"ಚಿಕಿತ್ಸೆ, ಆರೈಕೆ ಸಿಗದೆ ತಂದೆ ಜೈಲಿನಲ್ಲಿ ಕೊನೆಯುಸಿರೆಳೆಯುವ ಭಯ ಕಾಡುತ್ತಿದೆ": PFI ನಾಯಕ ಇ ಅಬೂಬಕರ್ ಆರೋಗ್ಯದ ಬಗ್ಗೆ ಪುತ್ರ ಕಳವಳ
ಹೊಸದಿಲ್ಲಿ: ಪಿಎಫ್ಐ ನಾಯಕ ಇ ಅಬೂಬಕರ್ ಅವರು ತಿಹಾರ್ ಜೈಲಿನಲ್ಲಿ ಕ್ಯಾನ್ಸರ್ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ಅವರಿಗೆ ಸರಿಯಾದ ಆರೈಕೆ, ಚಿಕಿತ್ಸೆ ಸಿಗದೆ ಆರೋಗ್ಯ ಸ್ಥಿತಿ ಹದಗೆಡುತ್ತಿರುವ ಬಗ್ಗೆ ಕುಟುಂಬವು ಕಳವಳವನ್ನು ವ್ಯಕ್ತಪಡಿಸಿದೆ.
ಈ ಕುರಿತು Clarion India ಜೊತೆ ಮಾತನಾಡಿದ ಇ ಅಬೂಬಕರ್ ಅವರ ಪುತ್ರ ತಲಾಲ್, ಮಾನವ ಹಕ್ಕುಗಳ ಹೋರಾಟಗಾರ ಸ್ಟಾನ್ ಸ್ವಾಮಿ ಮುಂಬೈ ಜೈಲಿನಲ್ಲಿ ಮೃತಪಟ್ಟಂತೆ ಸರಿಯಾದ ಚಿಕಿತ್ಸೆ ಮತ್ತು ಆರೈಕೆ ಸಿಗದೆ ತಂದೆ ಕೂಡ ಜೈಲಿನಲ್ಲಿ ಕೊನೆಯುಸಿರೆಳೆಯುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
2022ರ ಸೆಪ್ಟಂಬರ್ ನಲ್ಲಿ PFI ನಿಷೇಧಿಸುವ ವೇಳೆ ಇ ಅಬೂಬಕರ್ ಸೇರಿದಂತೆ ಇತರ ಪಿಎಫ್ ಐ ನಾಯಕರನ್ನು ಯುಎಪಿಎ (ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ)ಯಡಿ ಬಂಧಿಸಲಾಗಿತ್ತು. ಅವರು ವೈದ್ಯಕೀಯ ಕಾರಣ ಮುಂದಿಟ್ಟು ಜಾಮೀನು ಕೋರಿದ್ದ ಅರ್ಜಿಯನ್ನು ಮೇ ತಿಂಗಳಲ್ಲಿ ದಿಲ್ಲಿ ಹೈಕೋರ್ಟ್ ತಿರಸ್ಕರಿಸಿತ್ತು. ಪ್ರಸ್ತುತ, ಸುಪ್ರೀಂ ಕೋರ್ಟ್ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸುತ್ತಿದೆ ಮತ್ತು ಆಲ್-ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (AIIMS) ನಿಂದ ಅಬೂಬಕರ್ ಅವರ ಆರೋಗ್ಯ ಸ್ಥಿತಿಗತಿ ಬಗ್ಗೆ ವೈದ್ಯಕೀಯ ವರದಿಯನ್ನು ಕೇಳಿದೆ. ಆದರೆ ಶುಕ್ರವಾರ ನಡೆದ ವಿಚಾರಣೆ ವೇಳೆ ಅಬೂಬಕ್ಕರ್ ಅವರ ಆರೋಗ್ಯ ಸ್ಥಿತಿಗತಿಯ ಬಗ್ಗೆ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿಲ್ಲ. ಇದರಿಂದಾಗಿ ನ್ಯಾಯಾಲಯವು ಜಾಮೀನು ಅರ್ಜಿ ವಿಚಾರಣೆಯನ್ನು ಎರಡು ವಾರಗಳ ಕಾಲ ಮತ್ತೆ ಮುಂದೂಡಿದ್ದು, ಅವರ ಆರೋಗ್ಯ ಹದಗೆಡುತ್ತಿರುವ ಬಗ್ಗೆ ಕುಟುಂಬವು ಕಳವಳವನ್ನು ವ್ಯಕ್ತಪಡಿಸಿದೆ.
ಸ್ಟಾನ್ ಸ್ವಾಮಿಯವರಿಗೆ ಜಾಮೀನು ನೀಡಿಲ್ಲ. ಅವರು ಕೂಡ ಇದೇ ರೀತಿಯ ಕಾಯಿಲೆಯಿಂದ ಬಳಲುತ್ತಿದ್ದರು. ಅವರು ಬಂಧನದಲ್ಲಿರುವಾಗಲೇ ಮೃತಪಟ್ಟಿದ್ದಾರೆ. ನನ್ನ ತಂದೆಗೂ ಅದೇ ಸ್ಥಿತಿ ಬರುತ್ತಾ ಎಂಬ ಬಗ್ಗೆ ನಾವು ಭಯಪಡುತ್ತೇವೆ ಎಂದು ತಲಾಲ್ ಹೇಳಿದ್ದಾರೆ.
