ಅದಾನಿ ಗ್ರೂಪ್‌ನ ಮುಂದ್ರಾ ಬಂದರಿನಿಂದ ಪಹಲ್ಗಾಮ್‌ವರೆಗೆ..

ಅದಾನಿ ಗ್ರೂಪ್‌ನ ಮುಂದ್ರಾ ಬಂದರು | PC : PTI
ಹೊಸದಿಲ್ಲಿ: ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಯು ಸರ್ವೋಚ್ಚ ನ್ಯಾಯಾಲಯದಲ್ಲಿ ಬಹಿರಂಗಗೊಳಿಸಿರುವ ಪ್ರಮುಖ ಮಾಹಿತಿಯಲ್ಲಿ ಇತ್ತೀಚಿನ ಪಹಲ್ಗಾಮ್ ಭಯೋತ್ಪಾದಕ ದಾಳಿಗೂ ಪಾಕಿಸ್ತಾನದ ಐಎಸ್‌ಐ ಬೆಂಬಲಿತ ಲಷ್ಕರೆ ತೈಬಾ(ಎಲ್‌ಇಟಿ)ದ ಮಾದಕ ದ್ರವ್ಯ ಕಳ್ಳಸಾಗಣೆ ಕಾರ್ಯತಂತ್ರಕ್ಕೂ ಸಂಬಂಧವಿದೆ ಎಂದು ತಿಳಿಸಿದೆ. ತನ್ನ ಕಾರ್ಯಾಚರಣೆಗಳಿಗೆ ಹಣ ಸಂಗ್ರಹಿಸುವುದು ಮತ್ತು ಭಾರತೀಯ ಯುವಜನರಿಗೆ ಮಾದಕ ದ್ರವ್ಯಗಳನ್ನು ವಿತರಿಸುವ ಮೂಲಕ ಭಾರತವನ್ನು ಅಸ್ಥಿರಗೊಳಿಸುವುದು ಈ ಭಯೋತ್ಪಾದಕ ಗುಂಪಿನ ವ್ಯಾಪಕ ಹುನ್ನಾರವಾಗಿದೆ ಎಂದು ಅದು ಹೇಳಿದೆ ಎಂದು ವರದಿಯಾಗಿದೆ.
ಗುಜರಾತಿನ ಅದಾನಿ ಗ್ರೂಪ್‌ನ ಮುಂದ್ರಾ ಬಂದರಿನಲ್ಲಿ ವಶಪಡಿಸಿಕೊಳ್ಳಲಾದ 21,000 ಕೋಟಿ ರೂ.ಮೌಲ್ಯದ 3,000 ಕೆಜಿ ಹೆರಾಯಿನ್ ಎಲ್‌ಐಟಿಯ ಕಾರ್ಯಂತ್ರದ ಭಾಗವಾಗಿತ್ತು. ಹೆರಾಯಿನ್‌ನ್ನು ಟಾಲ್ಕ್ ಪೌಡರ್ ಸೋಗಿನಲ್ಲಿ ಮಾನ್ಯ ದಾಖಲೆಗಳನ್ನು ಬಳಸಿ ಅಪಫ್ಘಾನಿಸ್ತಾನದಿಂದ ಇರಾನ್ ಮೂಲಕ ಆಮದು ಮಾಡಿಕೊಳ್ಳಲಾಗಿತ್ತು ಮತ್ತು ಮಾರಾಟದ ಹಣವನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಒದಗಿಸಲು ಉದ್ದೇಶಿಸಲಾಗಿತ್ತು ಎಂದು ಎನ್‌ಐಎ ನ್ಯಾಯಮೂರ್ತಿಗಳಾದ ಸೂರ್ಯಕಾಂತ ಮತ್ತು ಎನ್.ಕೋಟಿಶ್ವರ ಸಿಂಗ್ ಅವರ ಪೀಠಕ್ಕೆ ತಿಳಿಸಿದೆ.
