ಮಹಾರಾಷ್ಟ್ರದಲ್ಲಿ ಮತದಾರರ ಪಟ್ಟಿ ದುರ್ಬಳಕೆ ಕುರಿತ ರಾಹುಲ್ ಗಾಂಧಿ ಆರೋಪಕ್ಕೆ ಚುನಾವಣಾ ಆಯೋಗ ತಿರುಗೇಟು

Update: 2025-04-22 21:11 IST
ಮಹಾರಾಷ್ಟ್ರದಲ್ಲಿ ಮತದಾರರ ಪಟ್ಟಿ ದುರ್ಬಳಕೆ ಕುರಿತ ರಾಹುಲ್ ಗಾಂಧಿ ಆರೋಪಕ್ಕೆ ಚುನಾವಣಾ ಆಯೋಗ ತಿರುಗೇಟು

Photo credit: X/ANI

  • whatsapp icon

ಹೊಸದಿಲ್ಲಿ : ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮತದಾರರ ಪಟ್ಟಿಯನ್ನು ದುರುಪಯೋಗಪಡಿಸಲಾಗಿದೆ ಎಂಬ ರಾಹುಲ್ ಗಾಂಧಿಯ ಆರೋಪಕ್ಕೆ ಚುನಾವಣಾ ಆಯೋಗ ತಿರುಗೇಟು ನೀಡಿದೆ.

ಚುನಾವಣಾ ಆಯೋಗದ ಮೂಲಗಳ ಪ್ರಕಾರ, ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬೆಳಿಗ್ಗೆ 7ರಿಂದ ಸಂಜೆ 6ರ ನಡುವೆ 6,40,87,588 ಮತದಾರರು ಮತ ಚಲಾಯಿಸಿದ್ದಾರೆ. ಪ್ರತಿ ಗಂಟೆಗೆ ಸರಾಸರಿ 58 ಲಕ್ಷ ಮತಗಳು ಚಲಾವಣೆಯಾಗಿದೆ. ಇದರ ಪ್ರಕಾರ, ಕೊನೆಯ ಎರಡು ಗಂಟೆಗಳಲ್ಲಿ ಸುಮಾರು 1.16 ಕೋಟಿ ಮತದಾರರು ಮತ ಚಲಾಯಿಸಬಹುದಿತ್ತು. ಆದರೆ ಎರಡು ಗಂಟೆಗಳಲ್ಲಿ 65 ಲಕ್ಷ ಮತಗಳನ್ನು ಮಾತ್ರ ಚಲಾವಣೆಯಾಗಿದ್ದು ಸರಾಸರಿ ಮತದಾನಕ್ಕಿಂತ ಕಡಿಮೆಯಾಗಿದೆ ಎಂದು ತಿಳಿಸಿದೆ.

ಪ್ರತಿ ಮತಗಟ್ಟೆಯಲ್ಲಿ ಅಭ್ಯರ್ಥಿಗಳು ಅಥವಾ ರಾಜಕೀಯ ಪಕ್ಷಗಳು ಔಪಚಾರಿಕವಾಗಿ ನೇಮಿಸಿದ ಮತಗಟ್ಟೆ ಏಜೆಂಟರ ಸಮ್ಮುಖದಲ್ಲಿ ಮತದಾನ ನಡೆಯಿತು. ಕಾಂಗ್ರೆಸ್ ಅಭ್ಯರ್ಥಿಗಳಾಗಲಿ, ಅವರು ಮತಗಟ್ಟೆಯಲ್ಲಿ ನೇಮಿಸಿರುವ ಅಧಿಕೃತ ಏಜೆಂಟ್‌ಗಳಾಗಲಿ ಚುನಾವಣಾಧಿಕಾರಿಗಳು ಅಥವಾ ಚುನಾವಣಾ ವೀಕ್ಷಕರ ಮುಂದೆ ಪರಿಶೀಲನೆಯ ಸಮಯದಲ್ಲಿ ಯಾವುದೇ ರೀತಿಯ ಅಸಹಜ ಮತದಾನಕ್ಕೆ ಸಂಬಂಧಿಸಿದಂತೆ ಸಮರ್ಥ ಆರೋಪಗಳನ್ನು ಮಾಡಿಲ್ಲ ಎಂದು ಹೇಳಿದೆ.

