ಆಕಸ್ಮಿಕವಾಗಿ ಕಾಣಿಕೆ ಹುಂಡಿಗೆ ಬಿದ್ದ ಭಕ್ತರೊಬ್ಬರ ಐಫೋನ್ : ಹಿಂದಿರುಗಿಸಲು ನಿರಾಕರಿಸಿದ ದೇವಸ್ಥಾನದ ಸಿಬ್ಬಂದಿಗಳು

Update: 2024-12-21 14:12 GMT

ಸಾಂದರ್ಭಿಕ ಚಿತ್ರ

ಚೆನ್ನೈ: ದೇವಸ್ಥಾನಕ್ಕೆ ಭೇಟಿ ನೀಡಿದ್ದಾಗ, ಆಕಸ್ಮಿಕವಾಗಿ ಹುಂಡಿಗೆ ಬಿದ್ದಿದ್ದ ಭಕ್ತರೊಬ್ಬರ ಐಫೋನ್ ಅನ್ನು ಮರಳಿಸಲು ದೇವಸ್ಥಾನದ ಸಿಬ್ಬಂದಿಗಳು ನಿರಾಕರಿಸಿರುವ ಘಟನೆ ಚೆನ್ನೈನ ತಿರುಪೊರೂರ್ ಬಳಿಯ ಅರುಳ್ ಮಿಗು ಕಂದಸ್ವಾಮಿ ದೇವಸ್ಥಾನದಲ್ಲಿ ನಡೆದಿದೆ ಎಂದು ವರದಿಯಾಗಿದೆ.

ವಿನಾಯಗಪುರಂ ನಿವಾಸಿಯಾದ ದಿನೇಶ್ ಎಂಬುವವರು ಅರುಳ್ ಮಿಗು ಕಂದಸ್ವಾಮಿ ದೇವಸ್ಥಾನಕ್ಕೆ ಕಳೆದ ತಿಂಗಳು ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ, ಹುಂಡಿಗೆ ಕಾಣಿಕೆ ಹಾಕಲು ದುಡ್ಡನ್ನು ಜೇಬಿನಿಂದ ಹೊರ ತೆಗೆಯುವಾಗ ಅವರ ಐಫೋನ್ ಆಕಸ್ಮಿಕವಾಗಿ ಹುಂಡಿ(ಕಾಣಿಕೆ ಡಬ್ಬಿ)ಗೆ ಬಿದ್ದಿತ್ತು. ಈ ಸಂಗತಿಯನ್ನು ಅವರು ದೇವಸ್ಥಾನದ ಸಿಬ್ಬಂದಿಗಳ ಗಮನಕ್ಕೆ ತಂದಿದ್ದಾರೆ. ಆದರೆ, ಹುಂಡಿಗೆ ಬಿದ್ದಿದ್ದ ಐಫೋನ್ ಅನ್ನು ಮರಳಿಸಲು ನಿರಾಕರಿಸಿರುವ ದೇವಸ್ಥಾನದ ಸಿಬ್ಬಂದಿಗಳು, “ಅದು ದೇವರ ಸ್ವತ್ತು” ಎಂದು ಅವರ ಮನವಿಯನ್ನು ತಳ್ಳಿ ಹಾಕಿದ್ದಾರೆ. ಇದರೊಂದಿಗೆ, ಸಂಪ್ರದಾಯದ ಪ್ರಕಾರ, ಎರಡು ತಿಂಗಳಿಗೆ ಒಮ್ಮೆ ಮಾತ್ರ ಹುಂಡಿಯನ್ನು ತೆರೆಯಲಾಗುತ್ತದೆ ಎಂದು ಅವರು ಸಮಜಾಯಿಷಿ ನೀಡಿದ್ದಾರೆ.