ಅಬೂಬಕರ್ ಅವರ ಜಾಮೀನು ಅರ್ಜಿಯಲ್ಲಿ ಅವರು ಪಾರ್ಕಿನ್ಸನ್ ಕಾಯಿಲೆ, ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ದೃಷ್ಟಿಹೀನತೆಯಿಂದ ಬಳಲುತ್ತಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಇದಲ್ಲದೆ, ಅವರು ಕೀಮೋಥೆರಪಿ ಸೇರಿದಂತೆ ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗಿದ್ದರು. ಅಬೂಬಕರ್ ಅವರ ಆರೋಗ್ಯ ಸ್ಥಿತಿಯ ಬಗ್ಗೆ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ನಂತರ 40 ಬಾರಿ ಚಿಕಿತ್ಸೆಗಾಗಿ ಜೈಲಿನಿಂದ ಏಮ್ಸ್ ಗೆ ಕರೆದೊಯ್ಯಲಾಗಿದೆ. ಆದರೆ, ಇಷ್ಟೊಂದು ಗಂಭೀರ ಸ್ಥಿತಿಯಲ್ಲಿದ್ದರೂ ಒಮ್ಮೆಯೂ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿಲ್ಲ. ಅವರಿಗೆ ಒಪಿಡಿಯಲ್ಲೇ ತಪಾಸಣೆ ನಡೆಸಿ ಜೈಲಿಗೆ ವಾಪಾಸ್ಸು ಕರೆದೊಯ್ಯಲಾಗುತ್ತದೆ ಎಂದು ತಲಾಲ್ ಹೇಳಿದ್ದಾರೆ.
ಅಬೂಬಕರ್ ಅವರನ್ನು ಬಂಧಿಸುವಾಗ ಅವರು ಹಾಸಿಗೆ ಹಿಡಿದಿದ್ದರು ಮತ್ತು ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದರು. ಜೈಲಿನಲ್ಲಿಯೂ ಹಾಸಿಗೆ ಹಿಡಿದಿದ್ದು, ತನ್ನ ಆರೋಗ್ಯವನ್ನು ನೋಡಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ಅವರಿಗೆ ಊಟ, ಸ್ನಾನ ಸೇರಿದಂತೆ ವೈಯಕ್ತಿಕ ಕೆಲಸವನ್ನು ಮಾಡಲು ಇನ್ನೋರ್ವ ಕೈದಿ ನೆರವಾಗುತ್ತಿದ್ದಾರೆ. ವೈದ್ಯಕೀಯ ಕಾರಣಕ್ಕಾಗಿ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದು ತಲಾಲ್ ಹೇಳಿದ್ದಾರೆ.
ಅಬೂಬಕರ್ ಅವರಲ್ಲದೆ ಇನ್ನೋರ್ವ ಕೈದಿ ಎ.ಎಸ್.ಇಸ್ಮಾಯಿಲ್ ಅವರು ಕೂಡ ತಿಹಾರ್ ಜೈಲಿನಲ್ಲಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇಸ್ಮಾಯಿಲ್ ಅವರ ಕುಟುಂಬದ ಸದಸ್ಯರು ಈ ಬಗ್ಗೆ ಪ್ರತಿಕ್ರಿಯಿಸಿ, ನಾವು ಇ ಅಬೂಬಕರ್ ಮತ್ತು ಎಎಸ್ ಇಸ್ಮಾಯಿಲ್ ಅವರ ಬಗ್ಗೆ ಚಿಂತಿತರಾಗಿದ್ದೇವೆ, ಎಎಸ್ ಇಸ್ಮಾಯಿಲ್ ಅವರು ತಿಹಾರ್ ಸೆಂಟ್ರಲ್ ಜೈಲಿನಲ್ಲಿ ಪಾರ್ಶ್ವವಾಯುವಿಗೆ ಒಳಗಾಗಿದ್ದಾರೆ, ಅವರ ಬಲಭಾಗವು ಸಂಪೂರ್ಣವಾಗಿ ಪಾರ್ಶ್ವವಾಯುವಿಗೆ ಒಳಗಾಗಿದೆ. ಅವರನ್ನು ಅಧಿಕಾರಿಗಳು ಆಸ್ಪತ್ರೆಗೆ ಕರೆದೊಯ್ಯುವಾಗ ಅಮೂಲ್ಯ ಸಮಯವು ಕಳೆದು ಹೋಗಿತ್ತು. ಎಎಸ್ ಇಸ್ಮಾಯಿಲ್ ಅವರು ತಿಹಾರ್ ಜೈಲಿನ ನಂಬರ್ ಮೂರರಲ್ಲಿ ಬಂಧಿತರಾಗಿದ್ದಾರೆ. ಅವರಿಗೆ ದೇಹದ ಬಲಭಾಗದ ಚಲನೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.