ಮಹಾರಾಷ್ಟ್ರ ಮತದಾನ ಪ್ರಮಾಣದಲ್ಲಿ ಕೈವಾಡ : ಚುನಾವಣಾ ದತ್ತಾಂಶ ವಿಜ್ಞಾನಿ ಪ್ಯಾರೆಲಾಲ್ ಗರ್ಗ್ ಆರೋಪ

Update: 2024-11-29 12:48 GMT

ಸಾಂದರ್ಭಿಕ ಚಿತ್ರ | PTI 

ಹೊಸದಿಲ್ಲಿ: ʼದಿ ಫೆಡರಲ್‌ʼನ ಯೂಟ್ಯೂಬ್ ಕಾರ್ಯಕ್ರಮ ‘ಕ್ಯಾಪಿಟಲ್ ಬೀಟ್’ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಚುನಾವಣಾ ದತ್ತಾಂಶ ವಿಜ್ಞಾನಿ ಡಾ. ಪ್ಯಾರೆಲಾಲ್ ಗರ್ಗ್ ಅವರು ಇತ್ತೀಚಿಗೆ ಮುಕ್ತಾಯಗೊಂಡ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳಿಗೆ ಸಂಬಂಧಿಸಿದಂತೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಕನಿಷ್ಠ 92 ಕ್ಷೇತ್ರಗಳಲ್ಲಿ ಮತಗಳಲ್ಲಿ ವ್ಯತ್ಯಾಸಗಳು ಕಂಡು ಬಂದಿದ್ದು, ಪ್ರತಿ ಕ್ಷೇತ್ರದಲ್ಲಿ ಸರಾಸರಿ 26,500 ಮತಗಳನ್ನು ಹೆಚ್ಚುವರಿಯಾಗಿ ಸೇರಿಸಲಾಗಿದೆ ಎಂದು ಪ್ರತಿಪಾದಿಸಿರುವ ಗರ್ಗ್, ಈ ವ್ಯತ್ಯಾಸಗಳಿಂದ ಮುಖ್ಯವಾಗಿ ಆಡಳಿತಾರೂಢ ಎನ್‌ಡಿಎಗೆ ಲಾಭವಾಗಿದೆ ಎಂದು ಹೇಳಿದ್ದಾರೆ.

ಹಿರಿಯ ಚುನಾವಣಾ ವಿಶ್ಲೇಷಕರಾಗಿರುವ ಗರ್ಗ್ ವಿವರವಾದ ಅಂಕಿಅಂಶ ವಿಶ್ಲೇಷಣೆಯನ್ನು ಮುಂದಿರಿಸಿದ್ದು,ಚುನಾವಣಾ ಆಯೋಗವು ಮತದಾನ ಮತ್ತು ಮತ ಎಣಿಕೆ ಪ್ರಕ್ರಿಯೆಯಲಿ ಪಾರದರ್ಶಕತೆಯನ್ನು ಖಚಿತಪಡಿಸುವಲ್ಲಿ ವಿಫಲಗೊಂಡಿದೆ ಎಂದು ಪ್ರತಿಪಾದಿಸಿದ್ದಾರೆ.

ಗರ್ಗ್ ಚುನಾವಣಾ ಆಯೋಗದ ವಿರುದ್ಧ ಮಾಡಿರುವ ಆರೋಪಗಳು:

ಚುನಾವಣಾ ಆಯೋಗವು ಅಸಮಂಜಸ ದತ್ತಾಂಶಗಳನ್ನು ಒದಗಿಸಿದೆ ಎಂದು ಆರೋಪಿಸಿರುವ ಗರ್ಗ್,ಮತದಾನದ ದಿನಾಂಕದಂದು ಸಂಜೆ ಐದು ಗಂಟೆಗೆ ಮತ್ತು ರಾತ್ರಿ 11:30ಕ್ಕೆ ಬಿಡುಗಡೆಗೊಳಿಸಲಾಗಿದ್ದ ಶೇಕಡಾವಾರು ಮತದಾನ ಪ್ರಮಾಣಗಳ ನಡುವಿನ ವ್ಯತ್ಯಾಸಗಳನ್ನು ಎತ್ತಿ ತೋರಿಸಿದ್ದಾರೆ. ಸಂಖ್ಯೆಗಳಲ್ಲಿ ಈ ಬದಲಾವಣೆಗಳು ಸಂಭಾವ್ಯ ತಿರುಚುವಿಕೆಯನ್ನು ಸೂಚಿಸುತ್ತಿವೆ ಎಂದು ಅವರು ವಾದಿಸಿದ್ದಾರೆ.

ಚುನಾವಣಾ ಆಯೋಗವು ಒದಗಿಸಿರುವ ದತ್ತಾಂಶಗಳು ‘ಪ್ರಾಥಮಿಕ ದತ್ತಾಂಶ (ಮತದಾನದ ಕಚ್ಚಾ ಅಂಕಿಅಂಶಗಳು)’ಗಳಲ್ಲ, ಆದರೆ ಸಂಸ್ಕರಿಸಲಾದ, ಒಟ್ಟು ಅಂಕಿಅಂಶಗಳಾಗಿದ್ದು, ಇವುಗಳ ಪರಿಶೀಲನೆ ಮತು ವಿಶ್ಲೇಷಣೆ ಕಷ್ಟ ಎಂದು ಗರ್ಗ್ ಬೆಟ್ಟು ಮಾಡಿದ್ದಾರೆ.

ಮತಗಳಲ್ಲಿ ಅನಿಯಮಿತ ಹೆಚ್ಚಳವನ್ನು ಆರೋಪಿಸಿರುವ ಗರ್ಗ್, ಮಹಾರಾಷ್ಟ್ರದಲ್ಲಿ ಸಂಜೆ ಐದು ಗಂಟೆಯ ನಂತರ ಮತದಾನದ ಶೇಕಡಾವಾರು ಪ್ರಮಾಣದಲ್ಲಿ ಶೇ.7.83ರಷ್ಟು ಏರಿಕೆಯಾಗಿತ್ತು,ಇದು ಅದೇ ದಿನ ಜಾರ್ಖಂಡ್‌ನಲ್ಲಿ ಎರಡನೇ ಹಂತದ ಚುನಾವಣೆಯಲ್ಲಿ ಕಂಡು ಬಂದಿದ್ದ ಶೇ.0.86ರಷ್ಟು ಏರಿಕೆಗೆ ವ್ಯತಿರಿಕ್ತವಾಗಿದೆ. ಇದು ಮಹಾರಾಷ್ಟ್ರದಾದ್ಯಂತ ಸುಮಾರು 76 ಲ.ಹೆಚ್ಚುವರಿ ಮತಗಳ ಸೇರ್ಪಡೆಗೆ ಕಾರಣವಾಗಿದ್ದು,ಎನ್‌ಡಿಎ ಪರವಾಗಿ ಗಣನೀಯವಾಗಿ ಫಲಿತಂಶಗಳನ್ನು ತಿರುಚಿತ್ತು ಎಂದು ಹೇಳಿದ್ದಾರೆ.

ಮಹಾರಾಷ್ಟ್ರದ ಒಟ್ಟು 288 ಸ್ಥಾನಗಳ ಪೈಕಿ ಕನಿಷ್ಠ 100 ಸ್ಥಾನಗಳನ್ನು ಮತದಾನದ ಪ್ರಮಾಣದಲ್ಲಿ ನಡೆಸಲಾದ ಕೈವಾಡದಿಂದ ಗೆಲ್ಲಲಾಗಿದೆ ಎಂದು ತೋರಿಸುವ ಪುರಾವೆಗಳನ್ನೂ ಗರ್ಗ್ ಒದಗಿಸಿದ್ದಾರೆ. ಅನೇಕ ಪ್ರಕರಣಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳ ಗೆಲುವಿನ ಅಂತರ ಹೆಚ್ಚುವರಿಯಾಗಿ ಸೇರ್ಪಡೆಗೊಳಿಸಲಾಗಿದ್ದ ಮತಗಳ ಸಂಖ್ಯೆಗಿಂತ ಕಡಿಮೆಯಾಗಿತ್ತು ಎಂದಿರುವ ಅವರು,ಉದಾಹರಣೆಗೆ ಔರಂಗಾಬಾದ್ ಕ್ಷೇತ್ರದಲ್ಲಿ ಗೆಲುವಿನ ಅಂತರ ಸುಮಾರು 18,000 ಮತಗಳಾಗಿದ್ದು,ಎಣಿಕ ಸಂದರ್ಭದಲ್ಲಿ ಸುಮಾರು 23,000 ಮತಗಳನ್ನು ಸೇರಿಸಲಾಗಿತ್ತು ಎಂದು ಹೇಳಿದ್ದಾರೆ.

ಈ ವ್ಯತ್ಯಾಸಗಳು ಯಾದ್ರಚ್ಛಿಕವಲ್ಲ,ಆದರೆ ವ್ಯವಸ್ಥಿತವಾಗಿದ್ದವು. ಆಡಳಿತ ಪಕ್ಷದ ಅನುಕೂಲಕ್ಕೆ ತಕ್ಕಂತೆ ದತ್ತಾಂಶಗಳನ್ನು ಸಿದ್ಧಪಡಿಸಿದ್ದಂತೆ ಕಾಣುತ್ತಿದೆ ಎಂದಿದ್ದಾರೆ.

