ಅದಾನಿ ವಿರುದ್ಧದ ಪ್ರಕರಣಕ್ಕೆ ಸಂಬಂಧ ಕಲ್ಪಿಸಿ ವರದಿ: ಮಾಧ್ಯಮಗಳ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಜಗನ್ ಮೋಹನ್ ರೆಡ್ಡಿ

Update: 2024-12-10 07:54 GMT

ಜಗನ್ ಮೋಹನ್ ರೆಡ್ಡಿ (Photo: PTI)

ಅಮರಾವತಿ: ಅದಾನಿ ಗ್ರೂಪ್ ವಿರುದ್ಧದ ದೋಷಾರೋಪಣೆ ಬಗ್ಗೆ ಸಂಬಂಧ ಕಲ್ಪಿಸಿ ಸುದ್ದಿಗಳನ್ನು ಬಿತ್ತರಿಸಲಾಗಿದೆ ಎಂದು ಆರೋಪಿಸಿ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರು ಕೆಲ ಮಾಧ್ಯಮ ಸಂಸ್ಥೆಗಳ ವಿರುದ್ಧ ದಿಲ್ಲಿ ಹೈಕೋರ್ಟ್ ನಲ್ಲಿ ಮಂಗಳವಾರ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಅದಾನಿ ವಿರುದ್ಧ ಸೌರ ಗುತ್ತಿಗೆಗೆ ಸಂಬಂಧಿಸಿದಂತೆ ಯುಎಸ್ ನ್ಯಾಯಾಲಯದಲ್ಲಿನ ದೋಷಾರೋಪಣೆಗೆ ಸಂಬಂಧ ಕಲ್ಪಿಸಿ ವರದಿ ಮಾಡಿರುವ ಬಗ್ಗೆ ಕ್ಷಮೆಯಾಚಿಸುವಂತೆ ಜನಪ್ರಿಯ ತೆಲುಗು ಪತ್ರಿಕೆಗಳಾದ ʼಈನಾಡುʼ ಮತ್ತು ʼಆಂಧ್ರಜ್ಯೋತಿʼಗೆ ಜಗನ್ ಮೋಹನ್ ರೆಡ್ಡಿ ಶನಿವಾರ ಲೀಗಲ್ ನೋಟಿಸ್ ಕಳುಹಿಸಿದ್ದರು. ಈ ಕುರಿತು ಬೇಷರತ್ ಕ್ಷಮೆಯಾಚಿಸಬೇಕು ಮತ್ತು ಕ್ಷಮೆಯಾಚನೆಯನ್ನು ಪತ್ರಿಕೆಗಳ ಮೊದಲ ಪುಟದಲ್ಲಿ ಪ್ರಕಟಿಸಬೇಕು ಎಂದು ಆಗ್ರಹಿಸಿದ್ದರು.

ಹಿರಿಯ ವಕೀಲ ದಯನ್ ಕೃಷ್ಣನ್, ವಕೀಲರಾದ ಅಮಿತ್ ಅಗರವಾಲ್, ಸಾಹಿಲ್ ರವೀನ್ ಮತ್ತು ರಾಹುಲ್ ಕುಕ್ರೇಜಾ ಅವರು ಜಗನ್ ಪರ ವಾದ ಮಂಡಿಸಿದ್ದು, US ದೋಷಾರೋಪಣೆಯಲ್ಲಿ ಜಗನ್ ಮೋಹನ್ ರೆಡ್ಡಿ ಅವರ ಹೆಸರನ್ನು ಉಲ್ಲೇಖಿಸಲಾಗಿಲ್ಲ. ಆದ್ದರಿಂದ ಲೇಖನಗಳು ಆಧಾರರಹಿತ ಮತ್ತು ಮಾನಹಾನಿಕರವೆಂದು ಹೇಳಿದ್ದಾರೆ.

ಗೌತಮ್ ಅದಾನಿ ಮತ್ತು ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ ನಲ್ಲಿ ನಿರ್ದೇಶಕರಾಗಿರುವ ಅವರ ಸೋದರಳಿಯ ಸಾಗರ್ ಸೇರಿದಂತೆ ಇತರ 7 ಆರೋಪಿಗಳು 2020 ಮತ್ತು 2024ರ ನಡುವೆ ಸೌರ ಗುತ್ತಿಗೆ ಪಡೆಯಲು ಭಾರತೀಯ ಅಧಿಕಾರಿಗಳಿಗೆ ಸುಮಾರು 265 ಮಿಲಿಯನ್ ಡಾಲರ್ ಲಂಚ ನೀಡಲು ಒಪ್ಪಿಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು. ಇದರ ಬೆನ್ನಲ್ಲೇ ಅದಾನಿ ವಿರುದ್ಧ ನ್ಯೂಯಾರ್ಕ್ ನ್ಯಾಯಾಲಯ ಅರೆಸ್ಟ್ ವಾರೆಂಟ್ ಜಾರಿಗೊಳಿಸಿತ್ತು.

Full View

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News