ಲಾರೆನ್ಸ್ ಬಿಷ್ಣೋಯಿಯ ಸಹೋದರನನ್ನು ಅಮೆರಿಕದಿಂದ ಭಾರತಕ್ಕೆ ಕರೆ ತರಲು ಗಡೀಪಾರು ಪ್ರಕ್ರಿಯೆಗೆ ಚಾಲನೆ : ವರದಿ
ಮುಂಬೈ : ಬಾಲಿವುಡ್ ನಟ ಸಲ್ಮಾನ್ ಖಾನ್ ನಿವಾಸದ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ ಪೊಲೀಸರಿಗೆ ಬೇಕಿರುವ ಕುಖ್ಯಾತ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿಯ ಕಿರಿಯ ಸಹೋದರ ಅನ್ಮೋಲ್ ಬಿಷ್ಣೋಯಿಯನ್ನು ಅಮೆರಿಕದಿಂದ ಭಾರತಕ್ಕೆ ಕರೆ ತರುವ ಗಡೀಪಾರು ಪ್ರಕ್ರಿಯೆಗೆ ಮುಂಬೈನ ಅಪರಾಧ ವಿಭಾಗದ ಪೊಲೀಸರು ಚಾಲನೆ ನೀಡಿದ್ದಾರೆ ಎಂದು ndtv.com ವರದಿ ಮಾಡಿದೆ.
ಅನ್ಮೋಲ್ ಬಿಷ್ಣೋಯಿಯನ್ನು ಬಂಧಿಸಲು ಮೋಕಾ ಪ್ರಕರಣದಡಿ ವಿಶೇಷ ನ್ಯಾಯಾಲಯವೊಂದು ಜಾಮೀನು ರಹಿತ ವಾರೆಂಟ್ ಅನ್ನು ಹೊರಡಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಔಪಚಾರಿಕ ಕ್ರಮಗಳನ್ನು ಪೂರ್ಣಗೊಳಿಸಲು ನಾವು ಕೆಲವು ನಿರ್ದಿಷ್ಟ ದಾಖಲೆಗಳಿಗಾಗಿ ಕಾಯುತ್ತಿದ್ದೇವೆ ಎಂದು ಹೇಳಿರುವ ಮುಂಬೈ ಅಪರಾಧ ವಿಭಾಗದ ಪೊಲೀಸರು, ಆ ದಾಖಲೆಗಳು ಲಭ್ಯವಾದ ನಂತರ, ಕೇಂದ್ರ ಸರಕಾರಕ್ಕೆ ಈ ಕುರಿತು ಅಧಿಕೃತ ಪ್ರಸ್ತಾವನೆಯನ್ನು ರವಾನಿಸಲಾಗುವುದು ಎಂದು ಹೇಳಿದ್ದಾರೆ.
ಅನ್ಮೋಲ್ ಬಿಷ್ಣೋಯಿಯನ್ನು ವಿದೇಶಗಳಲ್ಲಿ ಪತ್ತೆ ಹಚ್ಚಲು ರೆಡ್ ಕಾರ್ನರ್ ನೋಟಿಸ್ ಅನ್ನೂ ಜಾರಿಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅನ್ಮೋಲ್ ಬಿಷ್ಣೋಯಿ ಅಮೆರಿಕದಲ್ಲಿದ್ದಾನೆ ಎಂದು ಅಮೆರಿಕ ಪ್ರಾಧಿಕಾರಗಳು ಎಚ್ಚರಿಸಿದ ನಂತರ, ಮುಂಬೈ ಅಪರಾಧ ವಿಭಾಗದ ಪೊಲೀಸರು ಈ ಸಂಬಂಧ ಗಡೀಪಾರು ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ. ಇದಕ್ಕೂ ಮುನ್ನ, ಆತ ಕೆನಡಾದಲ್ಲಿ ನೆಲೆಸಿದ್ದಾನೆ ಎಂದು ಭಾವಿಸಲಾಗಿತ್ತು.
ಭಾರತದ ಭಯೋತ್ಪಾದನಾ ನಿಗ್ರಹ ಘಟಕವಾದ ರಾಷ್ಟ್ರೀಯ ತನಿಖಾ ದಳವು ಅನ್ಮೋಲ್ ಬಿಷ್ಣೋಯಿ ಹೆಸರನ್ನು ತನ್ನ ಮೋಸ್ಟ್ ವಾಂಟೆಡ್ ಪಟ್ಟಿಗೆ ಕಳೆದ ತಿಂಗಳು ಸೇರ್ಪಡೆ ಮಾಡಿತ್ತು. ಆತನ ಬಂಧನಕ್ಕಾಗಿ 10 ಲಕ್ಷ ರೂ. ಬಹುಮಾನವನ್ನೂ ಘೋಷಿಸಿತ್ತು.
