ಶಂಭು ಗಡಿಯಲ್ಲಿ ರೈತರ ಪ್ರತಿಭಟನೆ | ಕುಂದುಕೊರತೆಗಳ ಪರಿಹಾರಕ್ಕೆ ಸುಪ್ರೀಂ ಕೋರ್ಟ್‌ನಿಂದ ಸಮಿತಿ ರಚನೆ

Update: 2024-09-02 14:08 GMT

ಸುಪ್ರೀಂ ಕೋರ್ಟ್‌ | PC : PTI 

ಹೊಸದಿಲ್ಲಿ : ಶಂಭು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಕುಂದುಕೊರತೆಗಳನ್ನು ಸೌಹಾರ್ದಯುತವಾಗಿ ಪರಿಹರಿಸಲು ಸುಪ್ರೀಂ ಕೋರ್ಟ್ ಸೋಮವಾರ ಪಂಜಾಬ್ ಹಾಗೂ ಹರ್ಯಾಣ ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಮೂರ್ತಿ ನವಾಬ್ ಸಿಂಗ್ ನೇತೃತ್ವದಲ್ಲಿ ಸೋಮವಾರ ಸಮಿತಿಯೊಂದನ್ನು ರೂಪಿಸಿದೆ.

ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಹಾಗೂ ಉಜ್ಜಲ್ ಭುಯಾನ್ ಅವರನ್ನು ಒಳಗೊಂಡ ಪೀಠ ಒಂದು ವಾರದ ಒಳಗೆ ಮೊದಲ ಸಭೆ ಆಯೋಜಿಸುವಂತೆ ಸಮಿತಿಗೆ ನಿರ್ದೇಶಿಸಿದೆ.

ರೈತರ ಸಮಸ್ಯೆಗಳನ್ನು ರಾಜಕೀಯಗೊಳಿಸಬಾರದು ಹಾಗೂ ಸಮಸ್ಯೆಗಳನ್ನು ಸಮಿತಿ ಹಂತ ಹಂತವಾಗಿ ಪರಿಗಣಿಸುತ್ತದೆ ಎಂದು ಪೀಠ ಹೇಳಿತು. ರೈತರು ತಮ್ಮ ಶಾಂತಿಯುತ ಮುಷ್ಕರಗಳನ್ನು ಪರ್ಯಾಯ ಸ್ಥಳಗಳಿಗೆ ವರ್ಗಾಯಿಸುವ ಸ್ವಾತಂತ್ರ್ಯವನ್ನು ಹೊಂದಿದ್ದಾರೆ ಎಂದು ಪೀಠ ತಿಳಿಸಿತು.

ಪ್ರತಿಭಟನೆ ನಡೆಸುತ್ತಿರುವ ರೈತರು ಫೆಬ್ರವರಿ 13ರಿಂದ ಠಿಕಾಣಿ ಹೂಡಿರುವ ಅಂಬಾಲ ಸಮೀಪದ ಶಂಭು ಗಡಿಯಲ್ಲಿರುವ ಬ್ಯಾರಿಕೇಡ್‌ಗಳನ್ನು ವಾರದ ಒಳಗೆ ತೆರವುಗೊಳಿಸುವಂತೆ ಸೂಚಿಸಿ ಉಚ್ಚ ನ್ಯಾಯಾಲಯ ನೀಡಿದ ಆದೇಶ ಪ್ರಶ್ನಿಸಿ ಹರ್ಯಾಣ ಸರಕಾರ ಸಲ್ಲಿಸಿದ ಅರ್ಜಿಯನ್ನು ಪೀಠ ವಿಚಾರಣೆ ನಡೆಸಿತು.

ತಮ್ಮ ಕೃಷ್ಯುತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ಸೇರಿದಂತೆ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದಿಲ್ಲಿಗೆ ಮೆರವಣಿಗೆ ನಡೆಸುವುದಾಗಿ ‘‘ಸಂಯುಕ್ತ ಕಿಸಾನ್ ಮೋರ್ಚಾ’’ (ರಾಜಕೀಯೇತರ ಸಂಘಟನೆ) ಹಾಗೂ ‘‘ಕಿಸಾನ್ ಮಜ್ದೂರ್ ಮೋರ್ಚಾ’’ ಘೋಷಿಸಿದ ಬಳಿಕ ಹರ್ಯಾಣ ಸರಕಾರ ಅಂಬಾಲ-ಹೊಸದಿಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಫೆಬ್ರವರಿಯಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News