ಇದರ ಬೆನ್ನಿಗೇ, ದಿನೇಶ್ ಅವರು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಅಧಿಕಾರಿಗಳಿಗೆ ಈ ಕುರಿತು ದೂರು ದಾಖಲಿಸಿದ್ದು, ಹುಂಡಿಯನ್ನು ತೆರೆಯುವಂತೆ ದೇವಸ್ಥಾನದ ಸಿಬ್ಬಂದಿಗಳಿಗೆ ಸೂಚನೆ ನೀಡಿ ಎಂದು ಮನವಿ ಮಾಡಿದ್ದಾರೆ.

ಶುಕ್ರವಾರ, ದೇವಸ್ಥಾನದ ಸಿಬ್ಬಂದಿಗಳು ಹುಂಡಿಯನ್ನು ತೆರೆದಿದ್ದಾರೆ. ಕೂಡಲೇ ದಿನೇಶ್ ತಮ್ಮ ಐಫೋನ್ ಅನ್ನು ತೆಗೆದುಕೊಳ್ಳಲು ಮುಂದಾಗಿದ್ದಾರೆ. ಆದರೆ, ದೇವಸ್ಥಾನದ ಸಿಬ್ಬಂದಿಗಳು ಅದಕ್ಕೆ ಅವಕಾಶ ನಿರಾಕರಿಸಿದ್ದು, ಐಫೋನ್ ನಲ್ಲಿರುವ ಸಿಮ್ ಕಾರ್ಡ್ ಅನ್ನು ತೆಗೆದುಕೊಂಡು, ಐಫೋನ್ ನಲ್ಲಿರುವ ಮುಖ್ಯ ದತ್ತಾಂಶಗಳನ್ನು ನಕಲು ಮಾಡಿಕೊಳ್ಳುವ ಆಯ್ಕೆ ನೀಡಿದ್ದಾರೆ.

ಆದರೆ, ಅದಾಗಲೇ ಹೊಸ ಸಿಮ್ ಖರೀದಿಸಿದ್ದ ದಿನೇಶ್, ತಮ್ಮ ಫೋನ್ ಅನ್ನು ಮರಳಿಸುವ ಆಯ್ಕೆಯನ್ನು ದೇವಸ್ಥಾನದ ಸಿಬ್ಬಂದಿಗಳಿಗೇ ನೀಡಿ, ಅಲ್ಲಿಂದ ಬರಿಗೈನಲ್ಲಿ ಮನೆಗೆ ಮರಳಿದ್ದಾರೆ.

ಈ ಘಟನೆಯ ಕುರಿತು ಶನಿವಾರ ಪ್ರತಿಕ್ರಿಯಿಸಿರುವ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಸಚಿವ ಪಿ.ಕೆ.ಶೇಖರ್ ಬಾಬು, ಕಾಣಿಕೆ ಡಬ್ಬಿಗೆ ಏನನ್ನೇ ಅರ್ಪಿಸಿದರೂ, ಒಂದೊಮ್ಮೆ ಅದು ಅಪರಾಧ ಕೃತ್ಯವೇ ಆಗಿದ್ದರೂ, ಅಂತಹ ವಸ್ತುಗಳು ದೇವರ ಖಾತೆಗೆ ಜಮೆಯಾಗುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.

“ದೇವಸ್ಥಾನಗಳಲ್ಲಿನ ರೂಢಿ ಹಾಗೂ ಸಂಪ್ರದಾಯದಂತೆ, ಹುಂಡಿಗೆ ಹಾಕಿದ ಕಾಣಿಕೆಯು ನೇರವಾಗಿ ದೇವಸ್ಥಾನದ ದೇವರ ಖಾತೆಗೆ ಹೋಗುತ್ತದೆ. ದೇವಸ್ಥಾನದ ಆಡಳಿತ ಮಂಡಳಿಯು ಭಕ್ತರಿಗೆ ಕಾಣಿಕೆಯನ್ನು ಹಿಂದಿರುಗಿಸಲು ನಿಯಮಗಳು ಅವಕಾಶ ನೀಡುವುದಿಲ್ಲ” ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಹೀಗಿದ್ದೂ, ಈ ಕುರಿತು ಅಧಿಕಾರಿಗಳೊಂದಿಗೆ ಪರ್ಯಾಯ ಮಾರ್ಗಗಳೇನಾದರೂ ಇವೆಯೆ ಎಂದು ಚರ್ಚಿಸಲಾಗುವುದು. ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದೂ ಅವರು ಭರವಸೆ ನೀಡಿದ್ದಾರೆ.

