ಗ್ರಾಮಸ್ಥರು ಎಸೆದ ಬೆಂಕಿ ಚೆಂಡು, ಮೊಳೆಯುಕ್ತ ರಾಡ್ ತಗುಲಿ ಆನೆ ಸಾವು

Update: 2024-08-18 02:40 GMT

ಕೊಲ್ಕತ್ತಾ: ಕಾಡುಪ್ರಾಣಿಗಳನ್ನು ಓಡಿಸಲು ಗ್ರಾಮಸ್ಥರು ಸಾಮಾನ್ಯವಾಗಿ ಬಳಸುವ ನಿಷೇಧಿತ ಬೆಂಕಿ ಚೆಂಡು, ಮೊಳೆಯುಕ್ತ ರಾಡ್ ತಗುಲಿ ಆನೆ ಮೃತಪಟ್ಟಿರುವ ಘಟನೆ ಪಶ್ಚಿಮ ಬಂಗಾಳದ ಝಾರ್ ಗ್ರಾಮ್ ಜಿಲ್ಲೆಯಲ್ಲಿ ಗುರುವಾರ ನಡೆದಿದೆ. ಶನಿವಾರ ಸಂಜೆ ಈ ಘಟನೆಯನ್ನು ಪರಿಸರ ಸಂರಕ್ಷಣಾ ಕಾರ್ಯಕರ್ತೆ ಪ್ರೇರಣಾ ಸಿಂಗ್ ಬಿಂದ್ರಾ ಆನ್ ಲೈನ್ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ.

ಎರಡು ಮರಿಗಳು ಸೇರಿದಂತೆ ಆರು ಆನೆಗಳು ಗುರುವಾರ ಮುಂಜಾನೆ ಗೋಡೆಗಳನ್ನು ಧ್ವಂಸಗೊಳಿಸಿ ರಾಜ್ ಕಾಲೇಜು ಕಾಲೋನಿಗೆ ದಾಳಿ ಇಟ್ಟವು. ಕೆಲ ಗಂಟೆಗಳ ಬಳಿಕ ಈ ಹಿಂಡಿನಲ್ಲಿದ್ದ ಒಂದು ಆನೆ ಕಾಲೋನಿಯ ವೃದ್ಧರೊಬ್ಬರನ್ನು ಕೊಂದು ಹಾಕಿದೆ. ಆನೆಯ ರಂಪಾಟ ಹೆಚ್ಚಿದಾಗ ಕಬ್ಬಿಣದ ರಾಡ್ ಹಾಗೂ ಉರಿಯುವ ದೊಂದಿಯೊಂದಿಗೆ 'ಹುಲ್ಲಾ' ತಂಡ ಆಗಮಿಸಿತು. ಹುಲ್ಲಾ ತಂಡದ ಕಾರ್ಯಾಚರಣೆ ಬಗ್ಗೆ ಅರಣ್ಯ ಇಲಾಖೆಗೆ ಸಂಪೂರ್ಣ ಮಾಹಿತಿ ತಿಳಿದಿತ್ತು ಎನ್ನುವುದು ಅವರ ವಾದ.

ಹುಲ್ಲಾ ತಂಡವೆಂದರೆ, ಆನೆಗಳನ್ನು ಗದ್ದೆಯಿಂದ ಓಡಿಸುವ ತಂಡ. ಒಂದು ತುದಿಯಲ್ಲಿ ಮೊಳೆಗಳನ್ನು ಜೋಡಿಸಲಾದ ಕಬ್ಬಿಣದ ರಾಡ್ ಗೆ ಬೆಂಕಿ ಚೆಂಡು ಕಟ್ಟಿ ಎಸೆಯುವ ತಂಡ. ಈ ಕ್ರಮ ಪಶ್ಚಿಮ ಬಂಗಾಳದಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದ್ದು, ಬಿಂದ್ರಾ ಮತ್ತು ಇತರ ಪರಿಸರ ಹೋರಾಟಗಾರರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ 2018ರಲ್ಲೇ ಈ ವಿಧಾನವನ್ನು ನಿಷೇಧಿಸಿತ್ತು.

ಧರ್ಮಪುರ ಫುಟ್ಬಾಲ್ ಮೈದಾನದಲ್ಲಿ ಹಲವು ಬಾರಿ ಈ ಆನೆಗೆ ಈ ಆಯುಧ ತಗುಲಿತ್ತು. ಅರಣ್ಯ ಇಲಾಖೆ ಇದಕ್ಕೆ ಮಂಪರು ಚುಚ್ಚುಮದ್ದನ್ನು ಕೂಡಾ ನೀಡಿತ್ತು. ಬಳಿಕ ಅಧಿಕಾರಿಗಳು ಇದನ್ನು ಬಿಟ್ಟಾಗ ಆ ಹೆಣ್ಣಾನೆಗೆ ನಡೆಯಲೂ ಸಾಧ್ಯವಾಗುತ್ತಿರಲಿಲ್ಲ. ಅಂದು ಮುಂಜಾನೆ ವೃದ್ಧೆಯನ್ನು ಅದೇ ಆನೆ ಕೊಂದಿತ್ತೇ ಎನ್ನುವುದು ದೃಢಪಟ್ಟಿಲ್ಲ. ಹುಲ್ಲಾ ತಂಡ ಎಸೆದ ಒಂದು ಬೆಂಕಿ ಚೆಂಡುಯುಕ್ತ ಮೊಳೆ ಹೊಂದಿದ ರಾಡ್ ಆನೆಗೆ ತಗುಲಿ ಅದರ ಬೆನ್ನೆಲುಬಿಗೆ ಹಾನಿಯಾಗಿದೆ ಎಂದು ಪರಿಸರವಾದಿಯೊಬ್ಬರು ಹೇಳಿದ್ದಾರೆ.

ಎಂಟು ಗಂಟೆ ವಿಳಂಬವಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಆನೆಯನ್ನು ಚಿಕಿತ್ಸೆಗೆ ಒಯ್ದಿದ್ದಾರೆ. ಗಾಯಗಳಿಂದಾಗಿ ಶನಿವಾರ ಮುಂಜಾನೆ ಆನೆ ಮೃತಪಟ್ಟಿದೆ ಎನ್ನುವುದು ಅವರ ವಾದ. ಅಧಿಕಾರಿಗಳು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News