ಅಮೆರಿಕದ ಶಿಕ್ಷಣ ಸಂಸ್ಥೆಯಲ್ಲಿ ಉಪನ್ಯಾಸ ನೀಡಲು ದಿಲ್ಲಿ ವಿವಿಯಿಂದ ರಜೆ ನಿರಾಕರಣೆ: ಸೆನ್ಸಾರ್‌ಶಿಪ್ ಎಂದು ಆರೋಪಿಸಿದ ಪ್ರಾಧ್ಯಾಪಕ ಅಪೂರ್ವಾನಂದ್
Photo : Apoorvanand Anand/Facebook.
ಹೊಸದಿಲ್ಲಿ: ಈ ಮಾಸಾಂತ್ಯದಲ್ಲಿ ಚಿಂತಕರ ಚಾವಡಿಯೊಂದು ನ್ಯೂಯಾರ್ಕ್ ನಲ್ಲಿ ಹಮ್ಮಿಕೊಂಡಿರುವ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಾಧ್ಯಾಪಕ ಹಾಗೂ ರಾಜಕೀಯ ವಿಶ್ಲೇಷಕ ಅಪೂರ್ವಾನಂದ್‌ಗೆ ದಿಲ್ಲಿ ವಿಶ್ವವಿದ್ಯಾಲಯ ರಜೆ ನಿರಾಕರಿಸಿದ್ದು, ಈ ಕ್ರಮವು ಸೆನ್ಸಾರ್‌ಶಿಪ್ ಆಗಿದೆ ಎಂದು ಅವರು ಆರೋಪಿಸಿದ್ದಾರೆ.
ಎಪ್ರಿಲ್ 21ರಿಂದ ಮೇ 1ರವರೆಗೆ ನ್ಯೂಯಾರ್ಕ್‌ನಲ್ಲಿ ಹಮ್ಮಿಕೊಳ್ಳಲಾಗಿರುವ ದಿ ನ್ಯೂ ಸ್ಕೂಲ್‌ನಲ್ಲಿರುವ ಇಂಡಿಯಾ ಚೈನಾ ಇನ್ಸ್ಟಿಟ್ಯೂಟ್‌ನ 20ನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಳ್ಳಲು ಅಪೂರ್ವಾನಂದ್ ಅವರು ರಜೆ ಕೋರಿದ್ದರು. ಅವರು ತಮ್ಮ ಈ ಅಮೆರಿಕ ಭೇಟಿಯ ವೇಳೆ, 'ದಿ ಯೂನಿವರ್ಸಿಟಿ ಅಂಡರ್ ಎ ಗ್ಲೋಬಲ್ ಅಥಾರಿಟೇರಿಯನ್ ರನ್' ಎಂಬ ವಿಷಯದ ಕುರಿತು ಉಪನ್ಯಾಸ ನೀಡಬೇಕಿತ್ತು ಎಂದು The Indian Express ಸುದ್ದಿ ಸಂಸ್ಥೆ ವರದಿ ಮಾಡಿದೆ.
ಆದರೆ, ಹಿಂದಿ ವಿಭಾಗದ ಪ್ರಾಧ್ಯಾಪಕರಾದ ಅಪೂರ್ವಾನಂದ್‌ರ ಪ್ರವಾಸದ ಅನುಮತಿಯನ್ನು ಪರಿಗಣಿಸುವುದಕ್ಕೂ ಮುನ್ನ, ಅವರು ತಮ್ಮ ಪ್ರಸ್ತಾವಿತ ಭಾಷಣದ ಪಠ್ಯವನ್ನು ಸಲ್ಲಿಸಬೇಕು ಎಂದು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಅವರಿಗೆ ತಾಕೀತು ಮಾಡಿತ್ತು. ಆದರೆ, ಅವರು ಆ ಸೂಚನೆಯನ್ನು ಪಾಲಿಸಲು ನಿರಾಕರಿಸಿದ್ದರಿಂದ, ಅವರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿಶ್ವವಿದ್ಯಾಲಯ ಅನುಮತಿ ನಿರಾಕರಿಸಿದೆ.
