ದ್ವೇಷದ ರಾಜಕಾರಣ: 'ಮುಸ್ಲಿಂ ಕಮಿಷನರ್' ಎಂದು ಕರೆದ ಸಂಸದ ನಿಶಿಕಾಂತ್ ದುಬೆಗೆ ಖುರೈಷಿ ತಿರುಗೇಟು

ಹೊಸದಿಲ್ಲಿ: ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರ ʼಮುಸ್ಲಿಂ ಕಮಿಷನರ್ʼ ಹೇಳಿಕೆಗೆ ತೀಕ್ಷಣವಾಗಿ ಪ್ರತಿಕ್ರಿಯಿಸಿದ ಭಾರತದ ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್‌ವೈ ಖುರೈಶಿ, ಧಾರ್ಮಿಕ ಗುರುತುಗಳು ಕೆಲವರಿಗೆ ದ್ವೇಷದ ರಾಜಕೀಯವನ್ನು ಮುಂದುವರಿಸಲು ಇರುವ ಮೇವಾಗಿದೆ. ಓರ್ವ ವ್ಯಕ್ತಿಯನ್ನು ಅವರ ಪ್ರತಿಭೆಯಿಂದ ವ್ಯಾಖ್ಯಾನಿಸಬೇಕೇ ಹೊರತು ಧಾರ್ಮಿಕ ಗುರುತುಗಳಿಂದ ಅಲ್ಲ ಎಂದು ಹೇಳಿದರು.
ಓರ್ವ ವ್ಯಕ್ತಿಯನ್ನು ಅವನ ಅಥವಾ ಅವಳ ಪ್ರತಿಭೆ ಮತ್ತು ಕೊಡುಗೆಗಳಿಂದ ವ್ಯಾಖ್ಯಾನಿಸಲಾಗುತ್ತದೆ ಹೊರತು ಧಾರ್ಮಿಕ ಗುರುತುಗಳಿಂದ ಅಲ್ಲ ಎಂಬ ಭಾರತದ ಕಲ್ಪನೆಯನ್ನು ನಾನು ನಂಬುತ್ತೇನೆ. ಆದರೆ, ಕೆಲವರಿಗೆ ಧಾರ್ಮಿಕ ಗುರುತುಗಳು ತಮ್ಮ ದ್ವೇಷದ ರಾಜಕೀಯವನ್ನು ಮುಂದುವರಿಸಲಿರುವ ಮೇವಾಗಿದೆ ಎಂದು ಖುರೈಶಿ ಹೇಳಿದರು.
ಭಾರತದ 17ನೇ ಮುಖ್ಯ ಚುನಾವಣಾ ಆಯುಕ್ತರಾಗಿ ಕಾರ್ಯ ನಿರ್ವಹಿಸಿದ್ದ ಖುರೈಶಿ, ಭಾರತವು ತನ್ನ ಸಾಂವಿಧಾನಿಕ ಸಂಸ್ಥೆಗಳು ಮತ್ತು ತತ್ವಗಳಿಗಾಗಿ ಹೋರಾಡುತ್ತಿದೆ ಮತ್ತು ಯಾವಾಗಲೂ ಹೋರಾಡುತ್ತದೆ. ನಾನು ಚುನಾವಣಾ ಆಯುಕ್ತನಾಗಿ ಸಾಂವಿಧಾನಿಕ ಹುದ್ದೆಯಲ್ಲಿ ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಸೇವೆ ಸಲ್ಲಿಸಿದ್ದೇನೆ ಮತ್ತು ಐಎಎಸ್ ಅಧಿಕಾರಿಯಾಗಿ ಸುದೀರ್ಘವಾಗಿ ಸೇವೆಯನ್ನು ಸಲ್ಲಿಸಿದ್ದೇನೆ ಎಂದು ಹೇಳಿದರು.
ʼವಕ್ಫ್ ತಿದ್ದುಪಡಿ ಕಾಯಿದೆಯು ನಿಸ್ಸಂದೇಹವಾಗಿ ಮುಸ್ಲಿಂ ಭೂಮಿಯನ್ನು ವಶಪಡಿಸಿಕೊಳ್ಳುವ ಸರಕಾರದ ಒಂದು ದುಷ್ಟ ಯೋಜನೆಯಾಗಿದೆ. ಸುಪ್ರೀಂ ಕೋರ್ಟ್ ಈ ಕಾಯಿದೆಗೆ ತಡೆ ನೀಡುತ್ತದೆ ಎಂದು ನನಗೆ ಖಾತ್ರಿಯಿದೆ. ದುರುದ್ದೇಶಪೂರಿತ ಪ್ರಚಾರ ವ್ಯವಸ್ಥೆಯಿಂದ ತಪ್ಪು ಮಾಹಿತಿಯು ತನ್ನ ಕೆಲಸವನ್ನು ಚೆನ್ನಾಗಿ ಮಾಡಿದೆʼ ಎಂದು ಖುರೈಶಿ ಈ ಮೊದಲು ಹೇಳಿದ್ದರು.
ಖುರೈಶಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಜಾರ್ಖಂಡ್‌ನ ಗೊಡ್ಡಾದ ಬಿಜೆಪಿ ಸಂಸದ ನಿಶಿಕಾಂತ್ ದುಬೆ, ನೀವು ಚುನಾವಣಾ ಆಯುಕ್ತರಾಗಿರಲಿಲ್ಲ, ನೀವು ಮುಸ್ಲಿಂ ಕಮಿಷನರ್ ಆಗಿದ್ದೀರಿ. ನಿಮ್ಮ ಅಧಿಕಾರಾವಧಿಯಲ್ಲಿ ಜಾರ್ಖಂಡ್‌ನ ಸಂತಾಲ್ ಪರಗಣದಲ್ಲಿ ಗರಿಷ್ಠ ಸಂಖ್ಯೆಯ ಬಾಂಗ್ಲಾದೇಶಿ ನುಸುಳುಕೋರರನ್ನು ಮತದಾರರನ್ನಾಗಿ ಮಾಡಲಾಗಿದೆ ಎಂದು ಹೇಳಿದ್ದರು.