ಜನರ ಪಾಲಿಗೆ ಕರಾಳವಾಗಲಿದೆಯಾ ʼಧಾರಾವಿ ಪುನರಾಭಿವೃದ್ಧಿ ಯೋಜನೆʼ?; ಆತಂಕ ಸೃಷ್ಟಿಸಿದ ಅದಾನಿ ಗ್ರೂಪ್- ಮಹಾರಾಷ್ಟ್ರ ಸರಕಾರದ ಜಂಟಿ ಯೋಜನೆ

ಸಾಂದರ್ಭಿಕ ಚಿತ್ರ | PC : NDTV
ಮುಂಬೈ : ಅದಾನಿ ಗ್ರೂಪ್ ಮತ್ತು ಮಹಾರಾಷ್ಟ್ರ ಸರಕಾರ ಜಂಟಿಯಾಗಿ ಕೈಗೆತ್ತಿಕೊಂಡಿರುವ ಧಾರಾವಿ ಪುನರಾಭಿವೃದ್ಧಿ ಯೋಜನೆ ಚರ್ಚೆಗೆ ಗ್ರಾಸವಾಗಿದೆ. ತ್ಯಾಜ್ಯ ವಿಲೇವಾರಿ ಜಾಗಕ್ಕೆ ಜನರನ್ನು ಸ್ಥಳಾಂತರಿಸುವ ಸರಕಾರದ ನಿರ್ಧಾರ ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಧಾರಾವಿಯಲ್ಲಿ ವಾಸಿಸುತ್ತಿದ್ದ 50 ಸಾವಿರದಿಂದ ಸರಿಸುಮಾರು ಒಂದು ಲಕ್ಷ ಜನರನ್ನು ಪುನರ್ವಸತಿಗಾಗಿ ಮುಂಬೈನ ಅತಿದೊಡ್ಡ ತ್ಯಾಜ್ಯ ವಿಲೇವಾರಿ ಜಾಗಗಳಲ್ಲಿ ಒಂದಾದ ದಿಯೋನಾರ್ ಡಂಪಿಂಗ್ ಗ್ರೌಂಡ್‌ಗೆ ಸ್ಥಳಾಂತರಿಸುವ ಪ್ರಸ್ತಾಪವನ್ನು ಕೂಡ ಮಹಾರಾಷ್ಟ್ರ ಸರಕಾರ ಈಗಾಗಲೇ ಅನುಮೋದಿಸಿದೆ.
ಆದರೆ, ಯೋಜನೆ ಬಗ್ಗೆ indianexpress.com ಪ್ರಕಟಿಸಿರುವ ತನಿಖಾ ವರದಿ ಹಲವಾರು ಭಯಾನಕ ಸತ್ಯಗಳನ್ನು ಬಹಿರಂಗಪಡಿಸಿದೆ. ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಲಭ್ಯವಾದ ದಾಖಲೆಗಳು, ಸ್ಥಳ ಪರಿಶೀಲನೆ ಮತ್ತು ಅಧಿಕಾರಿಗಳ ಜೊತೆಗಿನ ಸಂದರ್ಶನಗಳ ಬಳಿಕ ಪ್ರತೀಪ್ ಆಚಾರ್ಯ ಈ ವರದಿಯನ್ನು ಸಿದ್ದಪಡಿಸಿದ್ದಾರೆ.
ಧಾರಾವಿ ಪುನರಾಭಿವೃದ್ಧಿ ಯೋಜನೆ ಪರಿಸರ ನಿಯಮಗಳು ಮತ್ತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (ಸಿಪಿಸಿಬಿ) ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ ಎಂಬುದನ್ನು ವರದಿ ಬಹಿರಂಗಪಡಿಸಿದೆ.
