ಜಾರ್ಖಂಡ್ ಮಾಜಿ ಸಿಎಂ ಭೂಕಬಳಿಕೆ ಪ್ರಕರಣ: ರಾಂಚಿಯಲ್ಲಿ ಈಡಿ ದಾಳಿ, 1 ಕೋಟಿ ರೂ. ನಗದು, 100 ಸಜೀವ ಗುಂಡು ವಶ
ರಾಂಚಿ: ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಹಾಗೂ ಇತರರ ವಿರುದ್ಧದ ಭೂ ಕಬಳಿಕೆಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ರಾಂಚಿಯಲ್ಲಿ ದಾಳಿ ನಡೆಸಿರುವ ಜಾರಿ ನಿರ್ದೇಶನಾಲಯ 1 ಕೋಟಿ ರೂ. ನಗದು ಹಾಗೂ 100 ಸುತ್ತು ಸಜೀವ ಗುಂಡುಗಳನ್ನು ವಶಕ್ಕೆ ತೆಗೆದುಕೊಂಡಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಕಂಕೆ ರಸ್ತೆಯಲ್ಲಿರುವ ಕಟ್ಟಡದ ಮೇಲೆ ಶುಕ್ರವಾರ ಸಂಜೆ ದಾಳಿ ನಡೆಸಿದ ಜಾರಿ ನಿರ್ದೇಶನಾಲಯ ಕಮಲೇಶ್ ಸಿಂಗ್ ಎಂದು ಗುರುತಿಸಲಾದ ವ್ಯಕ್ತಿಯಿಂದ ನಗದು ಹಾಗೂ ಗುಂಡುಗಳನ್ನು ವಶಪಡಿಸಿಕೊಂಡಿದೆ. ಮಾಜಿ ಮುಖ್ಯಮಂತ್ರಿ ಹಾಗೂ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ)ದ ನಾಯಕ ಹೇಮಂತ್ ಸೊರೇನ್ ವಿರುದ್ಧದ ಭೂಕಬಳಿಕ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ಈ ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಸಜೀವ ಗುಂಡುಗಳನ್ನು ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಶಸಸ್ತ್ರ ಕಾಯ್ದೆ ಅಡಿಯಲ್ಲಿ ಪೊಲೀಸ್ ಪ್ರಕರಣವನ್ನು ಕೂಡ ದಾಖಲಿಸಿದೆ ಎಂದು ಅದು ತಿಳಿಸಿದೆ.
ಈ ಪ್ರಕರಣದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ ಸೊರೇನ್, ಐಎಎಸ್ ಅಧಿಕಾರಿ ಹಾಗೂ ರಾಂಚಿಯ ಮಾಜಿ ಜಿಲ್ಲಾಧಿಕಾರಿ ಛಾವಿ ರಂಜನ್, ಭಾನು ಪ್ರತಾಪ್ ಪ್ರಸಾದ್ ಹಾಗೂ ಇತರರು ಸೇರಿದಂತೆ 25ಕ್ಕೂ ಅಧಿಕ ಮಂದಿಯನ್ನು ಬಂಧಿಸಿದೆ.
ಹೇಮಂತ್ ಸೊರೇನ್ ಅವರು ಜಾರ್ಖಂಡ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೆಲವೇ ನಿಮಿಷಗಳ ಬಳಿಕ ರಾಂಚಿಯ ರಾಜಭವನದಿಂದ ಜನವರಿ 31ರಂದು ಜಾರಿ ನಿರ್ದೇಶನಾಲಯ ಅವರನ್ನು ಬಂಧಿಸಿತ್ತು.
ಭೂಕಬಳಿಕೆಯ ಆರೋಪವನ್ನು ಹೇಮಂತ್ ಸೊರೇನ್ ನಿರಾಕರಿಸಿದ್ದಾರೆ. ರಾಜಕೀಯ ಸೇಡಿನ ಭಾಗವಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ತನ್ನನ್ನು ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಿಲುಕಿಸಿದೆ ಎಂದು ಅವರು ಆರೋಪಿಸಿದ್ದಾರೆ.