ರಾಮಮಂದಿರ ಕಾರ್ಯಕ್ರಮದಲ್ಲಿ ಸರಕಾರ ಭಾಗಿಯಾಗಿದ್ದು ಜಾತ್ಯತೀತತೆಯ ನಂಬಿಕೆಯ ವಿರುದ್ಧ: ಮಾಜಿ ಅಧಿಕಾರಿಗಳಿಂದ ಬಹಿರಂಗ ಪತ್ರ

Update: 2024-02-09 14:53 GMT

Photo: @BJP4India/X 

ಹೊಸದಿಲ್ಲಿ: ಮಾಜಿ ಸರಕಾರಿ ನೌಕರರ ಗುಂಪು ಕಾನ್‌ಸ್ಟಿಟ್ಯೂಷನಲ್ ಕಂಡಕ್ಟ್ ಗ್ರೂಪ್ (ಸಿಸಿಜಿ) ಗುರುವಾರ ಬಹಿರಂಗ ಪತ್ರದಲ್ಲಿ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಜ.22ರಂದು ನಡೆದ ರಾಮ ಮಂದಿರ ಉದ್ಘಾಟನೆಯೊಂದಿಗೆ ಭಾರತ ಸರಕಾರವು ನಿಕಟವಾಗಿ ಗುರುತಿಸಿಕೊಂಡಿದ್ದರ ಬಗ್ಗೆ ತೀವ್ರ ಆತಂಕವನ್ನು ವ್ಯಕ್ತಪಡಿಸಿದೆ.

ಭಾರತೀಯ ಸಂವಿಧಾನದ ಪ್ರಕಾರ ಧರ್ಮವು ಖಾಸಗಿ ವಿಷಯವಾಗಿದೆ ಮತ್ತು ಸರಕಾರಿ ಅಧಿಕಾರಿಗಳು ಸೇರಿದಂತೆ ಎಲ್ಲ ಜನರು ತಮ್ಮ ಧಾರ್ಮಿಕ ನಂಬಿಕೆಗಳನ್ನು ಅನುಸರಿಸಲು ಸ್ವತಂತ್ರರಾಗಿದ್ದಾರೆ,ಸರಕಾರಿ ಅಧಿಕಾರಿಗಳು ತಮ್ಮ ಧಾರ್ಮಿಕ ನಂಬಿಕೆಗಳು ಮತ್ತು ಆಚರಣೆಗಳನ್ನು ತಮ್ಮ ಅಧಿಕೃತ ಕರ್ತವ್ಯಗಳಿಂದ ಪ್ರತ್ಯೇಕಿಸಲು ಎಚ್ಚರಿಕೆಯನ್ನು ವಹಿಸುವುದು ಕಡ್ಡಾಯವಾಗಿದೆ ಎಂದು ಪತ್ರದಲ್ಲಿ ಬೆಟ್ಟು ಮಾಡಿರುವ 65 ಮಾಜಿ ಸರಕಾರಿ ಅಧಿಕಾರಿಗಳ ಗುಂಪು, ಒಂದು ಧಾರ್ಮಿಕ ಸಮುದಾಯದವರಿಗೆ ಮಾತ್ರವಲ್ಲ,ವೈವಿಧ್ಯಮಯ ಧಾರ್ಮಿಕ ನಂಬಿಕೆಗಳನ್ನು ಹೊಂದಿರುವ ಎಲ್ಲ ಭಾರತೀಯರ ನಾಯಕನಾಗಿರುವ,ಪ್ರಧಾನ ಮಂತ್ರಿಯ ಉನ್ನತ ಸಾಂವಿಧಾನಿಕ ಹುದ್ದೆಯನ್ನು ಹೊಂದಿರುವ ವ್ಯಕ್ತಿಗೆ ಇದು ವಿಶೇಷವಾಗಿ ಮುಖ್ಯವಾಗಿದೆ ಎಂದು ಹೇಳಿದೆ.

ಜ.22ರಂದು ರಾಮಮಂದಿರ ಉದ್ಘಾಟನೆಯಲ್ಲಿ ಪ್ರಧಾನಿಯವರ ಉಪಸ್ಥಿತಿಯೊಂದಿಗೆ ವೈಯಕ್ತಿಕ ಧಾರ್ಮಿಕ ನಂಬಿಕೆ ಮತ್ತು ಅಧಿಕೃತ ಕರ್ತವ್ಯಗಳ ನಡುವಿನ ಪ್ರತ್ಯೇಕತೆಯು ಉಲ್ಲಂಘನೆಗೊಂಡಿತ್ತು ಎಂದು ಸಿಸಿಜಿ ಬಹಿರಂಗ ಪತ್ರದಲ್ಲಿ ಆರೋಪಿಸಿದೆ.

ರಾಮಮಂದಿರ ಪ್ರಾಣಪ್ರತಿಷ್ಠಾಪನೆಯು ಬಾಬರಿ ಮಸೀದಿಯಿದ್ದ ನಿವೇಶನದಲ್ಲಿ ನಡೆದಿದೆ. 2019ರಲ್ಲಿ ಸರ್ವೋಚ್ಚ ನ್ಯಾಯಾಲಯವು ನಿವೇಶನದಲ್ಲಿ ಮಂದಿರ ನಿರ್ಮಾಣದ ಹಕ್ಕನ್ನು ನೀಡುವಾಗ ಸಾರ್ವಜನಿಕ ಆರಾಧನೆಯ ಸ್ಥಳವನ್ನು ನಾಶಗೊಳಿಸುವ ಲೆಕ್ಕಾಚಾರದ ಕೃತ್ಯದಲ್ಲಿ ