ಸರಪಂಚ ಹತ್ಯೆ ಆರೋಪಿ ಕಾರಡ್ ಎನ್‍ಕೌಂಟರ್‌ಗೆ ಆಫರ್ ಇತ್ತು: ಅಮಾನತುಗೊಂಡ ಪೊಲೀಸ್ ಹೇಳಿಕೆ

ಸಂತೋಷ್ ದೇಶ್ ಮುಖ್ (Photo credit: dainikprabhat.com)
ಛತ್ರಪತಿ ಸಂಭಾಜಿನಗರ : ಸರಪಂಚ ಸಂತೋಷ್ ದೇಶಮುಖ್ ಹತ್ಯೆ ಪ್ರಕರಣದ ಆರೋಪಿ ವಾಲ್ಮಿಕ್ ಕಾರಡ್‍ನ ಎನ್‍ಕೌಂಟರ್ ನಡೆಸಲು ತಮಗೆ ಕೆಲ ವ್ಯಕ್ತಿಗಳು ಆಫರ್ ನೀಡಿದ್ದರು ಎಂದು ಅಮಾನತುಗೊಂಡಿರುವ ಬೀಡ್ ಸಬ್ ಇನ್‍ಸ್ಪೆಕ್ಟರ್ ಬಹಿರಂಗಪಡಿಸಿದ್ದಾರೆ.
ಎನ್‍ಕೌಂಟರ್ ಗೆ ಆಫರ್ ನೀಡಿದ ವ್ಯಕ್ತಿಗಳ ಹೆಸರನ್ನು ಸ್ಥಳೀಯ ಪೊಲೀಸ್ ಠಾಣೆಯ ಡೈರಿಯಲ್ಲಿ ಉಲ್ಲೇಖಿಸಿದ್ದಾಗಿ ಎಸೈ ರಂಜೀತ್ ಕಲ್ಸೆ ಹೇಳಿದ್ದಾರೆ. ಆದರೆ ಹಿರಿಯ ಪೊಲೀಸ್ ಅಧಿಕಾರಿಗಳು ಇದನ್ನು ಆಧಾರ ರಹಿತ ಎಂದು ಬಣ್ಣಿಸಿದ್ದು, ತಮ್ಮ ಹೇಳಿಕೆಗೆ ಪೂರಕವಾದ ದಾಖಲೆ ಸಲ್ಲಿಸಲಿ ಎಂದು ತಾಕೀತು ಮಾಡಿದ್ದಾರೆ. ಈ ಮೊದಲು ಸ್ಥಳೀಯ ಸೈಬರ್ ಅಪರಾಧ ವಿಭಾಗದಲ್ಲಿ ಸಬ್ ಇನ್‍ಸ್ಪೆಕ್ಟರ್ ಆಗಿದ್ದ ಅವಧಿಯಲ್ಲೂ ಕಲ್ಸೆ ಅಮಾನತುಗೊಂಡಿದ್ದರು.
ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಮಸ್ಸಾಜೋಗ್ ಗ್ರಾಮದ ಸರಪಂಚ ಆಗಿದ್ದ ದೇಶಮುಖ್ ಅವರನ್ನು ಕಳೆದ ವರ್ಷದ ಡಿಸೆಂಬರ್ 9ರಂದು ಅಪಹರಿಸಿ ಚಿತ್ರಹಿಂಸೆ ನೀಡಿ ಹತ್ಯೆ ಮಾಡಲಾಗಿತ್ತು. ವಿದ್ಯುತ್ ಕಂಪನಿಯೊಂದರಿಂದ ಹಣ ಸುಲಿಗೆ ಮಾಡುವ ಪ್ರಯತ್ನವನ್ನು ತಡೆದ ಹಿನ್ನೆಲೆಯಲ್ಲಿ ಈ ಹತ್ಯೆ ಮಾಡಲಾಗಿದೆ ಎಂದು ಆಪಾದಿಸಲಾಗಿತ್ತು.
ಈ ಸಂಬಂಧ ಎಂಕೋಕಾ ಕಾಯ್ದೆಯಡಿ ಕಾರಡ್ ಸೇರಿದಂತೆ ಎಂಟು ಮಂದಿಯನ್ನು ಬಂಧಿಸಲಾಗಿತ್ತು. ದೇಶಮುಖ್ ಹತ್ಯೆಗೆ ಸಂಬಂಧಿಸಿದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸಿಐಡಿ ಕಳೆದ ತಿಂಗಳು 1,200 ಪುಟಗಳ ಆರೋಪಪಟ್ಟಿಯನ್ನು ಬೀಡ್ ನ್ಯಾಯಾಲಯದಲ್ಲಿ ಸಲ್ಲಿಸಿತ್ತು. ಕೆಲ ವ್ಯಕ್ತಿಗಳು ತಮ್ಮನ್ನು ಸಂಪರ್ಕಿಸಿ ಆರೋಪಿ ಕಾರಡ್ ಎನ್‍ಕೌಂಟರ್ ಗೆ ಆಫರ್ ನೀಡಿದ್ದರು ಎಂದು ಸ್ಥಳೀಯ ಸುದ್ದಿ ಚಾನಲ್ ಜತೆ ಮಾತನಾಡಿದ ಕಲ್ಸೆ ಹೇಳಿಕೊಂಡಿದ್ದಾರೆ.
"ಠಾಣೆಯ ದಿನಚರಿಯಲ್ಲಿ ಆಫರ್ ನೀಡಿದವರ ಹೆಸರನ್ನೂ ನಮೂದಿಸಿದ್ದೆ. ವಾಲ್ಮೀಕ್ ಕಾರಡ್ ಎನ್‍ಕೌಂಟರ್ ಗೆ ಮಾತ್ರ ನಾನು ಅಮಾನತುಗೊಳ್ಳುವ ಮುನ್ನ ಆಫರ್ ನೀಡಲಾಗಿತ್ತು. ಅಂಥ ಪಾಪ ಮಾಡುವುದಿಲ್ಲ ಎಂದು ಆಫರ್ ನಿರಾಕರಿಸಿದ್ದೆ" ಎಂದು ಅವರು ಸ್ಪಷ್ಟಪಡಿಸಿದ್ದಾರೆ. 10, 20, 50 ಕೋಟಿ ರೂ. ವರೆಗೂ ಆಫರ್ ಇತ್ತು ಎಂದು ಅವರು ವಿವರಿಸಿದ್ದಾರೆ.