ತಮಿಳುನಾಡಿನಲ್ಲಿ ಇಂತಹ ಘಟನೆ ನಡೆದಿರುವುದು ಇದೇ ಮೊದಲಲ್ಲ. 2023ರಲ್ಲಿ ಪಳನಿಯ ಶ್ರೀ ದಂಡಯುತ ಪಾಣಿ ಸ್ವಾಮಿ ದೇವಸ್ಥಾನದಲ್ಲಿ ಅಳಪ್ಪುಳ ನಿವಾಸಿಯಾದ ಎಸ್.ಸಂಗೀತಾ ಎಂಬುವವರ 1.75 ಪವನ್ ತೂಕದ ಚಿನ್ನದ ಸರ ಆಕಸ್ಮಿಕವಾಗಿ ದೇವಸ್ಥಾನದ ಕಾಣಿಕೆ ಹುಂಡಿಗೆ ಬಿದ್ದಿತ್ತು. ಹುಂಡಿಗೆ ಕಾಣಿಕೆ ಅರ್ಪಿಸಲು ಮುಂದಾಗಿದ್ದ ಆಕೆ, ತನ್ನ ಕತ್ತಿನ ಸುತ್ತ ಇದ್ದ ತುಳಸಿ ಹಾರವನ್ನು ತೆಗೆಯಲು ಮುಂದಾದಾಗ, ಕತ್ತಿನಲ್ಲಿದ್ದ ಚಿನ್ನದ ಸರ ಆಕಸ್ಮಿಕವಾಗಿ ಹುಂಡಿಗೆ ಬಿದ್ದಿತ್ತು. ಆಕೆಯ ಆರ್ಥಿಕ ಹಿನ್ನೆಲೆ ಹಾಗೂ ಆಕೆ ಹೇಳುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿಗಳು ದೃಢಪಡಿಸಿದ ನಂತರ, ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರು ತಮ್ಮ ಸ್ವಂತ ಖರ್ಚಿನಲ್ಲಿ ಅದೇ ಮೌಲ್ಯದ ಚಿನ್ನದ ಸರವನ್ನು ಆಕೆಗೆ ಖರೀದಿಸಿ ನೀಡಿದ್ದರು ಎಂದು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಅಧಿಕಾರಿಯೊಬ್ಬರು ಮೆಲುಕು ಹಾಕಿದ್ದಾರೆ.

ಹುಂಡಿಗಳ ಸ್ಥಾಪನೆ, ರಕ್ಷಣೆ ಹಾಗೂ ಲೆಕ್ಕ ನಿಯಮಗಳು, 1975ರ ಪ್ರಕಾರ, ಹುಂಡಿಗೆ ಅರ್ಪಿಸಿದ ಕಾಣಿಕೆ ದೇವಸ್ಥಾನಕ್ಕೆ ಸೇರುವುದರಿಂದ, ಯಾವುದೇ ಹಂತದಲ್ಲೂ ಅದನ್ನು ಅದರ ಮಾಲಕರಿಗೆ ಹಿಂದಿರುಗಿಸಲು ಬರುವುದಿಲ್ಲ ಎಂದೂ ಅವರು ವಿವರಿಸಿದ್ದಾರೆ.

ಈ ಘಟನೆ ತೀವ್ರ ಸ್ವರೂಪದ ವಾದ-ವಿವಾದಕ್ಕೆ ಕಾರಣವಾಗಿದ್ದು, ದೇವರಿಗೆ ಐಫೋನ್ ಅಗತ್ಯವೆ ಎಂಬ ಚರ್ಚೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಕೆಲವು ಬಳಕೆದಾರರು ದೇವಸ್ಥಾನದ ಸಿಬ್ಬಂದಿಗಳ ನಡವಳಿಕೆಯನ್ನು ಖಂಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News