ಇವಿಎಂ ಸಮಗ್ರತೆಯ ಬಗ್ಗೆ ಕಳವಳ:

ವಿದ್ಯುನ್ಮಾನ ಮತದಾನ ಯಂತ್ರ(ಇವಿಎಂ)ಗಳ ವಿಶ್ವಾಸಾರ್ಹತೆಯನ್ನೂ ಪ್ರಶ್ನಿಸಿರುವ ಗರ್ಗ್,ಯಂತ್ರಗಳು ಸ್ವತಃ ಸುರಕ್ಷಿತವಾಗಿವೆ,ಆದರೆ ಸುತ್ತಲಿನ ಪ್ರಕ್ರಿಯೆಗಳಲ್ಲಿ ಕೈವಾಡಗಳನ್ನು ನಡೆಸಲು ಅವಕಾಶವಿದೆ ಎಂದಿದ್ದಾರೆ. ಮತದಾನದ ಅಂತ್ಯದಲ್ಲಿ ಘೋಷಿಸಲಾಗಿದ್ದ ಮತಗಳ ಪ್ರಮಾಣ ಎಣಿಕೆ ಸಂದರ್ಭದಲ್ಲಿ ಇವಿಎಮ್‌ಗಳಿಂದ ಮರುಪಡೆಯಲಾದ ಮತಗಳ ಸಂಖ್ಯೆಯೊಂದಿಗೆ ತಾಳೆಯಾಗದ ನಿದರ್ಶನಗಳನ್ನು ಅವರು ಉಲ್ಲೇಖಿಸಿದ್ದಾರೆ.

ಚುನಾವಣಾ ಆಯೋಗವು ಹೇಳಿಕೊಂಡಿರುವಂತೆ ಇವಿಎಮ್‌ಗಳು ವಿಶ್ವಾಸಾರ್ಹವಾಗಿದ್ದರೆ ಮತಗಳಲ್ಲಿ ಹಠಾತ್ ಏರಿಕೆ ಮತ್ತು 92 ಕ್ಷೇತ್ರಗಳಲ್ಲಿ ಮತಗಳು ತಾಳೆಯಾಗದಿರುವುದನ್ನು ಅದು ಹೇಗೆ ವಿವರಿಸುತ್ತದೆ ಎಂದು ಪ್ರಶ್ನಿಸಿರುವ ಗರ್ಗ್,ಇದು ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ಸಾರ್ವಜನಿಕರ ನಂಬಿಕೆಯನ್ನು ಕುಂದಿಸುತ್ತದೆ ಎಂದಿದ್ದಾರೆ.

ನ್ಯಾಯಾಂಗದ ಪಾತ್ರ ಮತ್ತು ಸಾರ್ವಜನಿಕ ಪ್ರತಿಕ್ರಿಯೆ

ನ್ಯಾಯಾಂಗದ ಕುರಿತು ನಿರಾಶೆ ವ್ಯಕ್ತಪಡಿಸಿರುವ ಗರ್ಗ್, ಮತದಾನದ ಅವಧಿ ಮುಗಿದ ನಂತರ ಮತಗಟ್ಟೆಗಳ ವೀಡಿಯೊ ದಾಖಲೀಕರಣ ಸೇರಿದಂತೆ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನಗಳನ್ನು ಚುನಾವಣಾ ಆಯೋಗವು ಪಾಲಿಸಿಲ್ಲ ಎನ್ನುವುದನ್ನು ಗಮನಕ್ಕೆ ತೆಗೆದುಕೊಳ್ಳಲು ನ್ಯಾಯಾಂಗವು ವಿಫಲಗೊಂಡಿದೆ ಎಂದು ಆರೋಪಿಸಿದರು. ನ್ಯಾಯಾಂಗವು ಚುನಾವಣಾ ಆಯೋಗದ ಪರವಾಗಿರುವಂತಿದೆ ಮತ್ತು ಇದು ಚುನಾವಣಾ ವ್ಯವಸ್ಥೆಯಲ್ಲಿ ವಿಶ್ವಾಸವನ್ನು ಇನ್ನಷ್ಟು ಕುಂದಿಸುತ್ತದೆ ಎಂದಿದ್ದಾರೆ.

ಈ ಆರೋಪಗಳ ಹಿನ್ನೆಲೆಯಲ್ಲಿ ಸಾಮೂಹಿಕ ಸಾರ್ವಜನಿಕ ಕ್ರಮಕ್ಕೆ ಕರೆ ನೀಡಿರುವ ಗರ್ಗ್,ಉತ್ತರದಾಯಿತ್ವಕ್ಕಾಗಿ ಒತ್ತಾಯಿಸಲು ಜನರು ಬೀದಿಗಿಳಿಯಬೇಕಿದೆ. ಇದು ಕೇವಲ ಒಂದು ಚುನಾವಣೆಯ ವಿಷಯವಲ್ಲ,ಇದು ಪ್ರಜಾಪ್ರಭುತ್ವದ ರಕ್ಷಣೆಯ ಕುರಿತಾಗಿದೆ ಎಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News