ಕೇರಳದ ನರ್ಸ್ ಗೆ ಯೆಮನ್ ನಲ್ಲಿ ಮರಣದಂಡನೆಗೆ ಅನುಮೋದನೆ | ಕುಟುಂಬಕ್ಕೆ ಸಹಾಯಹಸ್ತ ಚಾಚಲಾಗುವುದು : ವಿದೇಶಾಂಗ ಸಚಿವಾಲಯ

Update: 2024-12-31 05:53 GMT

ನಿಮಿಷಾ ಪ್ರಿಯಾ (Photo credit: NDTV)

ಹೊಸದಿಲ್ಲಿ : ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರಿಗೆ ಯೆಮನ್ ನಲ್ಲಿ ವಿಧಿಸಿರುವ ಮರಣದಂಡನೆ ಶಿಕ್ಷೆಯನ್ನು ಅಲ್ಲಿನ ಅಧ್ಯಕ್ಷರು ಅನುಮೋದಿಸಿರುವ ಕುರಿತು ಮಂಗಳವಾರ ಬೆಳಿಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ವಿದೇಶಾಂಗ ಸಚಿವಾಲಯವು, ಅವರ ಕುಟುಂಬಕ್ಕೆ ಬೇಕಾದ ಎಲ್ಲಾ ರೀತಿಯ ಸಹಾಯಹಸ್ತ ಚಾಚಲಾಗುವುದು ಎಂದು ತಿಳಿಸಿದೆ.

ಈ ಕುರಿತು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಅಧಿಕೃತ ವೆಬ್ಸೈಟ್ನಲ್ಲಿ ವಕ್ತಾರ ರಣಧೀರ್ ಜೈಸ್ವಾಲ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, “ ನಿಮಿಷಾ ಪ್ರಿಯಾ ಅವರಿಗೆ ಯೆಮೆನ್ನಲ್ಲಿ ಮರಣದಂಡನೆ ಶಿಕ್ಷೆಯನ್ನು ಅಲ್ಲಿನ ಅಧ್ಯಕ್ಷರು ಅನುಮೋದಿಸಿರುವ ಬಗ್ಗೆ ನಮಗೆ ತಿಳಿದಿದೆ. ಪ್ರಿಯಾ ಅವರ ಕುಟುಂಬವು ಪರ್ಯಾಯ ಆಯ್ಕೆಗಳನ್ನು ನೋಡುತ್ತಿದೆ ಎಂದು ನಮಗೆ ಅರಿವಾಗಿದೆ. ಸರ್ಕಾರ ಈ ವಿಷಯದಲ್ಲಿ ಸಾಧ್ಯವಿರುವ ಎಲ್ಲ ಸಹಾಯಹಸ್ತವನ್ನು ಚಾಚಲಿದೆ,” ಎಂದು ಹೇಳಿದ್ದಾರೆ.

ಪ್ರಿಯಾ ಅವರ ಮರಣದಂಡನೆಯನ್ನು ಯೆಮೆನ್ ಅಧ್ಯಕ್ಷ ರಶಾದ್ ಅಲ್-ಅಲಿಮಿ ಸೋಮವಾರ ಅನುಮೋದಿಸಿದ್ದಾರೆ. ಮೃತಪಟ್ಟ ವ್ಯಕ್ತಿಯ ಕುಟುಂಬದಿಂದ ಕ್ಷಮೆಯನ್ನು ಪಡೆಯಲು ವಿಫಲವಾದರೆ ನಿಮಿಶಾ ಅವರಿಗೆ ಒಂದು ತಿಂಗಳೊಳಗೆ ಮರಣದಂಡನೆ ಶಿಕ್ಷೆಯಾಗಲಿದೆ.

ಆಕೆಯ ಬಿಡುಗಡೆಯು ಮೃತ ತಲಾಲ್ ಅಬ್ದೋ ಮೆಹದಿಯ ಕುಟುಂಬ ಮತ್ತು ಅವರ ಬುಡಕಟ್ಟು ನಾಯಕ ಕ್ಷಮೆ ನೀಡುವುದರ ಮೇಲೆ ಮೇಲೆ ಅವಲಂಬಿತವಾಗಿದೆ. ಮೃತ ವ್ಯಕ್ತಿಯ ಕುಟುಂಬವು ಕೇರಳದ ನರ್ಸ್ ನಿಮಿಷಾ ಅವರನ್ನು ಕ್ಷಮಿಸಿ, ಪರಿಹಾರ ಹಣವನ್ನು ಸ್ವೀಕರಿಸಿದರೆ ಆಕೆಯ ಮರಣದಂಡನೆಯನ್ನು ಮನ್ನಾ ಮಾಡುವ ಅವಕಾಶ ಸಿಗಲಿದೆ.

ಈ ಕುರಿತು ಈಗಾಗಲೇ ಚೌಕಾಶಿ ನಡೆಯುತ್ತಿದೆ. ಪ್ರಿಯಾ ಅವರಿಗೆ ನೇಮಕವಾದ ವಕೀಲರಿಗೆ ಪಾವತಿ ವಿಳಂಬವಾದ್ದರಿಂದ ಮಾತುಕತೆ ಸ್ಥಗಿತಗೊಂಡಿದೆ. ವಕೀಲರು ಮಾತುಕತೆ ಪೂರ್ವ ಶುಲ್ಕವಾಗಿ ಎರಡು ಕಂತುಗಳಲ್ಲಿ 40,000 ಡಾಲರ್ (32,45,500 ರೂ.) ಗೆ ಬೇಡಿಕೆ ಇಟ್ಟಿದ್ದಾರೆ. ಸಂಪೂರ್ಣ ಮೊತ್ತವನ್ನು ಅವರಿಗೆ ನೀಡದ ಹೊರತು ಅವರು ಮಾತುಕತೆ ಮುಂದುವರೆಸಲು ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News