ಮಹಾರಾಷ್ಟ್ರ ಸೇರಿದಂತೆ ಭಾರತದಲ್ಲಿನ ಮತದಾರರ ಪಟ್ಟಿಗಳನ್ನು ಜನತಾ ಪ್ರಾತಿನಿಧ್ಯ ಕಾಯಿದೆ-1950 ಮತ್ತು ಮತದಾರರ ನೋಂದಣಿ ನಿಯಮಗಳು-1960ರ ಅನುಸಾರವಾಗಿ ಸಿದ್ಧಪಡಿಸಲಾಗಿದೆ. ಕಾನೂನಿನ ಪ್ರಕಾರ, ಚುನಾವಣೆಗೆ ಮೊದಲು ಮತ್ತು ಅಥವಾ ಪ್ರತಿ ವರ್ಷಕ್ಕೊಮ್ಮೆ ಚುನಾವಣಾ ಪಟ್ಟಿಗಳ ವಿಶೇಷ ಪರಿಷ್ಕರಣೆ ನಡೆಸಲಾಗುತ್ತದೆ ಮತ್ತು ಕಾಂಗ್ರೆಸ್ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳಿಗೆ ಅಂತಿಮ ಪಟ್ಟಿಯ ಪ್ರತಿಯನ್ನು ನೀಡಲಾಗುತ್ತದೆ.

ಮಹಾರಾಷ್ಟ್ರ ಚುನಾವಣೆಯ ಸಂದರ್ಭದಲ್ಲಿ ಮತದಾರರ ಪಟ್ಟಿಗಳನ್ನು ಅಂತಿಮಗೊಳಿಸಿದ ನಂತರ 9,77,90,752 ಮತದಾರಲ್ಲಿ ಮೊದಲ ಮೇಲ್ಮನವಿ ಪ್ರಾಧಿಕಾರದ ಮುಂದೆ ಒಟ್ಟು 89 ಮೇಲ್ಮನವಿಗಳನ್ನು ಮಾತ್ರ ಸಲ್ಲಿಸಲಾಗಿದೆ. ಎರಡನೇ ಮೇಲ್ಮನವಿ ಪ್ರಾಧಿಕಾರದ ಮುಂದೆ ಕೇವಲ ಒಂದು ಮೇಲ್ಮನವಿ ಸಲ್ಲಿಸಲಾಯಿತು. ಆದ್ದರಿಂದ 2024ರಲ್ಲಿ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಮೊದಲು ಕಾಂಗ್ರೆಸ್ ಅಥವಾ ಯಾವುದೇ ಇತರ ರಾಜಕೀಯ ಪಕ್ಷಗಳಿಗೆ ಈ ಬಗ್ಗೆ ತಕರಾರು ಇರಲಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

1,00,427 ಮತಗಟ್ಟೆಗಳಲ್ಲಿ ಮತದಾರರ ಪಟ್ಟಿಗಳ ಪರಿಷ್ಕರಣೆ ಸಂದರ್ಭದಲ್ಲಿ 97,325 ಬೂತ್ ಮಟ್ಟದ ಅಧಿಕಾರಿಗಳು, 1,03,727 ಬೂತ್ ಮಟ್ಟದ ಏಜೆಂಟರನ್ನು ಎಲ್ಲಾ ರಾಜಕೀಯ ಪಕ್ಷಗಳು ನೇಮಕ ಮಾಡಿದ್ದು, ಅವರಲ್ಲಿ 27,099 ಕಾಂಗ್ರೆಸ್ ಏಜೆಂಟ್‌ಗಳಿದ್ದರು. ಆದ್ದರಿಂದ ಮಹಾರಾಷ್ಟ್ರದ ಮತದಾರರ ಪಟ್ಟಿಗಳ ಬಗ್ಗೆ ಎದ್ದಿರುವ ಈ ಆಧಾರರಹಿತ ಆರೋಪಗಳು ಅಪಚಾರವಾಗಿದೆ ಎಂದು ತಿಳಿಸಿವೆ.

