ತೆಲಂಗಾಣದಲ್ಲಿ ಸರ್ಕಾರಿ ಜಾಹಿರಾತು: ಕರ್ನಾಟಕ ಸರ್ಕಾರಕ್ಕೆ ಚುನಾವಣಾ ಆಯೋಗ ನೋಟಿಸ್
ಹೊಸದಿಲ್ಲಿ: ತೆಲಂಗಾಣದಲ್ಲಿ ಸರ್ಕಾರಿ ಜಾಹೀರಾತುಗಳನ್ನು ಹಾಕುವ ಮೂಲಕ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರಕ್ಕೆ ಚುನಾವಣಾ ಆಯೋಗ ಸೋಮವಾರ ನೋಟಿಸ್ ಜಾರಿ ಮಾಡಿದೆ.
ಕರ್ನಾಟಕ ಸರ್ಕಾರವು ಹಲವಾರು ಪತ್ರಿಕೆಗಳ ಹೈದರಾಬಾದ್ ಆವೃತ್ತಿಗಳಲ್ಲಿ ಜಾಹೀರಾತುಗಳನ್ನು ಪ್ರಕಟಿಸಿದೆ ಎಂದು ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ತೆಲಂಗಾಣದ ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಪಕ್ಷಗಳು ಗಮನಕ್ಕೆ ತಂದಿವೆ ಎಂದು ಚುನಾವಣಾ ಸಮಿತಿಯು ಹೇಳಿಕೆಯಲ್ಲಿ ತಿಳಿಸಿದೆ.
"ಚುನಾವಣೆ ನಡೆಯುವ ತೆಲಂಗಾಣ ರಾಜ್ಯದಲ್ಲಿ ಪ್ರಸಾರವಾಗುತ್ತಿರುವ ಪತ್ರಿಕೆಗಳಲ್ಲಿ ಕರ್ನಾಟಕ ಸರ್ಕಾರದ ಕಲ್ಯಾಣ ಯೋಜನೆಗಳು ಮತ್ತು ಸರ್ಕಾರದ ಸಾಧನೆಗಳನ್ನು ಎತ್ತಿ ತೋರಿಸುವ ಜಾಹೀರಾತುಗಳನ್ನು ನೀಡುವುದು ಆಯೋಗದ ಮೇಲಿನ ನಿರ್ದೇಶನಗಳ ಸಂಪೂರ್ಣ ಉಲ್ಲಂಘನೆಯಾಗಿದೆ" ಎಂದು ಚುನಾವಣಾ ಆಯೋಗದ ಅಧಿಸೂಚನೆ ತಿಳಿಸಿದೆ.
ನವೆಂಬರ್ 28 ರೊಳಗೆ ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಕಾರಣವಾದ ಸಂದರ್ಭಗಳನ್ನು ವಿವರಿಸುವಂತೆ ಚುನಾವಣಾ ಸಮಿತಿಯು ಕರ್ನಾಟಕ ಸರ್ಕಾರವನ್ನು ಕೇಳಿದೆ.
ತೆಲಂಗಾಣ ರಾಜ್ಯದಲ್ಲಿ ಇಂತಹ ಯಾವುದೇ ಜಾಹೀರಾತುಗಳ ಪ್ರಕಟಣೆಯನ್ನು ತಕ್ಷಣವೇ ನಿಲ್ಲಿಸುವಂತೆಯೂ ಆಯೋಗ ಸಿದ್ದರಾಮಯ್ಯ ಸರ್ಕಾರಕ್ಕೆ ಸೂಚಿಸಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗಾಗಿ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಭಾರಿ ಕಾರ್ಯದರ್ಶಿ ವಿರುದ್ಧ ಏಕೆ ಶಿಸ್ತು ಕ್ರಮ ಕೈಗೊಂಡಿಲ್ಲ ಎಂಬುದನ್ನು ವಿವರಿಸಲು ಸರ್ಕಾರವನ್ನು ಕೇಳಲಾಗಿದೆ.