ನಾಗ್ಪುರದಲ್ಲಿ ಕೆಫೆ ಮಾಲಕನ ಕೊಲೆ; ಕುಖ್ಯಾತ ಗ್ಯಾಂಗ್‌ನ ಐವರ ಬಂಧನ

ಸಾಂದರ್ಭಿಕ ಚಿತ್ರ
ನಾಗ್ಪುರ: ಮಹಾರಾಷ್ಟ್ರದ ನಾಗ್ಪುರದಲ್ಲಿ ಕೆಫೆ ಮಾಲಕನ ಮೇಲೆ ಗುಂಡಿಕ್ಕಿ ಕೊಲೆ ಮಾಡಿದ ಆರೋಪದಲ್ಲಿ ಗ್ಯಾಂಗ್‌ನ ಐವರು ಸದಸ್ಯರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಹಿರನ್ವಾರ್ ಗ್ಯಾಂಗ್‌ಗೆ ಸೇರಿದ ಆರೋಪಿಗಳು ಎಪ್ರಿಲ್ 15 ರಂದು ಕೆಫೆ ಮಾಲಕ ಅವಿನಾಶ್ ಭೂಸಾರಿ ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎಪ್ರಿಲ್ 14 ರಂದು ಅಂಬೇಡ್ಕರ್ ಜಯಂತಿ ಮೆರವಣಿಗೆಯ ಸಂದರ್ಭದಲ್ಲಿ ಎದುರಾಳಿ ಗ್ಯಾಂಗ್‌ನ ಸದಸ್ಯನನ್ನು ಕೊಲ್ಲಲು ಗ್ಯಾಂಗ್ ಯೋಜಿಸಿತ್ತು. ಆದರೆ ಅವರ ಟಾರ್ಗೆಟ್ ಕಾರ್ಯಕ್ರಮದಲ್ಲಿ ಕಂಡು ಬಂದಿರಲಿಲ್ಲ ಎಂದು ಉಪ ಪೊಲೀಸ್ ಆಯುಕ್ತ (ಡಿಸಿಪಿ) ರಾಹುಲ್ ಮಕ್ನಿಕರ್ ಹೇಳಿದ್ದಾರೆ.
ಮರುದಿನ ರಾತ್ರಿ ಗೋಕುಲ್‌ಪೇತ್ ಪ್ರದೇಶದಲ್ಲಿ ಅವಿನಾಶ್ ಭೂಸಾರಿ ಅವರ ಕೆಫೆಯ ಹೊರಗೆ ಗ್ಯಾಂಗ್ ದಾಳಿ ನಡೆಸಿತು. ತನ್ನ ಮ್ಯಾನೇಜರ್ ಜೊತೆ ಐಸ್ ಕ್ರೀಮ್ ತಿನ್ನುತ್ತಿದ್ದಾಗ ಭೂಸಾರಿ ಅವರ ಮೇಲೆ ಹತ್ತಿರದಿಂದ ಐದು ಬಾರಿ ಗುಂಡು ಹಾರಿಸಲಾಯಿತು ಎಂದು ರಾಹುಲ್ ಮಕ್ನಿಕರ್ ವಿವರಿಸಿದರು.
ಪೋಲಿಸರು ವಿಶೇಷ ತಂಡಗಳನ್ನು ರಚಿಸಿ ಭೋಪಾಲ್, ಕೋಲ್ಕತ್ತಾ, ವಿಶಾಖಪಟ್ಟಣಂ, ತಿರುಪತಿ ಮತ್ತು ಗೊಂಡಿಯಾದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ.
ಗ್ಯಾಂಗ್ ಸದಸ್ಯರು ತಮ್ಮ ಸ್ಥಳವನ್ನು ಮರೆಮಾಡಲು ಆಗಾಗ್ಗೆ ಮೊಬೈಲ್ ಫೋನ್‌ಗಳು ಮತ್ತು ಸಿಮ್ ಕಾರ್ಡ್‌ಗಳನ್ನು ಬದಲಾಯಿಸುತ್ತಿದ್ದುದು ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿತ್ತು. ಕೆಲವು ಆರೋಪಿಗಳನ್ನು ನವೇಗಾಂವ್ ಬಂದ್ ರೈಲ್ವೆ ನಿಲ್ದಾಣದಲ್ಲಿ ಮತ್ತು ಇತರರನ್ನು ಗೊಂಡಿಯಾ ಬಸ್ ನಿಲ್ದಾಣದಲ್ಲಿ ಬಂಧಿಸಿರುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿಗಳನ್ನು ಶೈಲೇಶ್ ಅಲಿಯಾಸ್ ಬಂಟಿ ಹಿರಣ್ವರ್ (31), ಅಂಕಿತ್ ಹಿರಣ್ವರ್ (22), ಆದರ್ಶ್ ಅಲಿಯಾಸ್ ಗೋಟ್ಯಾ ವಾಲ್ಕೆ (20), ಶಿಬ್ಬು ರಾಜೇಶ್ ಯಾದವ್ (20), ರೋಹಿತ್ ಅಲಿಯಾಸ್ ಭಿಕ್ಕು ಮೆಶ್ರಮ್ (20) ಎಂದು ಗುರುತಿಸಲಾಗಿದೆ.
ಅವರೆಲ್ಲರೂ ನಾಗ್ಪುರದ ಕಾಚಿಪುರ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನೂ ಆರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.