಾಟಿಗೆ ಚೆಂಡು ಸೋಕುವ ಬದಲು ಬ್ಯಾಟಿನಿಂದ ಸಿಡಿದ ಮೊಳೆ ಚೆಂಡಿಗೆ ತಾಗಿದ್ದಾಗಿ ವಾದಿಸಿದರು. ಪೆವಿಲಿಯನ್‍ಗೆ ತೆರಳುವ ಮುನ್ನ ಕ್ಷಣಕಾಲ ನಿಂತು ಅಂಪೈರ್ ಜತೆ ವಾಗ್ವಾದ ನಡೆಸುವುದು ಕಂಡುಬಂತು. ಇದರಿಂದ ರಾಜಸ್ಥಾನ ರಾಯಲ್ಸ್ ತಂಡ 6.4 ಓವರ್ ಗಳಲ್ಲಿ 60 ರನ್‍ಗಳಿಗೆ 3ನೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಅಂಪೈರ್ ತೀರ್ಪಿನಿಂದ ಪರಾಗ್ ಹತಾಶರಾದದ್ದು ಸ್ಪಷ್ಟವಾಗಿ ಕಂಡುಬಂತು.