ನೂತನ ಪಕ್ಷ ಸ್ಥಾಪಿಸಲಿರುವ ಚಂಪೈ ಸೊರೇನ್ | ರಾಜಕಾರಣ ತೊರೆಯುವುದಿಲ್ಲವೆಂದ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ
ರಾಂಚಿ: ನಾನು ರಾಜಕಾರಣ ತೊರೆಯುವುದಿಲ್ಲವೆಂದು ಘೋಷಿಸಿರುವ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಚಂಪೈ ಸೊರೇನ್, ನೂತನ ಪಕ್ಷ ಸ್ಥಾಪಿಸುವ ಆಯ್ಕೆಯನ್ನು ಮುಕ್ತವಾಗಿರಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ.
ನಾನು ಯಾವ ಪಕ್ಷಕ್ಕಾಗಿ ನನ್ನ ಪೂರ್ಣ ಜೀವನವನ್ನು ಮುಡಿಪಿಟ್ಟಿದ್ದೆನೊ, ಆ ಪಕ್ಷದ ನಾಯಕರಿಂದ ನನಗೆ ಅವಮಾನವಾಗಿದೆ ಎಂದು ಹೇಳಿರುವ ಚಂಪೈ ಸೊರೇನ್, ನಾನು ನನ್ನ ಯೋಜನೆಗಳ ಬಗ್ಗೆ ದೃಢವಾಗಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
“ಇದು ನನ್ನ ಜೀವನದ ಹೊಸ ಅಧ್ಯಾಯವಾಗಿದೆ. ನಾನು ನನ್ನ ಹಿಂಬಾಲಕರಿಂದ ಸಾಕಷ್ಟು ಬೆಂಬಲ ಹಾಗೂ ಪ್ರೀತಿಯನ್ನು ಪಡೆದಿರುವುದರಿಂದ, ನಾನು ರಾಜಕಾರಣ ತೊರೆಯುವುದಿಲ್ಲ. ಹಿಂದಿನ ಅಧ್ಯಾಯ ಮುಕ್ತಾಯಗೊಂಡಿದೆ. ನಾನು ಮುಂದೆ ಹೊಸ ರಾಜಕೀಯ ಪಕ್ಷಕ್ಕೆ ಸೇರಿದವನಾಗಿರಬಹುದು” ಎಂದು ಜಾರ್ಖಂಡ್ ಮುಕ್ತಿ ಮೋರ್ಚಾದ ಹಿರಿಯ ನಾಯಕರೂ ಆಗಿರುವ ಚಂಪೈ ಸೊರೇನ್, ತಮ್ಮ ಪೂರ್ವಿಕರ ಗ್ರಾಮವಾದ ಸೆರೈಕೆಲ-ಖಾರ್ಸವಾನ್ ಜಿಲ್ಲೆಯ ಝಿಲಿಂಗೊರ ಗ್ರಾಮಕ್ಕೆ ಮಧ್ಯರಾತ್ರಿ ಕಳೆದ ನಂತರ ಭೇಟಿ ನೀಡಿದ ಸಂದರ್ಭದಲ್ಲಿ ನೂತನ ಪಕ್ಷ ಸ್ಥಾಪಿಸುವ ಸುಳಿವು ನೀಡಿದ್ದಾರೆ.
1990ರಲ್ಲಿ ಜಾರ್ಖಂಡ್ ರಾಜ್ಯಕ್ಕಾಗಿ ನಡೆದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ 67 ವರ್ಷದ ಚಂಪೈ ಸೊರೇನ್ ಅವರನ್ನು ‘ಜಾರ್ಖಂಡ್ ಹುಲಿ’ ಎಂಬ ಅಡ್ಡ ಹೆಸರಿನಿಂದಲೂ ಕರೆಯಲಾಗುತ್ತದೆ. 2000ನೇ ಇಸವಿಯಲ್ಲಿ ಜಾರ್ಖಂಡ್ ರಾಜ್ಯವು ಬಿಹಾರ ರಾಜ್ಯದಿಂದ ವಿಭಜನೆಗೊಂಡು, ಪ್ರತ್ಯೇಕ ರಾಜ್ಯವಾಗಿತ್ತು.