ಬಳಕೆಯಲ್ಲಿಲ್ಲದ, ಮುಚ್ಚಲಾದ ತ್ಯಾಜ್ಯ ವಿಲೇವಾರಿ ಜಾಗದಲ್ಲಿ ಆಸ್ಪತ್ರೆಗಳು, ವಸತಿ ಮತ್ತು ಶಾಲೆಗಳನ್ನು ನಿರ್ಮಾಣ ಮಾಡಬಾರದು ಮತ್ತು ಅದರ ಗಡಿಯಿಂದ 100 ಮೀಟರ್ ಅನ್ನು ಅಭಿವೃದ್ಧಿ ರಹಿತ ವಲಯವೆಂದು ಘೋಷಿಸುವುದು ಕಡ್ಡಾಯ ಎಂಬುದು ಸಿಪಿಸಿಬಿ ಮಾರ್ಗಸೂಚಿ ಹೇಳುತ್ತದೆ. ಆದರೆ ದಿಯೋನಾರ್ ಮುಚ್ಚಿದ ಡಂಪಿಂಗ್ ಗ್ರೌಂಡ್ ಅಲ್ಲ. ಅದು ಈಗಲೂ ಬಳಕೆಯಲ್ಲಿರುವ ತ್ಯಾಜ್ಯ ವಿಲೇವಾರಿ ಸ್ಥಳ. ತ್ಯಾಜ್ಯಗಳಿಂದ ಅಲ್ಲಿ ವಿಷಕಾರಿ ಅನಿಲ ಹೊರಹೊಮ್ಮುತ್ತದೆ. ತ್ಯಾಜ್ಯ ರಾಶಿಗಳಿಂದ ಹೊರಬರುವ ದ್ರವವಂತೂ ಅಂತರ್ಜಲ, ಮೇಲ್ಮೈ ನೀರು ಮತ್ತು ಮಣ್ಣನ್ನು ವಿಷಕಾರಿಯಾಗಿಸುತ್ತದೆ.
ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಪ್ರಧಾನ ಪೀಠಕ್ಕೆ ಸಲ್ಲಿಸಲಾಗಿರುವ 2024ರ ಸಿಪಿಸಿಬಿ ವರದಿ ಪ್ರಕಾರ, ದಿಯೋನಾರ್ ಡಂಪಿಂಗ್ ಗ್ರೌಂಡ್ ಪ್ರತಿ ಗಂಟೆಗೆ ಸರಾಸರಿ 6,202 ಕೆಜಿ ಮೀಥೇನ್ ಅನ್ನು ಹೊರಸೂಸುತ್ತದೆ. ಇದು ಭಾರತದ ಅಗ್ರ 22 ಮೀಥೇನ್ ಹಾಟ್ಸ್ಪಾಟ್‌ಗಳಲ್ಲಿ ಒಂದಾಗಿದೆ. ಆದ್ದರಿಂದ ಧಾರಾವಿ ನಿವಾಸಿಗಳನ್ನು ದಿಯೋನಾರ್ ಡಂಪಿಂಗ್ ಗ್ರೌಂಡ್ ಗೆ ಸ್ಥಳಾಂತರಿಸುವ ಸರಕಾರದ ನಿರ್ಧಾರ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಧಾರಾವಿ ವ್ಯಾಪ್ತಿಯ 600 ಎಕರೆ ವಿಸ್ತೀರ್ಣದಲ್ಲಿನ ಕೊಳೆಗೇರಿಗಳು ಮತ್ತು ಕಾರ್ಖಾನೆಗಳಲ್ಲಿ 296 ಎಕರೆಗಳನ್ನು ಧಾರಾವಿ ಪುನರಾಭಿವೃದ್ಧಿ ಯೋಜನೆಗೆ (DRP) ಮೀಸಲಿಡಲಾಗಿದೆ. ಏಷ್ಯಾದ ಅತಿದೊಡ್ಡ ಕೊಳೆಗೇರಿಯನ್ನು ಸುಧಾರಿತ ವಸತಿ ಮತ್ತು ಸೌಕರ್ಯಗಳೊಂದಿಗೆ ಆಧುನಿಕ ನಗರ ಕೇಂದ್ರವಾಗಿಸುವುದು ಇದರ ಗುರಿ ಎನ್ನಲಾಗಿದೆ.
