ʼಎಕ್ಸ್ʼನಲ್ಲಿ ಎಬಿಪಿ ನ್ಯೂಸ್ ಇಸ್ಲಾಮೋಫೋಬಿಯಾ ಪೋಸ್ಟ್ ಲೈಕ್ ಮಾಡಿದ್ದನ್ನು ಬಯಲು ಮಾಡಿದ ಮುಹಮ್ಮದ್ ಝುಬೇರ್
ಹೊಸದಿಲ್ಲಿ: ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟವಾಗಿದ್ದ ಇಸ್ಲಾಮೋಫೋಬಿಯಾ ಪೋಸ್ಟ್ ಅನ್ನು ಮುಖ್ಯವಾಹಿನಿ ಸುದ್ದಿ ವಾಹಿನಿಯಾದ ಎಬಿಪಿ ನ್ಯೂಸ್ ಮೆಚ್ಚಿಕೊಂಡಿದೆ ಎಂಬ ಸಂಗತಿಯನ್ನು ಮಂಗಳವಾರ ಪತ್ರಕರ್ತ ಹಾಗೂ ಸತ್ಯಶೋಧನಾ ಜಾಲತಾಣವಾದ ಆಲ್ಟ್ ನ್ಯೂಸ್ ನ ಸಹ ಸಂಸ್ಥಾಪಕ ಮುಹಮ್ಮದ್ ಝುಬೇರ್ ಬಯಲು ಮಾಡಿದ್ದಾರೆ.
@erbmjha ಎಂಬ ಬಳಕೆದಾರರ ಹೆಸರಿನಲ್ಲಿರುವ ಬಾಲಾ ಎಂಬ ಹೆಸರಿನ ಜನಪ್ರಿಯ ಬಲಪಂಥೀಯ ಖಾತೆಯಲ್ಲಿ ಪ್ರಕಟವಾಗಿದ್ದ ವಿವಾದಾತ್ಮಕ ಪೋಸ್ಟ್ ಅನ್ನು ಎಬಿಪಿ ನ್ಯೂಸ್ ಹ್ಯಾಂಡಲ್ ಮೆಚ್ಚಿಕೊಂಡಿರುವುದನ್ನು ತೋರಿಸುತ್ತಿರುವ ಲೈಕ್ಸ್ ವಿಭಾಗದ ಸ್ಕ್ರೀನ್ ಶಾಟ್ ಅನ್ನು ಝುಬೇರ್ ತಮ್ಮ ಎಕ್ಸ್ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೊ ಪ್ರಧಾನಿ ನರೇಂದ್ರ ಮೋದಿ ನಿರ್ದಿಷ್ಟವಾಗಿ ಮುಸ್ಲಿಮರ ಹೆಸರನ್ನು ಉಲ್ಲೇಖಿಸದಿದ್ದರೂ, ಅವರನ್ನು ಗುರಿಯಾಗಿಸಿಕೊಂಡು ಟೀಕಿಸಿರುವುದನ್ನು ಒಳಗೊಂಡಿದೆ. ಈ ವಿಡಿಯೊಗೆ ಬಾಲಾ ಅವರು ನೀಡಿರುವ ಶೀರ್ಷಿಕೆಯಲ್ಲಿ, “ಮೋದಿ ನುಸುಳುಕೋರರು ಹಾಗೂ ಜಿಹಾದಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ” ಎಂದು ಹೇಳಲಾಗಿದೆ. ಇದು ಸ್ಪಷ್ಟವಾಗಿ ಮುಸ್ಲಿಮರನ್ನೇ ಉದ್ದೇಶಿಸಿರುವ ಶೀರ್ಷಿಕೆಯಾಗಿದೆ. ಇದರೊಂದಿಗೆ, “ಇನ್ನು 3.. 2.. 1.. ರೊಳಗೆ ಝುಬೇರ್ ಅಳಲು ಪ್ರಾರಂಭಿಸಲಿದ್ದಾರೆ” ಎಂದೂ ಶೀರ್ಷಿಕೆಯಲ್ಲಿ ಹೇಳಲಾಗಿದೆ.
ಎಕ್ಸ್ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ 13.8 ದಶಲಕ್ಷಕ್ಕೂ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಎಬಿಪಿ ನ್ಯೂಸ್ ಪದೇ ಪದೇ ಗೋದಿ ಮಾಧ್ಯಮ ಎಂಬ ವರ್ಗೀಕರಣಕ್ಕೊಳಗಾಗಿದೆ. ಪ್ರಧಾನಿ ನರೇಂದ್ರ ಮೋದಿಯ ನೀತಿಗಳ ಪರವಾಗಿರುವ ಮಾಧ್ಯಮ ಸಂಸ್ಥೆಗಳನ್ನು ವ್ಯಾಖ್ಯಾನಿಸಲು ಈ ಪದವನ್ನು ಬಳಸಲಾಗುತ್ತಿದೆ. ಸುಳ್ಳು ಮಾಹಿತಿ, ದುರುದ್ದೇಶದ ಕಾರ್ಯಸೂಚಿ ಹಾಗೂ ಇಸ್ಲಾಮೋಫೋಬಿಯಾವನ್ನು ತನ್ನ ಸಾಮಾಜಿಕ ಮಾಧ್ಯಸಮ ಖಾತೆಗಳ ಮೂಲಕ ಹರಡುವುದಕ್ಕೆ ಬಾಲಾ ಎಂಬ ಬಳಕೆದಾರರು ಕುಖ್ಯಾತರಾಗಿದ್ದಾರೆ.
Hello @ABPNews pic.twitter.com/9cpBK7TQJy
— Mohammed Zubair (@zoo_bear) May 21, 2024
ಝುಬೇರ್ ಈ ಸಂಗತಿಯನ್ನು ಬಹಿರಂಗಪಡಿಸಿದ್ದರಿಂದ, ಇಂತಹ ಪೋಸ್ಟ್ ಅನ್ನು ಮೆಚ್ಚಿಕೊಂಡ ಎಬಿಪಿ ನ್ಯೂಸ್ ಅನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ತೀವ್ರವಾಗಿ ಖಂಡಿಸಿದ್ದಾರೆ. ನಿಷ್ಪಕ್ಷಪಾತವಾಗಿದ್ದು, ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಎತ್ತಿ ಹಿಡಿಯಬೇಕಿದ್ದ ಪ್ರಮುಖ ಮಾಧ್ಯ.ಮ ಸಂಸ್ಥೆಯೊಂದು ಇಂತಹ ಕೃತ್ಯದಲ್ಲಿ ಭಾಗಿಯಾಗಿರುವುದಕ್ಕೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಳಕೆದಾರರೊಬ್ಬರು, “ನಿಷ್ಪಕ್ಷಪಾತವಾಗಿರಬೇಕಾದ ಸುದ್ದಿ ತಾಣವೊಂದು ಇಸ್ಲಾಮೋಫೋಬಿಯಾ ಪೋಸ್ಟ್ ಅನ್ನು ಮೆಚ್ಚಿಕೊಂಡಿರುವುದು ಭಾರತದಲ್ಲಿ ಪ್ರಜೆಗಳಿಗಾಗಿನ ಮಾಧ್ಯಮವಾಗಿ ಉಳಿದಿಲ್ಲ ಎಂಬುದಕ್ಕೆ ಪುರಾವೆಯಾಗಿದೆ. ಅವರೆಲ್ಲ ಉನ್ನತ ನಾಯಕರಿಗೆ ಶರಣಾಗತರಾಗಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.