ಎಲಾನ್ ಮಸ್ಕ್ ಭಾರತ ಭೇಟಿಗೆ ಮುನ್ನ ಬಾಹ್ಯಾಕಾಶ ಕ್ಷೇತ್ರದ ಎಫ್ ಡಿಐ ನಿಯಮ ಬದಲು

Update: 2024-04-18 03:08 GMT

ಹೊಸದಿಲ್ಲಿ: ಸ್ಟಾರ್ ಲಿಂಕ್ ಪ್ರವರ್ತಕ ಎಲಾನ್ ಮಸ್ಕ್ ಭಾರತಕ್ಕೆ ಭೇಟಿ ನೀಡುವುದಕ್ಕೆ ಪೂರ್ವಭಾವಿಯಾಗಿ, ಕೇಂದ್ರ ಸರ್ಕಾರ, ವಿದೇಶಿ ವಿನಿಮಯ ನಿರ್ವಹಣೆ (ಸಾಲ ಸಾಧನೇತರ) ನಿಯಮಾವಳಿಯಡಿ ವಿವಿಧ ಉಪಗ್ರಹ ಸಂಬಂಧಿ ಚಟುವಟಿಕೆಗಳಲ್ಲಿ ಹೊಸ ವಿದೇಶಿ ನೇರ ಹೂಡಿಕೆ (ಎಫ್ ಡಿಐ) ಮಿತಿಯನ್ನು ನಿಗದಿಪಡಿಸಿ ಅಧಿಸೂಚನೆ ಹೊರಡಿಸಿದೆ. ಇದು ವಿದೇಶಿ ಹೂಡಕೆದಾರರಿಗೆ ಈ ವಲಯದಲ್ಲಿ ಹೂಡಿಕೆ ಯೋಜನೆಗಳನ್ನು ರೂಪಿಸಲು ನೆರವಾಗಲಿದೆ.

ವಿದೇಶಿ ವಿನಿಮಯ ನಿರ್ವಹಣೆ (ಸಾಲ ಸಾಧನೇತರ) (ಮೂರನೇ ತಿದ್ದುಪಡಿ) ನಿಯಮಾವಳಿ-2024 ಎಂಬ ಹೊಸ ನಿಯಮಾವಳಿ ಏಪ್ರಿಲ್ 16ರಿಂದ ಜಾರಿಗೆ ಬಂದಿದೆ ಎಂದು ಹಣಕಾಸು ಸಚಿವಾಲಯದ ಅಧಿಸೂಚನೆ ಹೇಳಿದೆ. ಕಳೆದ ಫೆಬ್ರವರಿಯಲ್ಲಿ ಕೇಂದ್ರ ಸರ್ಕಾರ ಬಾಹ್ಯಾಕಾಶ ವಲಯದಲ್ಲಿ ಎಫ್ ಡಿಐ ನೀತಿಯ ತಿದ್ದುಪಡಿಗೆ ಅನುಮೋದನೆ ನೀಡಿತ್ತು.

ಭಾರತ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲಿರುವ ಮಸ್ಕ್, ಭಾರತದಲ್ಲಿ ಸ್ಟಾರ್ ಲಿಂಕ್ ಗೆ ಚಾಲನೆ ಹಾಗೂ ಈ ವಲಯದಲ್ಲಿ 200 ಕೋಟಿಯಿಂದ 300 ಕೋಟಿ ಡಾಲರ್ ಹೂಡಿಕೆ ಮಾಡುವುದು ಸೇರಿದಂತೆ ಹಲವು ಪ್ರಮುಖ ಘೋಷಣೆಗಳನ್ನು ಮಾಡುವ ಸಾಧ್ಯತೆ ಇದೆ. ಮಸ್ಕ್ ಮಾಲೀಕತ್ವದ ಸ್ಟಾರ್ ಲಿಂಕ್, ಭಾರತದಲ್ಲಿ ಸ್ಯಾಟ್ ಕಾಂ ಸೇವೆಗಳನ್ನು ಆರಂಭಿಸಲು ಪರವಾನಗಿ ಕೋರಿದೆ. ಸ್ಟಾರ್ ಲಿಂಕ್ ಸುಮಾರು 4 ಸಾವಿರ ಕೆಳ ಭೂ ಕಕ್ಷೆ (ಎಲ್ಇಓ) ಉಪಗ್ರಹಗಳ ಗುಚ್ಛವನ್ನು ಹೊಂದಿದೆ.

ಹೊಸ ನಿಯಮಾವಳಿಯಡಿಯಲ್ಲಿ ಉಪಗ್ರಹ ಸಿಸ್ಟಂ ಅಥವಾ ಸಬ್ ಸಿಸ್ಟಮ್ ಗಳು ಹಾಗೂ ಬಿಡಿಭಾಗಗಳ ಉತ್ಪಾದನೆ, ಗ್ರೌಂಡ್ ಸೆಗ್ಮೆಂಟ್ ಮತ್ತು ಬಳಕೆದಾರರ ವಲಯದಲ್ಲಿ ಶೇಕಡ 100ರಷ್ಟು ಎಫ್ ಡಿಐಗೆ ಅವಕಾಶ ಕಲ್ಪಿಸಲಾಗಿದೆ. ಸ್ವಯಂಚಾಲಿತ ಮಾರ್ಗದಡಿ ಉಡಾವಣಾ ವಾಹನಗಳ ಬಿಡಿಭಾಗಗಳು, ಸಂಬಂಧಿತ ಸಿಸ್ಟಂ ಅಥವಾ ಉಪ ಸಿಸ್ಟಂಗಳಲ್ಲಿ ಶೇಕಡ 49ರಷ್ಟು ಹೂಡಿಕೆಗೆ ಅವಕಾಶ ಕಲ್ಪಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News