ಪಹಲ್ಗಾಮ್ ದಾಳಿ ಕುರಿತು ಪೋಸ್ಟ್ ಮಾಡಿದ ಗಾಯಕಿ ನೇಹಾ ಸಿಂಗ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು

ನೇಹಾ ಸಿಂಗ್ ರಾಥೋಡ್ (Screengrab: X)
ಲಕ್ನೊ: ಪೆಹಲ್ಗಾಮ್ ದಾಳಿಯ ಬಳಿಕ ನಿರ್ದಿಷ್ಟ ಸಮುದಾಯವೊಂದನ್ನು ಗುರಿಯಾಗಿಸಿಕೊಂಡು ಜಾನಪದ ಗಾಯಕಿ ನೇಹಾ ಸಿಂಗ್ ರಾಥೋಡ್ ಮಾಡಿರುವ ಪೋಸ್ಟ್ ಗಳಿಂದ ರಾಷ್ಟ್ರೀಯ ಐಕ್ಯತೆಗೆ ಧಕ್ಕೆಯಾಗಲಿದೆ ಎಂದು ಆರೋಪಿಸಿ ಸಲ್ಲಿಕೆಯಾಗಿದ್ದ ದೂರೊಂದನ್ನು ಆಧರಿಸಿ, ಪೊಲೀಸರು ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿಕೊಂಡಿದ್ದಾರೆ.
"ಎಪ್ರಿಲ್ 22ರಂದು ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯ ವೇಳೆ ಬಹುತೇಕ ಪ್ರವಾಸಿಗರೇ ಆಗಿದ್ದ ಸಂತ್ರಸ್ತರ ಧರ್ಮವನ್ನು ಕೇಳಿ, ಅವರ ಮೇಲೆ ಗುಂಡು ಹಾರಿಸಿದ ಭಯೋತ್ಪಾದಕರ ಕೃತ್ಯದಿಂದ ಇಡೀ ದೇಶ ಶೋಕತಪ್ತವಾಗಿದ್ದು, ಈ ದುಷ್ಕರ್ಮಿಗಳ ರಕ್ತಕ್ಕಾಗಿ ಕಾತರಿಸುತ್ತಿದೆ ಇಂತಹ ಪರಿಸ್ಥಿತಿಯಲ್ಲಿ ಗಾಯಕಿ ಹಾಗೂ ಕವಿಯತ್ರಿ ನೇಹಾ ಸಿಂಗ್ ರಾಥೋಡ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ರಾಷ್ಟ್ರೀಯ ಸಮಗ್ರತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವಂತಹ ಕೆಲವು ಆಕ್ಷೇಪಾರ್ಹ ಪೋಸ್ಟ್ ಗಳನ್ನು ಮಾಡಿದ್ದಾರೆ. ಅಲ್ಲದೆ, ಧರ್ಮವನ್ನಾಧರಿಸಿ, ಒಂದು ಸಮುದಾಯದ ವಿರುದ್ಧ ಮತ್ತೊಂದು ಸಮುದಾಯವನ್ನು ಪ್ರಚೋದಿಸುವ ಪ್ರಯತ್ನವನ್ನು ಪದೇ ಪದೇ ಮಾಡಿದ್ದಾರೆ" ಎಂದು ದೂರುದಾರರು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಲಕ್ನೊದ ಹಝ್ರತ್ ಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಈ ದೂರನ್ನಾಧರಿಸಿ, ಜಾನಪದ ಗಾಯಕಿ ನೇಹಾ ಸಿಂಗ್ ರಾಥೋಡ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದರೊಂದಿಗೆ, ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿಯೂ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.