ಬಹುಕೋಟಿ ಲಂಚ ಪ್ರಕರಣದಲ್ಲಿ ಅದಾನಿಯನ್ನು ಸರ್ಕಾರ ರಕ್ಷಿಸುತ್ತಿದೆ: ರಾಹುಲ್ ಗಾಂಧಿ
ಹೊಸದಿಲ್ಲಿ: ಉದ್ಯಮಿ ಗೌತಮ್ ಅದಾನಿ ಅವರನ್ನು ಬಂಧಿಸಬೇಕು. ಆದರೆ, ಸರ್ಕಾರ ಅವರನ್ನು ರಕ್ಷಿಸುತ್ತಿದೆ ಎಂದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಆರೋಪಿಸಿದ್ದಾರೆ.
ಸಂಸತ್ತಿನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ʼದೇಶದಲ್ಲಿ ಸಣ್ಣ ಆರೋಪಗಳ ಮೇಲೆ ನೂರಾರು ಜನರನ್ನು ಬಂಧಿಸಿರುವಾಗ, ಅದಾನಿಯ ಬಂಧನ ಇನ್ನೂ ಯಾಕೆ ಆಗಿಲ್ಲ" ಎಂದು ಅವರು ಪ್ರಶ್ನಿಸಿದ್ದಾರೆ.
ಅದಾನಿ ಹಾಗೂ ಅವರ ಸೋದರಳಿಯ ಸಾಗರ್ ಅದಾನಿ ಅವರ ವಿರುಧ ಲಂಚ ಪ್ರಕರಣದಲ್ಲಿ ಅಮೆರಿಕಾ ಅಧಿಕಾರಿಗಳು ನ್ಯಾಯಾಲಯದಲ್ಲಿ ದೋಷಾರೋಪಣೆಯಲ್ಲಿ ಸಲ್ಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ರಾಹುಲ್ ಗಾಂಧಿ, ಅದಾನಿಯನ್ನು ಕೇಂದ್ರ ಸರ್ಕಾರ ರಕ್ಷಿಸುತ್ತಿದೆ ಎಂದು ಪುನರುಚ್ಛಿಸಿದ್ದಾರೆ.
ಅದಾನಿ ಹಾಗೂ ಸಾಗರ್ ಅದಾನಿಯ ವಿರುದ್ಧ ಸಲ್ಲಿಸಲಾದ ದೋಷಾರೋಪಣೆಯಲ್ಲಿ ಅಮೇರಿಕಾದ ವಿದೇಶಿ ಭ್ರಷ್ಟ ಆಚರಣೆಗಳ ಕಾಯ್ದೆ (ಎಫ್‌ಸಿಪಿಎ) ಯ ಯಾವುದೇ ಉಲ್ಲಂಘನೆಯ ಆರೋಪ ಹೊರಿಸಿಲ್ಲ ಎಂದು ಅದಾನಿ ಗ್ರೂಪ್ ಹೇಳಿದ ಬೆನ್ನಲ್ಲೇ ರಾಹುಲ್ ಗಾಂಧಿ ಈ ಆರೋಪವನ್ನು ಮಾಡಿದ್ದಾರೆ.
"ಅದಾನಿಗಳು ಆರೋಪಗಳನ್ನು ಒಪ್ಪಿಕೊಳ್ಳುತ್ತಾರೆ ಎಂದು ನೀವು ಭಾವಿಸುತ್ತೀರಾ?. ನೀವು ಯಾವ ಜಗತ್ತಿನಲ್ಲಿ ವಾಸಿಸುತ್ತಿದ್ದೀರಿ? ಅವರು ಆರೋಪಗಳನ್ನು ನಿರಾಕರಿಸಲಿದ್ದಾರೆ ಎನ್ನುವುದು ನಿಸ್ಸಂಶಯ" ಎಂದು ಅದಾನಿ ಗ್ರೂಪ್ ಆರೋಪಗಳನ್ನು ನಿರಾಕರಿಸುವ ಬಗ್ಗೆ ಕೇಳಿದ ಪ್ರಶ್ನೆಗೆ ರಾಹುಲ್ ಉತ್ತರಿಸಿದ್ದಾರೆ.
"ಅವರನ್ನು ಬಂಧಿಸಬೇಕು. ನಾವು ಹೇಳಿದಂತೆ, ನೂರಾರು ಜನರನ್ನು ಸಣ್ಣ ಆರೋಪಗಳ ಮೇಲೆ ಬಂಧಿಸಲಾಗುತ್ತಿದೆ. ಆದರೆ, ಸಂಭಾವಿತ ವ್ಯಕ್ತಿಯ ವಿರುದ್ಧ ಅಮೇರಿಕಾದ ನ್ಯಾಯಾಲಯದಲ್ಲಿ ಸಾವಿರಾರು ಕೋಟಿಗಳ ದೋಷಾರೋಪಣೆ ಮಾಡಲಾಗಿದೆ, ಅವರು ಜೈಲಿನಲ್ಲಿರಬೇಕಾದವರು. ಆದರೆ, ಸರ್ಕಾರ ಅವರನ್ನು ರಕ್ಷಿಸುತ್ತಿದೆ," ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.