'ಪುಷ್ಪ 2' ಚಿತ್ರ ವೀಕ್ಷಿಸುತ್ತಿದ್ದ ಡ್ರಗ್ ಪೆಡ್ಲರ್: ಚಿತ್ರಮಂದಿರದಲ್ಲೇ ಸಿನಿಮೀಯ ರೀತಿಯಲ್ಲಿ ಬಂಧಿಸಿದ ಪೊಲೀಸರು!
ನಾಗಪುರ: ಮಹಾರಾಷ್ಟ್ರದ ನಾಗಪುರದಲ್ಲಿನ ಮಲ್ಟಿಪ್ಲೆಕ್ಸ್ ಒಂದರಲ್ಲಿ ಪುಷ್ಪ-2 ಚಿತ್ರ ವೀಕ್ಷಿಸಲು ರಾತ್ರಿ ಪ್ರದರ್ಶನಕ್ಕೆ ತೆರಳಿದ್ದ ಪ್ರೇಕ್ಷಕರು ಪೊಲೀಸರ ನೈಜ ಕಾರ್ಯಾಚರಣೆಯೊಂದಕ್ಕೆ ಸಾಕ್ಷಿಯಾಗಿದ್ದು, ಹತ್ಯೆ ಮತ್ತು ಮಾದಕ ದ್ರವ್ಯ ಕಳ್ಳಸಾಗಣೆ ಆರೋಪ ಎದುರಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಚಿತ್ರಮಂದಿರದಲ್ಲೇ ಸಿನಿಮೀಯ ರೀತಿಯಲ್ಲಿ ಬಂಧಿಸಿದ ಘಟನೆ ವರದಿಯಾಗಿದೆ.
ಗುರುವಾರ ತಡರಾತ್ರಿಯ ಕೆಲವೇ ಹೊತ್ತಿನಲ್ಲಿ ಆರೋಪಿ ವಿಶಾಲ್ ಮೇಶ್ರಮ್ ನನ್ನು ಪೊಲೀಸರು ಸಿನಿಮೀಯವಾಗಿ ಬಂಧಿಸಿದ್ದರಿಂದ, ಚಿತ್ರವನ್ನು ಆನಂದಿಸುತ್ತಿದ್ದ ಪ್ರೇಕ್ಷಕರು ಕೆಲ ಕಾಲ ಆತಂಕಕ್ಕೊಳಗಾದರು. ಆದರೆ, ಆರೋಪಿಯು ಸೆರೆ ಸಿಕ್ಕಿದ್ದರಿಂದ, ನೀವಿನ್ನು ಚಿತ್ರ ಆನಂದಿಸುವುದನ್ನು ಮುಂದುವರಿಸಬಹುದು ಎಂದು ಪ್ರೇಕ್ಷಕರಿಗೆ ಅಭಯ ನೀಡಿದ ಪೊಲೀಸರು, ಆತನನ್ನು ತಮ್ಮೊಂದಿಗೆ ಠಾಣೆಗೆ ಕರೆದೊಯ್ದರು ಎಂದು ಹೇಳಲಾಗಿದೆ.
ಆರೋಪಿ ವಿಶಾಲ್ ಮೇಶ್ರಮ್ ಕಳೆದ 10 ತಿಂಗಳಿನಿಂದ ತಲೆ ಮರೆಸಿಕೊಂಡಿದ್ದ. ಆತ ಇತ್ತೀಚೆಗೆ ಬಿಡುಗಡೆಯಾಗಿದ್ದ ಪುಷ್ಪ-2 ಚಿತ್ರ ನೋಡಲು ಉತ್ಸುಕನಾಗಿದ್ದಾನೆ ಎಂಬ ಸುಳಿವನ್ನು ಆಧರಿಸಿ, ಆತನನ್ನು ಪತ್ತೆ ಹಚ್ಚಲಾಯಿತು ಎಂದು ರವಿವಾರ ಪಚ್ಪೌಲಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿ ಗ್ಯಾಂಗ್ ಸ್ಟರ್ ವಿರುದ್ಧ 27 ಪ್ರಕರಣಗಳು ಬಾಕಿ ಇದ್ದು, ಈ ಪೈಕಿ ಎರಡು ಹತ್ಯೆಗಳು ಹಾಗೂ ಮಾದಕ ದ್ರವ್ಯ ಕಳ್ಳಸಾಗಣೆ ಪ್ರಕರಣಗಳು ಸೇರಿವೆ. ಆರೋಪಿಯು ಹಿಂಸಾತ್ಮಕ ವರ್ತನೆಗೆ ಕುಖ್ಯಾತನಾಗಿದ್ದು, ಆತ ಈ ಹಿಂದೆ ಪೊಲೀಸರ ಮೇಲೂ ಹಲ್ಲೆ ನಡೆಸಿದ್ದ ಎಂದು ಅವರು ಹೇಳಿದ್ದಾರೆ.