ಹಿರಿಯ ಐಎಎಸ್ ಅಧಿಕಾರಿ ಎಸ್ ವಿ ಆರ್ ಶ್ರೀನಿವಾಸ್ ಈ ಯೋಜನೆಯ ಸಿಇಒ ಆಗಿದ್ದಾರೆ. ಧಾರಾವಿ ಪುನರ್ನಿರ್ಮಾಣ ಯೋಜನೆ ಪ್ರೈವೇಟ್ ಲಿಮಿಟೆಡ್ (DRPPL) ಈ ಯೋಜನೆಯನ್ನು ನಿರ್ವಹಿಸುವ ಹೊಣೆ ಹೊತ್ತಿದೆ. ಇದನ್ನು ಈಗ ನವಭಾರತ್ ಮೆಗಾ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ (NMDPL) ಎಂದು ಕರೆಯಲಾಗುತ್ತದೆ.
ಇದರಲ್ಲಿ ಅದಾನಿ ಪ್ರಾಪರ್ಟೀಸ್ ಪ್ರೈವೇಟ್ ಲಿಮಿಟೆಡ್ (APPL) ಶೇ. 80 ಪಾಲನ್ನು ಹೊಂದಿದೆ. ಉಳಿದ ಶೇ. 20 ರಾಜ್ಯ ವಸತಿ ಇಲಾಖೆಯ ಕೊಳೆಗೇರಿ ಪುನರ್ವಸತಿ ಪ್ರಾಧಿಕಾರದ ಕೈಯಲ್ಲಿದೆ. ಲಭ್ಯವಿರುವ ದಾಖಲೆಗಳ ಪ್ರಕಾರ, NMDPL ನ ಬಂಡವಾಳ ಅಧಿಕೃತವಾಗಿ ತೋರಿಸಲಾದ 5,000 ಕೋಟಿ ರೂ.ಗಳಿಗೆ ವಿರುದ್ಧವಾಗಿ ಬರೀ 400 ಕೋಟಿ ರೂ. ಇದೆ.
ಶ್ರೀನಿವಾಸ್ NMDPL ಅಧ್ಯಕ್ಷರಾಗಿದ್ದಾರೆ. BMC ಆಯುಕ್ತ ಭೂಷಣ್ ಗಗ್ರಾಣಿ ಸೇರಿದಂತೆ ಒಂಬತ್ತು ನಿರ್ದೇಶಕರು ಮಂಡಳಿಯಲ್ಲಿದ್ದಾರೆ. ಅವರಲ್ಲಿ ಅದಾನಿ ಎಂಟರ್ಪ್ರೈಸಸ್ ಮಂಡಳಿಯಲ್ಲೂ ನಿರ್ದೇಶಕರಾಗಿರುವ ಪ್ರಣವ್ ಅದಾನಿ ಸೇರಿದ್ದಾರೆ. ಇತರ ಎಂಟು ಮಂದಿ ವಿವಿಧ ಅದಾನಿ ಗ್ರೂಪ್ ಕಂಪೆನಿಗಳ ಹಿರಿಯ ಕಾರ್ಯನಿರ್ವಾಹಕರು ಅಥವಾ ನಿರ್ದೇಶಕರಾಗಿದ್ದಾರೆ.
ಧಾರಾವಿ ಪುನರ್ವಸತಿ ಯೋಜನೆಯ ನಿರ್ಮಾಣ ಕಾರ್ಯ ಈ ವರ್ಷದ ದ್ವಿತೀಯಾರ್ಧದಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ. ಆದರೆ ಧಾರಾವಿ ಒಳಗೆ ಮತ್ತು ಹೊರಗೆ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಲು NMDPL ಏಳು ವರ್ಷಗಳ ಗಡುವನ್ನು ಹೊಂದಿದೆ.
