ಏಕನಾಥ್ ಶಿಂದೆ ಉಪಮುಖ್ಯಮಂತ್ರಿ ಹುದ್ದೆಯನ್ನು ಒಪ್ಪುವುದಿಲ್ಲ: ಬಿಜೆಪಿಗೆ ಶಿವಸೇನೆ ಸಂದೇಶ

Update: 2024-11-27 10:36 GMT

ಏಕನಾಥ್ ಶಿಂದೆ (PTI)

ಮುಂಬೈ: ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ನಿಗೂಢತೆ ಮುಂದುವರಿದಿರುವ ಬೆನ್ನಿಗೇ, ಏಕನಾಥ್ ಶಿಂದೆ ಉಪ ಮುಖ್ಯಮಂತ್ರಿ ಹುದ್ದೆಯನ್ನು ಅಂಗೀಕರಿಸುವುದಿಲ್ಲ ಎಂಬ ಸಂದೇಶವನ್ನು ಶಿವಸೇನೆ ಬುಧವಾರ ಬಿಜೆಪಿಗೆ ರವಾನಿಸಿದೆ. ನವೆಂಬರ್ 20ರಂದು ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮಹಾಯುತಿ ಮೈತ್ರಿಕೂಟವು ಪ್ರಚಂಡ ಜಯ ಗಳಿಸಿದ್ದು ಕೇವಲ ಏಕನಾಥ್ ಶಿಂದೆ ಕಾರಣಕ್ಕೆ ಎಂದು ಶಿವಸೇನೆ ನಾಯಕರೊಬ್ಬರು ಹೇಳಿದ್ದಾರೆ.

“ವಿಧಾನಸಭಾ ಚುನಾವಣೆಯನ್ನು ಏಕನಾಥ್ ಶಿಂದೆ ಹೆಸರಲ್ಲಿ ಎದುರಿಸಲಾಯಿತು. ಅವರು ಮತ್ತೆ ಮುಖ್ಯಮಂತ್ರಿಯಾಗಿ ಮರಳಲು ಯೋಗ್ಯರಾಗಿದ್ದಾರೆ. ಅವರು ಉಪ ಮುಖ್ಯಮಂತ್ರಿ ಹುದ್ದೆಯನ್ನು ಒಪ್ಪುವುದಿಲ್ಲ” ಎಂದು ಶಿವಸೇನೆ ನಾಯಕ ಸಂಜಯ್ ಶಿರ್ಸಾತ್ India Today TVಗೆ ತಿಳಿಸಿದ್ದಾರೆ.

“ಒಂದು ವೇಳೆ ಏಕನಾಥ್ ಶಿಂದೆಯನ್ನು ಮುಖ್ಯಮಂತ್ರಿಯನ್ನಾಗಿಸಬೇಕು ಎಂಬ ನಮ್ಮ ಬೇಡಿಕೆಯನ್ನು ಬಿಜೆಪಿ ಪೂರೈಸಿದರೆ, ಜನರಿಗೆ ಒಳ್ಳೆಯ ಸಂದೇಶ ರವಾನೆಯಾಗಲಿದೆ. ಒಂದು ವೇಳೆ ಶಿಂದೆ ಮುಖ್ಯಮಂತ್ರಿಯಾದರೆ, ನಮಗೆ ಲಾಭವಾಗಲಿದೆ ಎಂಬುದನ್ನು ಭವಿಷ್ಯದ ಚುನಾವಣೆಗಳು ಸಾಬೀತು ಪಡಿಸಲಿವೆ” ಎಂದೂ ಅವರು ಹೇಳಿದ್ದಾರೆ.

ಮಹಾಯುತಿ ಮೈತ್ರಿಕೂಟದಲ್ಲಿ ಬಿಜೆಪಿ, ಶಿಂದೆ ನೇತೃತ್ವದ ಶಿವಸೇನೆ ಹಾಗೂ ಅಜಿತ್ ಪವಾರ್ ನೇತೃತ್ವದ ಎನ್ಸಿಪಿಗಳಿವೆ. 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮಹಾಯತಿ ಮೈತ್ರಿಕೂಟವು 230 ಸ್ಥಾನಗಳಲ್ಲಿ ಜಯ ಗಳಿಸಿದ್ದು, ಈ ಪೈಕಿ ಬಿಜೆಪಿ 132, ಶಿವಸೇನೆ 57 ಹಾಗೂ ಎನ್ಸಿಪಿ 41 ಸ್ಥಾನಗಳನ್ನು ಗಳಿಸಿವೆ.

Full View

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News