ತನ್ನ ಅಧಿಕಾರಿಯ ವಿರುದ್ಧದ ತನಿಖೆ ಸಿಬಿಐಗೆ ವರ್ಗಾಯಿಸುವಂತೆ ಕೋರಿ ಈಡಿ ಅರ್ಜಿ
ಹೊಸದಿಲ್ಲಿ: ಭ್ರಷ್ಟಚಾರದ ಆರೋಪದಲ್ಲಿ ತಮಿಳುನಾಡು ಜಾಗೃತ ಹಾಗೂ ಭ್ರಷ್ಟಾಚಾರ ವಿರೋಧಿ ನಿರ್ದೇಶನಾಲಯದಿಂದ ಬಂಧಿತರಾಗಿರುವ ತನ್ನ ಅಧಿಕಾರಿ ವಿರುದ್ಧದ ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸುವಂತೆ ಕೋರಿ ಜಾರಿ ನಿರ್ದೇಶನಾಲಯ ಸಲ್ಲಿಸಿದ ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಗುರುವಾರ ತಮಿಳುನಾಡು ಸರಕಾರಕ್ಕೆ ಸೂಚಿಸಿದೆ.
ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಹಾಗೂ ಕೆ.ವಿ. ವಿಶ್ವನಾಥನ್ ಅವರನ್ನು ಒಳಗೊಂಡ ಪೀಠ ತಮಿಳುನಾಡು ಸರಕಾರಕ್ಕೆ ನೋಟಿಸು ಜಾರಿ ಮಾಡಿದೆ ಹಾಗೂ ಎರಡು ವಾರಗಳ ಒಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ತಿಳಿಸಿದೆ.
ಭ್ರಷ್ಟಾಚಾರದ ಪ್ರಕರಣದಲ್ಲಿ ಸಂಗ್ರಹಿಸಲಾದ ಸಾಕ್ಷ್ಯಗಳನ್ನು ಮುಂದಿನ ವಿಚಾರಣೆಯ ಸಂದರ್ಭ ಸಲ್ಲಿಸುವಂತೆ ತಮಿಳುನಾಡು ಪೊಲೀಸರಿಗೆ ಪೀಠ ನಿರ್ದೇಶಿಸಿದೆ. ಇದಕ್ಕೆ ಜಾರಿ ನಿರ್ದೇಶನಾಲಯದ ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಪ್ರಕರಣದ ತನಿಖೆಗೆ ಸಂಬಂಧಿಸಿದ ಕಡತಗಳನ್ನು ಅವರು ತೆಗೆದುಕೊಂಡು ಹೋಗಿದ್ದಾರೆ ಎಂದು ತಿಳಿಸಿದರು.
ನ್ಯಾಯಮೂರ್ತಿ ಸೂರ್ಯ ಕಾಂತ್, ಪ್ರಕರಣದ ಮುಂದಿನ ವಿಚಾರಣೆಯ ವರೆಗೆ ತನಿಖೆಯನ್ನು ಮುಂದುವರಿಸದಂತೆ ತಮಿಳುನಾಡು ಸರಕಾರದ ಪರವಾಗಿ ಹಾಜರಾಗಿದ್ದ ಹಿರಿಯ ನ್ಯಾಯವಾದಿಗಳಾದ ಕಪಿಲ್ ಸಿಬಲ್ ಹಾಗೂ ಅಮಿತ್ ಆನಂದ್ ತಿವಾರಿ ಅವರಿಗೆ ಸೂಚಿಸಿದರು.