ಧಾರಾವಿ ಯೋಜನೆಯಡಿಯಲ್ಲಿ ಫಲಾನುಭವಿಗಳನ್ನು ಅರ್ಹರು ಮತ್ತು ಅನರ್ಹರು ಎಂದು ಎರಡು ವರ್ಗಗಳಾಗಿ ವಿಂಗಡಿಸಲಾಗಿದೆ. ಅರ್ಹರೆಂದರೆ, 2000 ಜನವರಿ 1 ಅಥವಾ ಅದಕ್ಕಿಂತ ಮೊದಲು ಅಲ್ಲಿ ವಸತಿ ನಿರ್ಮಿಸಿಕೊಂಡಿರುವವರು. ಉಳಿದವರು ಅನರ್ಹರ ವರ್ಗದಲ್ಲಿ ಬರುತ್ತಾರೆ.
ಸುಮಾರು 1.5 ಲಕ್ಷ ಅರ್ಹ ಫಲಾನುಭವಿಗಳು ಅದೇ ಸ್ಥಳದಲ್ಲಿ ಪುನರ್ವಸತಿ ಸೌಲಭ್ಯ ಪಡೆಯಲಿದ್ದಾರೆ. ಅಂದರೆ ಧಾರಾವಿಯಲ್ಲಿಯೇ ಉಚಿತ ವಸತಿ ಘಟಕಗಳು ಅವರಿಗೆ ಸಿಗುತ್ತವೆ. ಆದರೆ ಸರಕಾರ 4 ಲಕ್ಷ ಅನರ್ಹ ಫಲಾನುಭವಿಗಳಲ್ಲಿ ಸುಮಾರು 50 ಸಾವಿರದಿಂದ ಒಂದು ಲಕ್ಷ ಜನರಿಗೆ ದಿಯೋನಾರ್ ಡಂಪ್‌ನಲ್ಲಿ ಕನಿಷ್ಠ ಬಾಡಿಗೆ ದರದಲ್ಲಿ ವಸತಿ ವ್ಯವಸ್ಥೆ ಮಾಡುವುದಾಗಿ ಹೇಳಿದೆ. ಉಳಿದ ಅನರ್ಹ ವರ್ಗದ ಜನರಿಗೆ ಕುರ್ಲಾ ಡೈರಿ, ವಡಾಲಾ ಮತ್ತು ಕಾಂಜುರ್ಮಾರ್ಗ್ ಮತ್ತು ಮುಲುಂಡ್ ನಡುವಿನ ಉಪ್ಪಿನ ಆಗರಗಳಲ್ಲಿ ಸರಕಾರಿ ಭೂಮಿ ಮೀಸಲಿಟ್ಟಿದೆ.
ಬಿಎಂಸಿ 311 ಎಕರೆ ವಿಸ್ತೀರ್ಣದ ದಿಯೋನಾರ್ ಡಂಪಿಂಗ್ ಗ್ರೌಂಡ್ ನಲ್ಲಿ 124 ಎಕರೆಗಳನ್ನು ಪುನರ್ವಸತಿ ಯೋಜನೆಗಾಗಿ ರಾಜ್ಯ ಸರಕಾರಕ್ಕೆ ಹಸ್ತಾಂತರಿಸಿರುವುದನ್ನು ದಾಖಲೆಗಳು ತೋರಿಸುತ್ತಿರುವುದಾಗಿ indianexpress.com ವರದಿ ಹೇಳುತ್ತದೆ. ಫಲಾನುಭವಿಗಳ ಸಮೀಕ್ಷೆ ಮುಗಿದ ನಂತರ ವಸತಿ ಇಲಾಖೆ ಈ ಭೂಮಿಯನ್ನು ಎನ್ಎಂಡಿಪಿಎಲ್ಗೆ ಹಸ್ತಾಂತರಿಸಲಿದೆ ಎನ್ನಲಾಗಿದೆ.
