ಮೋದಿ ವಿರುದ್ಧ ಕಾಂಗ್ರೆಸ್‌ನ ಪೋಸ್ಟ್‌ಗೆ ಮಾಜಿ ಪಾಕ್ ಸಚಿವರ ಮೆಚ್ಚುಗೆ; ಹೊಸ ವಿವಾದದಲ್ಲಿ ಸಿಲುಕಿದ ಪಕ್ಷ

ಫವಾದ್ ಅಹ್ಮದ್ ಹುಸೇನ್ ಚೌಧರಿ | PC : FACEBOOK
ಹೊಸದಿಲ್ಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಬದುಕುಳಿದವರ ಹೇಳಿಕೆಗಳನ್ನು ಪ್ರಶ್ನಿಸಿದ್ದಕ್ಕಾಗಿ ಮಹಾರಾಷ್ಟ್ರ ಕಾಂಗ್ರೆಸ್ ಶಾಸಕರು ಸೋಮವಾರ ತೀವ್ರ ತರಾಟೆಗೆ ಗುರಿಯಾಗಿದ್ದ ಬೆನ್ನಲ್ಲೇ ಇದೀಗ ಸ್ವತಃ ಪಕ್ಷವೇ ಹೊಸ ವಿವಾದದಲ್ಲಿ ಸಿಕ್ಕಿಹಾಕಿಕೊಂಡಿದೆ.
ಬಂದ್‌ಗಲಾ ಕುರ್ತಾ, ಚೂಡಿದಾರ ಪೈಜಾಮ ಮತ್ತು ಕಪ್ಪು ಶೂಗಳ ಚಿತ್ರ ಮತ್ತು ‘ಗಾಯಬ್’ ಎಂದು ಬರೆಯಲಾದ ಪೋಸ್ಟರ್‌ನೊಂದಿಗೆ ಕಾಂಗ್ರೆಸ್ ಹೊಸ ವಿವಾದವನ್ನು ಹುಟ್ಟುಹಾಕಿದೆ. ಯಾವುದೋ ವ್ಯಕ್ತಿಯು ಈ ಉಡುಪನ್ನು ಧರಿಸಿರುವಂತೆ ಕಂಡು ಬರುತ್ತದೆಯಾದರೂ ಅಲ್ಲಿ ಮುಖವಿಲ್ಲ. ಈ ಶೈಲಿಯು ಪ್ರಧಾನಿ ನರೇಂದ್ರ ಮೋದಿಯವರನ್ನು ಹೋಲುತ್ತದೆ ಎನ್ನುವುದನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ತ್ವರಿತವಾಗಿ ಗುರುತಿಸಿದ್ದಾರೆ.
ಪಾಕಿಸ್ತಾನದ ಮಾಜಿ ಸಚಿವ ಫವಾದ್ ಅಹ್ಮದ್ ಹುಸೇನ್ ಚೌಧರಿಯವರು ‘ನಾಟಿ(ತುಂಟ) ಕಾಂಗ್ರೆಸ್’ ಹ್ಯಾಷ್‌ಟ್ಯಾಗ್‌ನೊಂದಿಗೆ ಈ ಪೋಸ್ಟರ್ ಅನ್ನು ಮರುಹಂಚಿಕೊಂಡ ಬಳಿಕ ವಿವಾದವು ಇನ್ನಷ್ಟು ತೀವ್ರಗೊಂಡಿದೆ.
ಕಾಂಗ್ರೆಸ್ ಪಕ್ಷದ ಪ್ರಾದೇಶಿಕ ಹ್ಯಾಂಡಲ್‌ಗಳಿಂದಲೂ ಶೇರ್ ಆಗಿರುವ ಪೋಸ್ಟರ್,ಎ.22ರಂದು ಕನಿಷ್ಠ 26 ಜನರ ಸಾವಿಗೆ ಕಾರಣವಾಗಿದ್ದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹೊಣೆಯನ್ನು ಸರಕಾರವು ವಹಿಸಿಕೊಳ್ಳಬೇಕು ಎನ್ನುವುದನ್ನು ಸೂಚಿಸುತ್ತದೆ.
ಮಾಜಿ ಪಾಕ್ ಸಚಿವ ಹೇಳಿದ್ದೇನು?:
ಕಾಂಗ್ರೆಸ್‌ನ ಪೋಸ್ಟರ್‌ಗೆ ಪ್ರತಿಕ್ರಿಯಿಸಿದ್ದ ಚೌಧರಿ, ‘ಕತ್ತೆಯ ತಲೆಯಿಂದ ಕೊಂಬುಗಳ ನಾಪತ್ತೆಯ ಬಗ್ಗೆ ಕೇಳಿದ್ದೆ, ಆದರೆ ಇಲ್ಲಿ ಮೋದಿಯವರು ಕಾಣೆಯಾಗಿದ್ದಾರೆ’ ಎಂದು ಬರೆದಿದ್ದರು.