ನಾನು ವಿಶ್ವವಿದ್ಯಾಲಯದ ಆನ್‌ಲೈನ್ ಪೋರ್ಟಲ್ ನಲ್ಲಿ ರಜೆಗಾಗಿ 35 ದಿನಗಳಿಗಿಂತ ಮುಂಚಿತವಾಗಿಯೇ ಅರ್ಜಿ ಸಲ್ಲಿಸಿದ್ದರೂ, ಆ ಅರ್ಜಿಯು ರಿಜಿಸ್ಟ್ರಾರ್ ಬಳಿ ಒಂದು ತಿಂಗಳ ಕಾಲ ಬಾಕಿಯುಳಿದಿತ್ತು. ನಾನು ಅದರ ಕುರಿತು ವಿಚಾರಿಸಿದಾಗ, ನನ್ನ ರಜೆಯ ವಿಷಯವನ್ನು ಕೇಂದ್ರ ಶಿಕ್ಷಣ ಸಚಿವಾಲಯಕ್ಕೆ ಶಿಫಾರಸು ಮಾಡಲಾಗಿದೆ ಎಂದು ತಿಳಿಸಲಾಯಿತು ಎಂದು ಅಪೂರ್ವಾನಂದ್ ಆರೋಪಿಸಿದ್ದಾರೆ.
ಈ ಕುರಿತು ದಿಲ್ಲಿ ವಿಶ್ವವಿದ್ಯಾಲಯದ ಉಪ ಕುಲಪತಿಗಳಿಗೆ ಪತ್ರ ಬರೆದಿರುವ ಅಪೂರ್ವಾನಂದ್, ನನ್ನ ತಿಳಿವಳಿಕೆಯ ಪ್ರಕಾರ, ವಿಶ್ವವಿದ್ಯಾಲಯದ ಸಿಬ್ಬಂದಿಯೊಬ್ಬರಿಗೆ ರಜೆ ಮಂಜೂರು ಮಾಡಲು ಸರಕಾರದ ಅನುಮತಿ ಪಡೆಯುವುದು ಅಗತ್ಯ ಎಂಬ ಯಾವುದೇ ನಿಯಮವಿಲ್ಲ ಎಂದು ನಾನು ರಿಜಿಸ್ಟ್ರಾರ್‌ಗೆ ತಿಳಿಸಿದ್ದೆ ಎಂದು ಉಲ್ಲೇಖಿಸಿದ್ದಾರೆ.
ಈ ಕುರಿತು The Indian Express ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ವಿಶ್ವವಿದ್ಯಾಲಯದ ಹೆಸರೇಳಲಿಚ್ಛಿಸದ ಅಧಿಕಾರಿಯೊಬ್ಬರು, "ಅಂತಾರಾಷ್ಟ್ರೀಯ ಸನ್ನಿವೇಶಗಳ ಹಿನ್ನೆಲೆಯಲ್ಲಿ ಅಪೂರ್ವಾನಂದ್ ಅವರಿಗೆ ರಜೆ ಮಂಜೂರು ಮಾಡುವ ಕುರಿತು ಕೇಂದ್ರ ಸಚಿವಾಲಯವನ್ನು ಸಂಪರ್ಕಿಸುವ ಕ್ರಮ ಕೈಗೊಳ್ಳಲಾಯಿತು" ಎಂದು ಸ್ಪಷ್ಟನೆ ನೀಡಿದ್ದಾರೆ.
"ನಾವು ಸಾಮಾನ್ಯವಾಗಿ ರಜೆ ಮಂಜೂರು ಮಾಡಲು ಕೇಂದ್ರ ಶಿಕ್ಷಣ ಸಚಿವಾಲಯವನ್ನು ಸಂಪರ್ಕಿಸುವುದಿಲ್ಲ. ಆದರೆ, ಈ ವಿಷಯದಲ್ಲಿ ಅವರ ಸಲಹೆ ಪಡೆಯುವುದು ಉತ್ತಮ ಎಂದು ನಾವು ಭಾವಿಸಿದೆವು" ಎಂದೂ ಹೇಳಿರುವ ಅವರು, "ನಿಮ್ಮ ಭಾಷಣದ ಪಠ್ಯವನ್ನು ಹಂಚಿಕೊಳ್ಳಿ ಎಂದು ನಾವು ಅವರನ್ನು ಕೋರಿದೆವು. ಆದರೆ, ಅವರು ಅದಕ್ಕೆ ಒಪ್ಪಲಿಲ್ಲ" ಎಂದು ತಿಳಿಸಿದ್ದಾರೆ.