ಎನ್ಎಂಡಿಪಿಎಲ್ಗೆ ಹಂಚಿಕೆಯಾದ 124 ಎಕರೆ ಭೂಮಿಯಲ್ಲಿ ಒಟ್ಟು ಘನತ್ಯಾಜ್ಯದ ಸುಮಾರು ಶೇ. 40ರಷ್ಟು ಅಂದರೆ 80 ಲಕ್ಷ ಮೆಟ್ರಿಕ್ ಟನ್ ಬಿದ್ದಿದೆ. ಈ ಸ್ಥಳದಲ್ಲಿ ಇಷ್ಟೊಂದು ಜನರನ್ನೇಕೆ ಇರಿಸಲಾಗುತ್ತದೆ ಎಂಬ ಪ್ರಶ್ನೆಗೆ, ಸ್ಥಳದ ಕೊರತೆಯ ಕಾರಣ ನೀಡಲಾಗುತ್ತದೆ ಎಂದು ವರದಿ ಹೇಳುತ್ತದೆ.
ಧಾರಾವಿ ಪುನರಾಭಿವೃದ್ಧಿ ಯೋಜನೆಗೆ ಒಟ್ಟಾರೆಯಾಗಿ 200-300 ಎಕರೆಗಳಷ್ಟು ಭೂಮಿ ಬೇಕಾಗುತ್ತದೆ. ಆದ್ದರಿಂದ, ದಿಯೋನಾರ್ ಡಂಪಿಂಗ್ ಗ್ರೌಂಡ್ ಆರಿಸಿಕೊಳ್ಳಲಾಗಿದೆ ಎಂದು ಡಿಆರ್ಪಿ ಸಿಇಒ ಶ್ರೀನಿವಾಸ್ ಹೇಳಿರುವುದನ್ನು ವರದಿ ಉಲ್ಲೇಖಿಸಿದೆ.
ಸ್ಥಳವನ್ನು ಆಯ್ಕೆ ಮಾಡಿರುವುದು NMDPL ಎಂದು ರಾಜ್ಯ ಸರ್ಕಾರ ಮತ್ತು ಕೊಳೆಗೇರಿ ಪುನರ್ವಸತಿ ಪ್ರಾಧಿಕಾರ (SRA) ಎರಡೂ ಹೇಳುತ್ತಿವೆ.
ಸರಕಾರ ಈ ಕಂಪೆನಿಯಲ್ಲಿ ಶೇ. 20 ಪಾಲನ್ನು ಹೊಂದಿದ್ದರೂ, ಭೂಮಿಯನ್ನು ಆಯ್ಕೆ ಮಾಡುವ ಜವಾಬ್ದಾರಿ NMDPL ಮೇಲಿದೆ ಎಂಬುದು SRA ಯ ಸಿಇಒ ಮಹೇಂದ್ರ ಕಲ್ಯಾಣ್ಕರ್ ಹೇಳಿಕೆ. ಏಕೆಂದರೆ ಭೂ ಪಾರ್ಸೆಲ್ ಆಯ್ಕೆ ಮತ್ತು ಹಂಚಿಕೆಯ ನಿರ್ಧಾರವನ್ನು ಯೋಜನಾ ಅಧಿಕಾರಿಗಳ ಮಟ್ಟದಲ್ಲಿ ಮಾಡಲಾಗುತ್ತಿದೆಯೇ ಹೊರತು ಸರಕಾರಿ ಮಟ್ಟದಲ್ಲಿ ಅಲ್ಲ ಎನ್ನಲಾಗುತ್ತಿದೆ.
ಈ ಯೋಜನೆಗೆ ದಿಯೋನಾರ್ ಡಂಪಿಂಗ್ ಗ್ರೌಂಡ್ ನಂಥ ಅಪಾಯಕಾರಿ ಸ್ಥಳವನ್ನು ಏಕೆ ಆಯ್ಕೆ ಮಾಡಲಾಗಿದೆ ಎಂಬ ಪ್ರಶ್ನೆಗೆ ಅದಾನಿ ಗ್ರೂಪ್ ವಕ್ತಾರರು ಪ್ರತಿಕ್ರಿಯಿಸಲು ನಿರಾಕರಿಸಿರುವುದಾಗಿ ವರದಿ ಹೇಳಿದೆ. ಈಗ ಆ ತ್ಯಾಜ್ಯ ವಿಲೇವಾರಿ ಸ್ಥಳವನ್ನು ಯಾರು ಸ್ವಚ್ಛಗೊಳಿಸುತ್ತಾರೆ ಎಂಬ ಮತ್ತೊಂದು ದೊಡ್ಡ ಪ್ರಶ್ನೆಯೂ ಎದ್ದಿದೆ.
