ಜಾರ್ಖಂಡ್ ಸಚಿವರ ಕಾರ್ಯದರ್ಶಿಯ ನಿವಾಸದ ಮೇಲೆ ಈಡಿ ದಾಳಿ; ರೂ. 20 ಕೋಟಿ ವಶ

Update: 2024-05-06 05:52 GMT

Screengrab:X/@ANI

ರಾಂಚಿ: ಜಾರ್ಖಂಡ್ ಸಚಿವ ಅಲಂಗೀರ್ ಆಲಂ ಅವರ ಆಪ್ತ ಕಾರ್ಯದರ್ಶಿ ಸಂಜೀವ್ ಲಾಲ್ ನಿವಾಸ ಸೇರಿದಂತೆ ರಾಂಚಿಯ ಹಲವಾರು ಸ್ಥಳಗಳಲ್ಲಿ ಸೋಮವಾರ ಬೆಳಗ್ಗೆ ಜಾರಿ ನಿರ್ದೇಶನಾಲಯವು ದಾಳಿ ಪ್ರಾರಂಭಿಸಿದೆ. ಸಂಜೀವ್ ಲಾಲ್ ಅವರ ಮನೆ ಸಹಾಯಕನಿಂದ ಅಂದಾಜು ರೂ. 20 ಕೋಟಿಯಿಂದ ರೂ. 30 ಕೋಟಿಯ ಬೃಹತ್ ಮೊತ್ತದ ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಅಲಂಗೀರ್ ಆಲಂ ಅವರು ಜಾರ್ಖಂಡ್ ಸರಕಾರದ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದಾರೆ.

ನಗದು ಎಣಿಸಲು ನಿಯೋಜಿಸಲಾಗಿರುವ ನಗದು ಎಣಿಕೆ ಯಂತ್ರಗಳು ಇನ್ನೂ ನಗದು ಎಣಿಕೆಯನ್ನು ಮುಂದುವರಿಸಿರುವುದರಿಂದ ನಗದಿನ ಮೊತ್ತ ಮತ್ತಷ್ಟು ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಜಾರ್ಖಂಡ್ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿನ ಕೆಲವು ಯೋಜನೆಗಳ ಜಾರಿಯಲ್ಲಿ ನಡೆದಿದೆಯೆನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಾಳಿಗಳು ನಡೆದಿವೆ.

ಈ ಪ್ರಕರಣದ ಸಂಬಂಧ ಕಳೆದ ವರ್ಷದ ಫೆಬ್ರವರಿ ತಿಂಗಳಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯ ಮುಖ್ಯ ಎಂಜಿನಿಯರ್ ವಿರೇಂದ್ರ ಕೆ. ರಾಮ್ ಅವರನ್ನು ಬಂಧಿಸಲಾಗಿತ್ತು. ಬಿಹಾರ ಮತ್ತು ದಿಲ್ಲಿಯೊಂದಿಗೆ ರಾಂಚಿ, ಜಮ್ಷೆಡ್ ಪುರ್ ಹಾಗೂ ಜಾರ್ಖಂಡ್ ನ ಇನ್ನಿತರ ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯವು ಹಲವು ದಾಳಿಗಳನ್ನು ನಡೆಸಿದ ನಂತರ ಅವರ ಬಂಧನ ನಡೆದಿತ್ತು.

2019ರಲ್ಲಿ ವಿರೇಂದ್ರ ಕೆ. ರಾಮ್ ಅವರ ಕೈಕೆಳಗಿನ ಸಿಬ್ಬಂದಿಗಳಿಂದ ಭಾರಿ ಪ್ರಮಾಣದ ನಗದನ್ನು ವಶಪಡಿಸಿಕೊಳ್ಳಲಾಗಿತ್ತು. ನಂತರ ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿ ಪ್ರಕರಣವನ್ನು ದಾಖಲಿಸಿಕೊಂಡಿತ್ತು.

ಈ ನಡುವೆ, ಸಚಿವ ಅಲಂಗೀರ್ ಅಲಂ ಅವರನ್ನು ತಕ್ಷಣವೇ ವಶಕ್ಕೆ ಪಡೆದು, ನಗದಿನ ಕುರಿತು ಕಟ್ಟುನಿಟ್ಟಿನ ವಿಚಾರಣೆ ನಡೆಸಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಈ ಕುರಿತು ANI ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ಜಾರ್ಖಂಡ್ ಬಿಜೆಪಿ ವಕ್ತಾರ ಪ್ರತುಲ್ ಶಾ ಡಿಯೊ, ಇತ್ತೀಚಿನ ನಗದು ವಶವು ಕಾಂಗ್ರೆಸ್ ಕಪ್ಪು ಹಣ ವ್ಯವಹಾರದಲ್ಲಿ ತೊಡಗಿದೆ ಎಂಬುದನ್ನು ಸಾಬೀತು ಪಡಿಸಿದೆ ಎಂದು ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News