ಎಲ್ಲಾ ಭಾರತೀಯ ಚುನಾವಣೆಗಳು ಕಾನೂನಿನ ಪ್ರಕಾರ ನಡೆಯುತ್ತವೆ. ಭಾರತದಲ್ಲಿ ನಡೆಯುವ ಚುನಾವಣೆ ಮತ್ತು ಅದರ ಪಾರದರ್ಶಕತೆಯು ಪ್ರಪಂಚದಾದ್ಯಂತ ವ್ಯಾಪಕವಾಗಿ ಮೆಚ್ಚುಗೆ ಪಡೆದಿದೆ. ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದು, ಮತದಾನ ಮತ್ತು ಎಣಿಕೆ ಸೇರಿದಂತೆ ಪ್ರತಿಯೊಂದು ಚುನಾವಣಾ ಪ್ರಕ್ರಿಯೆಯು ಸರಕಾರಿ ಸಿಬ್ಬಂದಿಯಿಂದ ನಡೆಸಲ್ಪಡುತ್ತದೆ ಮತ್ತು ಅದು ಕೂಡ ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಗಳಿಂದ ಮತಗಟ್ಟೆ ಮಟ್ಟದವರೆಗೆ ಅಧಿಕೃತವಾಗಿ ನೇಮಕಗೊಂಡ ಅಧಿಕೃತ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ನಡೆಯುತ್ತದೆ ಎಂದು ಇಡೀ ರಾಷ್ಟ್ರಕ್ಕೆ ತಿಳಿದಿದೆ.

ತಪ್ಪು ಮಾಹಿತಿ ಹರಡುವುದು ಕಾನೂನಿನ ಬಗೆಗಿನ ಅಗೌರವದ ಸಂಕೇತ ಮಾತ್ರವಲ್ಲ. ತಮ್ಮದೇ ರಾಜಕೀಯ ಪಕ್ಷದಿಂದ ನೇಮಕಗೊಂಡ ಸಾವಿರಾರು ಪ್ರತಿನಿಧಿಗಳಿಗೆ ಅಪಖ್ಯಾತಿ ತರುತ್ತದೆ. ಚುನಾವಣಾ ಸಮಯದಲ್ಲಿ ದಣಿವರಿಯದೆ ಪಾರದರ್ಶಕವಾಗಿ ಕೆಲಸ ಮಾಡುವ ಲಕ್ಷಗಟ್ಟಲೆ ಚುನಾವಣಾ ಸಿಬ್ಬಂದಿಗಳಲ್ಲಿ ನಿರಾಶೆಯನ್ನುಂಟುಮಾಡುತ್ತದೆ ಎಂದು ಹೇಳಿದೆ.

ಅಮೆರಿಕದ ಬೋಸ್ಟನ್‌ನಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಭಾರತದ ಚುನಾವಣಾ ಆಯೋಗ ರಾಜಿ ಮಾಡಿಕೊಂಡಿದೆ ಮತ್ತು ವ್ಯವಸ್ಥೆಯಲ್ಲಿ ಏನೋ ದೋಷವಿದೆ ಎಂದು ಹೇಳಿದ್ದರು.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ವಯಸ್ಕರ ಸಂಖ್ಯೆಗಿಂತ ಹೆಚ್ಚಿನ ಜನರು ಮತ ಚಲಾಯಿಸಿದ್ದಾರೆ. ಚುನಾವಣಾ ಆಯೋಗವು ಸಂಜೆ 5:30ಕ್ಕೆ ಅಂಕಿ-ಅಂಶಗಳನ್ನು ನೀಡಿದೆ. ಸಂಜೆ 5.30 ರಿಂದ 7.30ರ ನಡುವೆ 65 ಲಕ್ಷ ಮತದಾರರ ಮತದಾನದ ಅಂಕಿಅಂಶವನ್ನು ನಮಗೆ ನೀಡಿದೆ. ಇದು ಸಂಭವಿಸುವುದು ಅಸಾಧ್ಯ ಎಂದು ರಾಹುಲ್ ಗಾಂಧಿ ಹೇಳಿದ್ದರು.

ಓರ್ವ ಮತದಾರನಿಗೆ ಮತದಾನ ಮಾಡಲು 3 ನಿಮಿಷ ಬೇಕು, ಈಗೆ ನೋಡಿದರೆ ಮಧ್ಯರಾತ್ರಿ 2 ಗಂಟೆಯವರೆಗೆ ಮತದಾರರ ಸಾಲುಗಳು ಇರಬೇಕಿತ್ತು. ಆದರೆ ಇದು ಸಂಭವಿಸಲಿಲ್ಲ. ನಾವು ವೀಡಿಯೊ ದಾಖಲೆ ಕೇಳಿದಾಗ ಅವರು ನಿರಾಕರಿಸಿರುವುದು ಮಾತ್ರವಲ್ಲದೆ ಅವರು ಕಾನೂನನ್ನು ಬದಲಾಯಿಸಿದರು. ಇದರಿಂದ ಈಗ ನಮಗೆ ವೀಡಿಯೊ ದಾಖಲೆ ಕೇಳಲು ಅವಕಾಶವಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - siddik

contributor

Byline - ವಾರ್ತಾಭಾರತಿ

contributor

Similar News