ದಿಯೋನಾರ್ ಡಂಪ್ಯಾರ್ಡ್ ಇರುವ ಭೂಮಿ ಎಂದಿಗೂ ಬಿಎಂಸಿಗೆ ಸೇರಿರಲಿಲ್ಲ. ಈಗ ಈ ಭೂಮಿಯನ್ನು ರಾಜ್ಯ ಸರಕಾರದ ಬೇಡಿಕೆ ಪ್ರಕಾರ ಯಥಾ ಸ್ಥಿತಿಯಲ್ಲಿಯೇ ಹಿಂತಿರುಗಿಸಲಾಗಿದೆ. ಪರಿಣಾಮವಾಗಿ, ತ್ಯಾಜ್ಯ ಇನ್ನೂ ಅಲ್ಲಿಯೇ ಉಳಿದಿದೆ ಎಂದು ಬಿಎಂಸಿ ಆಯುಕ್ತ ಗಗ್ರಾನಿ ಹೇಳಿರುವುದನ್ನು ವರದಿ ಉಲ್ಲೇಖಿಸಿದೆ.
NMDPL ಆ ಸ್ಥಳವನ್ನು ಸ್ವಚ್ಛಗೊಳಿಸುತ್ತದೆಯೇ ಎಂಬ ಪ್ರಶ್ನೆಗೂ ಉತ್ತರವಿಲ್ಲ. ಆದರೆ ಅದು BMC ಮೇಲೆ ಹೊಣೆ ಹೊರಿಸಿರುವ ಬಗ್ಗೆ ಪತ್ರಗಳಲ್ಲಿನ ವಿವರಗಳಿಂದ ಗೊತ್ತಾಗುತ್ತದೆ ಎಂದು ವರದಿ ಹೇಳಿದೆ.
ದಿಯೋನಾರ್ ಡಂಪಿಂಗ್ ಗ್ರೌಂಡ್ ನಲ್ಲಿ ಪುನರ್ವಸತಿ ಯೋಜನೆ ಬಗ್ಗೆ ಇರುವ ಮತ್ತೊಂದು ಪ್ರಶ್ನೆಯೆಂದರೆ, ಅದು ಮುಂಬರುವ ಎರಡು ವಿದ್ಯುತ್ ಸ್ಥಾವರಗಳಿಗೆ ಹತ್ತಿರದಲ್ಲಿದೆ. ಅವೆಂದರೆ, ಸರಕಾರ 2018ರಲ್ಲಿ ಅನುಮೋದಿಸಿದ್ದ ತ್ಯಾಜ್ಯದಿಂದ ಇಂಧನ (WTE) ಸ್ಥಾವರ ಮತ್ತು 2023ರಲ್ಲಿ ತೆರವುಗೊಳಿಸಲಾದ ಜೈವಿಕ CNG ಸ್ಥಾವರ. ಮುಂಬೈ ಪ್ರತಿದಿನ ಉತ್ಪಾದಿಸುವ ಘನತ್ಯಾಜ್ಯದ ಶೇ. 10, ಅಂದರೆ ದಿಯೋನಾರ್‌ನ ದೈನಂದಿನ 600-700 ಮೆಟ್ರಿಕ್ ಟನ್ ತ್ಯಾಜ್ಯವನ್ನು ಸಂಸ್ಕರಿಸಲು ಈ ಯೋಜನೆಗಳಲ್ಲಿ ಉದ್ದೇಶಿಸಲಾಗಿದೆ.