2022ರಲ್ಲಿ ಪಂಜಾಬಿ ಗಾಯಕ ಸಿಧು ಮೂಸೆವಾಲಾರ ಹತ್ಯೆಯ ಮೂಲಕ ಸುದ್ದಿ ಮಾಡಿದ್ದ ಲಾರೆನ್ಸ್ ಬಿಷ್ಣೋಯಿ ತಂಡವು, ಈ ವರ್ಷದ ಎಪ್ರಿಲ್ ತಿಂಗಳಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ನಿವಾಸದ ಮೇಲೆ ಗುಂಡಿನ ದಾಳಿ ನಡೆಸುವ ಮೂಲಕ ಮತ್ತೆ ಪತ್ರಿಕೆಗಳ ಮುಖಪುಟದಲ್ಲಿ ರಾರಾಜಿಸಿತ್ತು. ಇದರ ಬೆನ್ನಿಗೇ ಸಲ್ಮಾನ್ ಖಾನ್ ನಿವಾಸಕ್ಕೆ ಒದಗಿಸಲಾಗಿರುವ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದರೂ, 1998ರಲ್ಲಿ ನಡೆದಿದ್ದ ಕೃಷ್ಣ ಮೃಗ ಹತ್ಯೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರೆನ್ಸ್ ಬಿಷ್ಣೋಯಿ ಹೆಸರಿನಲ್ಲಿ ಅವರಿಗೆ ಬೆದರಿಕೆ ಕರೆಗಳ ಮಹಾಪೂರ ಮುಂದುವರಿದಿದೆ.
ಸಲ್ಮಾನ್ ಖಾನ್ ನಿವಾಸದ ಮೇಲೆ ನಡೆದಿದ್ದ ಗುಂಡಿನ ದಾಳಿ ಪ್ರಕರಣದಲ್ಲಿ ಲಾರೆನ್ಸ್ ಬಿಷ್ಣೋಯಿ, ಅನ್ಮೋಲ್ ಬಿಷ್ಣೋಯಿ ಹಾಗೂ ಕೆನಡಾ ಮೂಲದ ಗ್ಯಾಂಗ್ ಸ್ಟರ್ ಗೋಲ್ಡೀ ಬ್ರಾರ್ ನನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ. ಶೂಟರ್ ಗಳಲ್ಲಿ ಧೈರ್ಯ ತುಂಬಲು ಒಂಬತ್ತು ನಿಮಿಷಗಳ ಭಾಷಣ ಮಾಡಿದ್ದ ಅನ್ಮೋಲ್ ಬಿಷ್ಣೋಯಿ, ನೀವು ಇತಿಹಾಸ ನಿರ್ಮಿಸಲು ಹೋಗುತ್ತಿದ್ದೀರಿ ಎಂದು ಶೂಟರ್ ಗಳಿಗೆ ಸ್ಫೂರ್ತಿ ತುಂಬಿದ್ದ ಎಂದು ಪೊಲೀಸರ ದೋಷಾರೋಪ ಪಟ್ಟಿಯಲ್ಲಿ ಹೇಳಲಾಗಿದೆ.
ಕಳೆದ ತಿಂಗಳು ನಡೆದಿದ್ದ ಸಲ್ಮಾನ್ ಖಾನ್ ನಿಕಟವರ್ತಿ ಹಾಗೂ ಎನ್ಸಿಪಿ ನಾಯಕ ಬಾಬಾ ಸಿದ್ದೀಕಿ ಹತ್ಯೆಯ ಸಂಬಂಧವೂ ಲಾರೆನ್ಸ್ ಬಿಷ್ಣೋಯಿ ಗುಂಪನ್ನು ತನಿಖೆಗೊಳಪಡಿಸಲಾಗಿದೆ.
ದಿಲ್ಲಿ ಹಾಗೂ ದೇಶದ ವಿವಿಧ ಭಾಗಗಳಲ್ಲಿ ಕ್ರಿಮಿನಲ್ ಕೃತ್ಯ ನಡೆಸಲು ಯುವಕರ ನೇಮಕ ಹಾಗೂ ಹಣಕಾಸು ಒದಗಿಸಿದ 2022ರ ಪ್ರಕರಣದಲ್ಲೂ ಬಿಷ್ಣೋಯಿ ಸಹೋದರರು ಹಾಗೂ ಇನ್ನಿತರರನ್ನು ಹೆಸರಿಸಲಾಗಿದೆ.