ಎಲ್‌ಇಟಿಯ ಕಾರ್ಯಾಚರಣೆಗಳನ್ನು ವಿವರಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ,ಪಹಲ್ಗಾಮ್‌ನಲ್ಲಿ ಅಮಾಯಕ ಪ್ರವಾಸಿಗಳನ್ನು ಗುಂಡಿಟ್ಟು ಕೊಂದ ಅವರು ಭಾರತಕ್ಕೆ ಏನು ಮಾಡಿದ್ದಾರೆ ನೋಡಿ ಎಂದು ಹೇಳಿದರು.
ಎನ್‌ಐಎ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿರುವ ಅಫಿಡವಿಟ್‌ನಲ್ಲಿ, ಹಿಂದೆಯೂ ಇದೇ ರೀತಿ ಇರಾನಿನ ಮಧ್ಯವರ್ತಿಗಳ ಮೂಲಕ ಮಾದಕ ದ್ರವ್ಯಗಳನ್ನು ಭಾರತಕ್ಕೆ ತರಲಾಗಿತ್ತು ಹಾಗೂ ದಿಲ್ಲಿಯ ನೆಬ್ ಸರಾಯ್ ಮತ್ತು ಅಲಿಪುರದ ಗೋದಾಮುಗಳಲ್ಲಿ ಸಂಗ್ರಹಿಸಲಾಗಿತ್ತು. ಮಾರಾಟದಿಂದ ಬಂದಿದ್ದ ಹಣವನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಆರ್ಥಿಕ ನೆರವು ಒದಗಿಸಲು ಬಳಸಲಾಗಿತ್ತು ಎಂದು ಆರೋಪಿಸಲಾಗಿದೆ.
ಇದು ಭಾರತಕ್ಕೆ ಅಕ್ರಮ ಮಾರ್ಗಗಳ ಮೂಲಕ ತರಲಾಗುತ್ತಿದ್ದ ಮತ್ತು ಕಾನೂನು ಜಾರಿ ಸಂಸ್ಥೆಗಳು ವಶಪಡಿಸಿಕೊಂಡಿರುವ ಅತ್ಯಂತ ದೊಡ್ಡ ಮಾದಕ ದ್ರವ್ಯ ಪ್ರಕರಣವಾಗಿದ್ದು,ಇದನ್ನು ಸಾರ್ವಜನಿಕರಿಗೆ (ಉದ್ದೇಶಿತ ಬಳಕೆದಾರರಿಗೆ) ಮಾರಾಟ ಮಾಡಿ ಅವರನ್ನು ಹಾಳು ಮಾಡುವುದು ಮಾತ್ರವಲ್ಲ,ಮಾರಾಟದ ಹಣವನ್ನು ಭಯೋತ್ಪಾದನೆಗೆ ಬಳಸುವುದು ಉದ್ದೇಶವಾಗಿತ್ತು ಎಂದು ಎನ್‌ಐಎ ತಿಳಿಸಿದೆ.
ಭಯೋತ್ಪಾದಕರ ಗುರುತು ಪತ್ತೆ:
ಈ ನಡುವೆ ಎ.22ರಂದು ಪಹಲ್ಗಾಮ್‌ನಲ್ಲಿ 26 ಪ್ರವಾಸಿಗಳ ಸಾವಿಗೆ ಕಾರಣವಾಗಿದ್ದ ಗುಂಡಿನ ದಾಳಿ ನಡೆಸಿದ್ದ ಶಂಕಿತ ಭಯೋತ್ಪಾದಕರನ್ನು ಗುರುತಿಸಲಾಗಿದ್ದು,ಭದ್ರತಾ ಸಂಸ್ಥೆಗಳು ಅವರ ಚಿತ್ರಗಳನ್ನು ಬಿಡುಗಡೆ ಮಾಡಿವೆ. ಅನಂತನಾಗ್‌ನ ಆದಿಲ್ ಗುರೀ ಮತ್ತು ಸೋಪೋರ ನಿವಾಸಿ ಆಸಿಫ್ ಶೇಖ್, ಪಾಕ್ ಪ್ರಜೆಗಳೆಂದು ಶಂಕಿಸಲಾಗಿರುವ ಸುಲೇಮಾನ್ ಶೇಖ್ ಮತ್ತು ಅಬು ತಲ್ಹಾ ಆರೋಪಿಗಳಾಗಿದ್ದಾರೆ.