NMDPL ಈ ಹಿಂದೆ ಯೋಜನೆಗಾಗಿ 305 ಎಕರೆಗಳನ್ನು ಕೇಳಿದ್ದರೂ, WTE ಸ್ಥಾವರದ ಕಾರ್ಯಾಚರಣೆ ಮತ್ತು ನಿರ್ವಹಣೆ ಹಾಗೂ ದೈನಂದಿನ ಘನತ್ಯಾಜ್ಯ ಚಟುವಟಿಕೆಗಳಿಗೆ 74 ಎಕರೆ ಅಗತ್ಯವಿರುವುದರಿಂದ ಅಷ್ಟು ಭೂಮಿಯನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು BMC ಹೇಳಿತ್ತು ಎಂಬುದನ್ನು ದಾಖಲೆಗಳು ತೋರಿಸುತ್ತವೆ ಎಂದು ವರದಿ ಹೇಳಿದೆ.
ಪ್ರಸ್ತಾವಿತ WTE ಸ್ಥಾವರ DRP ಸ್ಥಳದಿಂದ 50 ಮೀಟರ್‌ಗಿಂತ ಕಡಿಮೆ ದೂರದಲ್ಲಿದೆ ಎಂದು BMC ದಾಖಲೆಗಳು ತೋರಿಸುತ್ತವೆ. ಆದರೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ, ಅಂತಹ ಸ್ಥಾವರಗಳು ವಸತಿ ವಲಯಗಳಿಂದ ಕನಿಷ್ಠ 300-500 ಮೀ ದೂರದಲ್ಲಿರಬೇಕು ಮತ್ತು ಮಧ್ಯಮ ಅಥವಾ ಭಾರೀ ಕೈಗಾರಿಕೆಗಳಿಗೆ ಮೀಸಲಾಗಿರುವ ಭೂ ವಲಯಗಳಲ್ಲಿ ಮಾತ್ರ ಇರಬೇಕು ಎಂಬ ಷರತ್ತು ಇದೆ. WTE ಸ್ಥಾವರಗಳು ದೊಡ್ಡದಾಗಿರುತ್ತವೆ ಮಾತ್ರವಲ್ಲ, ಬೂದಿ ಮತ್ತು ಹೊಗೆಯನ್ನು ಹೊರಸೂಸುತ್ತವೆ. ಇದರಿಂದಾಗಿ ಪ್ರದೇಶದ ಗಾಳಿಯ ಗುಣಮಟ್ಟದ ಮೇಲೆ ಕೆಟ್ಟ ಪರಿಣಾಮವಾಗಲಿದೆ. ಆದರೆ ಇದಕ್ಕೆ ಹೋಲಿಸಿದರೆ ಜೈವಿಕ-CNG ಸ್ಥಾವರಗಳು ಕಡಿಮೆ ಮಾಲಿನ್ಯಕಾರಕವಾಗಿರುತ್ತವೆ.
ಆದರೆ ಇದರ ಬಗ್ಗೆ ಹೇಳಿರುವ ಶ್ರೀನಿವಾಸ್, ನಿರ್ಮಾಣಕ್ಕೆ ಮೊದಲು EIA (ಪರಿಸರ ಪರಿಣಾಮ ಮೌಲ್ಯಮಾಪನ) ನಡೆಸಿದ ನಂತರ ಈ ಮಾನದಂಡಗಳನ್ನು ಪರಿಗಣಿಸಲಾಗುತ್ತದೆ ಎಂದಿದ್ದಾರೆ. ಆದರೆ, ಶ್ರೀನಿವಾಸ್ ಉಲ್ಲೇಖಿಸಿದ ಪರಿಸರ ಪರಿಣಾಮ ಮೌಲ್ಯಮಾಪನ ಇನ್ನೂ ಪೂರ್ಣಗೊಂಡಿಲ್ಲ.
ಕೊಳಚೆ ಪುನರ್ವಸತಿ ಪ್ರಾಧಿಕಾರ (SRA) ಮತ್ತು ಮಹಾರಾಷ್ಟ್ರ ಮಾಲಿನ್ಯ ನಿಯಂತ್ರಣ ಮಂಡಳಿ (MPCB) ನೀಡಿದ ಉತ್ತರಗಳ ಪ್ರಕಾರ, ಇನ್ನೂ ಯಾವುದೇ ಪರಿಸರ ಪರಿಣಾಮ ಮೌಲ್ಯಮಾಪನ ನಡೆದಿಲ್ಲ.
