"EVM ಬಗ್ಗೆ ಎಲಾನ್ ಮಸ್ಕ್ ಕೂಡಾ ಕಳವಳ ವ್ಯಕ್ತಪಡಿಸಿದ್ದಾರೆ": ಶಿವಸೇನೆಯ ರವೀಂದ್ರ ವಾಯ್ಕರ್ ಗೆಲುವು ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ
ಮುಂಬೈ: ವಾಯುವ್ಯ ಮುಂಬೈ ಲೋಕಸಭಾ ಕ್ಷೇತ್ರದಿಂದ ಶಿವಸೇನೆಯ ಅಭ್ಯರ್ಥಿ ರವೀಂದ್ರ ವಾಯ್ಕರ್ ಗೆಲುವನ್ನು ಪ್ರಶ್ನಿಸಿ ಆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಭರತ್ ಖಿಮ್ಜಿ ಶಾ ಎಂಬ ಅಭ್ಯರ್ಥಿಯು ಬಾಂಬೆ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಮತ ಎಣಿಕೆಯ ಸಂದರ್ಭದಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿರುವ ಶಾ, ಮತ ಎಣಿಕೆಯಲ್ಲಿನ ಪಾರದರ್ಶಕತೆ ಕುರಿತು ಹಲವು ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ. ಹೀಗಾಗಿ ರವೀಂದ್ರ ವಾಯ್ಕರ್ ಅವರ ಗೆಲುವನ್ನು ಅಮಾನ್ಯಗೊಳಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ಶಾ ಈ ಅರ್ಜಿಯನ್ನು ವಕೀಲ ಅಸೀಂ ಸರೋದೆ ಮೂಲಕ ಸಲ್ಲಿಸಿದ್ದಾರೆ.
“ಇದೇ ಪ್ರಥಮ ಬಾರಿಗೆ ಈ ಘಟನೆಯಿಂದ ಇವಿಎಂ ಮೂಲಕ ನಡೆಸಲಾಗಿರುವ ನಿರ್ದಿಷ್ಟ ಸ್ವರೂಪದ ಅಕ್ರಮಗಳು ಬೆಳಕಿಗೆ ಬಂದಿವೆ. ಈ ಅಕ್ರಮಗಳನ್ನು ಉಕ್ಕಿನ ಹಿಡಿತದಿಂದ ನಿಭಾಯಿಸಬೇಕಿದೆ. ಈ ವಿಷಯವು ಭಾರತದಾದ್ಯಂತ ಮಾತ್ರ ಚರ್ಚೆಯಾಗುತ್ತಿಲ್ಲ. ಬದಲಿಗೆ ಎಲಾನ್ ಮಸ್ಕ್ ಕೂಡಾ ಇತ್ತೀಚೆಗೆ ಎಕ್ಸ್ ಸಾಮಾಜಿಕ ಪೋಸ್ಟ್ ನಲ್ಲಿ ಇವಿಎಂ ಅಪಾಯಗಳ ಕುರಿತು ಬೆಳಕು ಚೆಲ್ಲಿದ್ದಾರೆ” ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.
ಈ ಅರ್ಜಿಯನ್ನು ಜೂನ್ 28ರಂದು ವಿಭಾಗೀಯ ನ್ಯಾಯಪೀಠವು ವಿಚಾರಣೆ ನಡೆಸಲಿದೆ ಎಂದು ವರದಿಯಾಗಿದೆ.