ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ತಪ್ಪೊಪ್ಪಿಕೊಂಡ ಬಂಧಿತ ವಿದ್ಯಾರ್ಥಿಗಳು
ಪಾಟ್ನಾ: ನೀಟ್ ಫಲಿತಾಂಶದ ಕುರಿತು ವಿವಾದಗಳು ಭುಗಿಲೆದ್ದಿರುವ ಬೆನ್ನಿಗೇ, ನೀಟ್ ಪರೀಕ್ಷೆಗೂ ಮುನ್ನಾ ದಿನ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು ಎಂದು ಬಿಹಾರ ಪೊಲೀಸರಿಂದ ಬಂಧಿತರಾಗಿರುವ ವಿದ್ಯಾರ್ಥಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.
ನೀಟ್-ಯುಜಿ ಪರೀಕ್ಷೆಗೂ ಮುನ್ನ ನಮಗೆ ಪ್ರಶ್ನೆ ಪತ್ರಿಕೆ ದೊರೆಯಿತು ಹಾಗೂ ಅದಕ್ಕೆ ಉತ್ತರಗಳನ್ನು ಕಂಠಪಾಠ ಮಾಡುವಂತೆ ನಮಗೆ ಸೂಚಿಸಲಾಯಿತು ಎಂದು ಬಂಧಿತ ವಿದ್ಯಾರ್ಥಿಗಳು ತಪ್ಪೊಪ್ಪಿಕೊಂಡಿದ್ದಾರೆ. ಮರುದಿನ ನಡೆದ ಪರೀಕ್ಷೆಯಲ್ಲಿ ನಾವು ಉತ್ತರಗಳನ್ನು ಕಂಠಪಾಠ ಮಾಡಿದ ಪ್ರಶ್ನೆಗಳನ್ನೇ ಕೇಳಲಾಗಿತ್ತು ಎಂದು ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ಈ ವಿದ್ಯಾರ್ಥಿಗಳು ತಿಳಿಸಿದ್ದಾರೆ ಎನ್ನಲಾಗಿದೆ.
ನೀಟ್-ಯುಜಿ 2024 ಫಲಿತಾಂಶದ ಸುತ್ತ ಭಾರಿ ವಿವಾದ ಸೃಷ್ಟಿಯಾಗಿದ್ದು, 1,500ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಿರುವುದು ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಆರೋಪದ ವಿರುದ್ಧ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ.
ಇದರ ನಂತರ ಕೃಪಾಂಕವನ್ನು ರದ್ದುಗೊಳಿಸಲಾಗಿದ್ದು, ಕೃಪಾಂಕ ಪಡೆದಿದ್ದ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸಲಾಗುತ್ತಿದೆ. ಆದರೆ, ಇದಕ್ಕೂ ಮುನ್ನ ನೀಟ್-ಯುಜಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಆರೋಪಗಳನ್ನು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ನಿರಾಕರಿಸಿದ್ದರು.
ಮೇ 5ರಂದು ನಡೆದಿದ್ದ ನೀಟ್-ಯುಜಿ 2024ರ ಪರೀಕ್ಷೆಗೆ ಸುಮಾರು 24 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು.