90 ಸಾವಿರದಿಂದ ಕೆಳಗಿಳಿದ ಚಿನ್ನದ ದರ; 4 ದಿನಗಳಲ್ಲಿ 4 ಸಾವಿರ ರೂ. ಕುಸಿತ

ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ: ಚಿನಿವಾರ ಪೇಟೆಯಲ್ಲಿ ಚಿನ್ನದ ವ್ಯಾಪಾರಿಗಳು ಬುಧವಾರ ಚಿನ್ನವನ್ನು ಕಡಿಮೆ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದರಿಂದ, ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿನ ಚಿನ್ನದ ದರ ಪ್ರತಿ 10 ಗ್ರಾಂಗೆ 1,050 ರೂ.ನಷ್ಟು ಇಳಿಕೆಗೊಂಡು, 90,200 ರೂ.ಗೆ ತಲುಪಿತು ಎಂದು ಆಲ್ ಇಂಡಿಯಾ ಸರಾಫಾ ಅಸೋಸಿಯೇಶನ್ ಹೇಳಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕಳೆದ ನಾಲ್ಕು ದಿನಗಳಲ್ಲಿ ಚಿನ್ನದ ಬೆಲೆ 4,150 ರೂ. ಕುಸಿತ ಕಂಡಿದೆ. ಎಪ್ರಿಲ್ 3 ರಂದು ಗುರುವಾರ ಚಿನ್ನವು ತನ್ನ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿ, ದಿಲ್ಲಿಯಲ್ಲಿ 10 ಗ್ರಾಂಗೆ 94,350 ರೂ.ಗೆ ತಲುಪಿತ್ತು.
ಮಂಗಳವಾರ ಮಾರುಕಟ್ಟೆ ಮುಕ್ತಾಯಗೊಂಡಾಗ, 24 ಕ್ಯಾರೆಟ್ ಚಿನ್ನದ ದರ ಪ್ರತಿ 10 ಗ್ರಾಂಗೆ 91,250 ರೂ.ನಷ್ಟಿತ್ತು. ಆದರೆ, ಮಂಗಳವಾರಕ್ಕೆ ಹೋಲಿಸಿದರೆ, ಬುಧವಾರ ಪ್ರತಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ದರವು 1,050 ರೂ.ನಷ್ಟು ಇಳಿಕೆಗೊಂಡು, 89,750 ರೂ.ಗೆ ತಲುಪಿತು. ಮಂಗಳವಾರ ಮಾರುಕಟ್ಟೆ ಮುಕ್ತಾಯಗೊಂಡಾಗ ಚಿನ್ನದ ದರವು ಪ್ರತಿ 10 ಗ್ರಾಂಗೆ 90,800 ರೂ.ನಷ್ಟಿತ್ತು.
ಆದರೆ, ಬುಧವಾರ ಬೆಳ್ಳಿಯ ದರದಲ್ಲಿ ಪ್ರತಿ ಕೆಜಿಗೆ 500 ರೂ. ಏರಿಕೆಯಾಗಿದ್ದು, 93,200 ರೂ.ಗೆ ತಲುಪಿದೆ. ಮಂಗಳವಾರದ ಮಾರುಕಟ್ಟೆ ಮುಕ್ತಾಯಗೊಂಡಾಗ, ಪ್ರತಿ ಕೆಜಿ ಬೆಳ್ಳಿಯ ದರ 92,700 ರೂ.ನಷ್ಟಿತ್ತು.
ಈ ನಡುವೆ, ಒಂದು ಔನ್ಸ್ ಅಲಂಕಾರಿಕ ಚಿನ್ನದ ದರ 61.98 ಡಾಲರ್ ಅಥವಾ ಶೇ. 2.08ರಷ್ಟು ಏರಿಕೆಯಾಗಿದ್ದು, ಸಾಗರೋತ್ತರ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಅಲಂಕಾರಿಕ ಚಿನ್ನದ ದರ 3,044.14 ಡಾಲರ್ ಗೆ ತಲುಪಿದೆ.