ಪರಿಸರ ಪರಿಣಾಮ ಮೌಲ್ಯಮಾಪನ ಎಂಬುದು ಯೋಜನಾ ಹಂತದಲ್ಲಿ NMDPL ಮಾಡಬೇಕಿದ್ದ ಕಡ್ಡಾಯ ಸ್ವಯಂ ಮೌಲ್ಯಮಾಪನ. ಇದರ ಆಧಾರದ ಮೇಲೆ ಸರಕಾರ ಪರಿಸರ ಅನುಮತಿಯನ್ನು ನೀಡುತ್ತದೆ. ಆದರೆ ಇಲ್ಲಿ EIA ಎಂಬುದೇ ಇಲ್ಲ.
ವಸತಿ ಖಾತೆ ಹೊಂದಿರುವ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಕಚೇರಿ ಸಹ, ಧಾರಾವಿ ಯೋಜನೆಯಲ್ಲಿ ನಿರ್ಮಾಣಕ್ಕಾಗಿ ಅಗತ್ಯವಿರುವ ಎಲ್ಲಾ ಪರಿಸರ ಅನುಮತಿಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದೆ.
ಸಿಪಿಸಿಬಿ ಮಾನದಂಡಗಳಿಗೆ ವಿರುದ್ಧವಾಗಿ ಧಾರಾವಿ ನಿವಾಸಿಗಳನ್ನು WTE ಸ್ಥಾವರಕ್ಕೆ ಹತ್ತಿರವಿರುವ ಭೂಮಿಗೆ ಏಕೆ ಸ್ಥಳಾಂತರಿಸಲಾಗುತ್ತಿದೆ ಎಂಬ ಪ್ರಶ್ನೆಗೂ ಅದಾನಿ ಗ್ರೂಪ್ ಪ್ರತಿಕ್ರಿಯಿಸಲು ನಿರಾಕರಿಸಿರುವುದಾಗಿ ʼಇಂಡಿಯನ್ ಎಕ್ಸ್ಪ್ರೆಸ್ʼ ವರದಿ ಹೇಳಿದೆ.
ಈ ಯೋಜನೆಗೆ ಭೂಮಿ ಮಂಜೂರು ಮಾಡುವ ಮೊದಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯೊಂದಿಗೆ ಸಮಾಲೋಚಿಸಲಾಗಿಲ್ಲ ಎಂದು ಡಂಪಿಂಗ್ ಗ್ರೌಂಡ್ ಒಳಗಿನ ನಿರ್ಮಾಣಗಳಿಗೆ ಒಪ್ಪಿಗೆ ನೀಡುವ ಪ್ರಾಧಿಕಾರವಾದ MPCB ಯ ಸದಸ್ಯ ಕಾರ್ಯದರ್ಶಿ ಅವಿನಾಶ್ ಧಾಕಾನೆ ಆರೋಪಿಸಿದ್ದಾರೆ.
20,000 ಚದರ ಮೀಟರ್ (49.4 ಎಕರೆ) ಅಥವಾ ಅದಕ್ಕಿಂತ ಹೆಚ್ಚಿನ ವಿಸ್ತೀರ್ಣದ ಅಗತ್ಯವಿರುವ ಯಾವುದೇ ರೀತಿಯ ಅಭಿವೃದ್ಧಿ ಅಥವಾ ಮೂಲಸೌಕರ್ಯ ಕಾರ್ಯ ಕೈಗೊಳ್ಳಲು ಪರಿಸರ ಇಲಾಖೆ ಅನುಮತಿ ಅಗತ್ಯವಿದೆ ಎಂದು ಅವರು ಹೇಳಿರುವುದನ್ನು ʼಇಂಡಿಯನ್ ಎಕ್ಸ್ಪ್ರೆಸ್ʼ ವರದಿ ಉಲ್ಲೇಖಿಸಿದೆ.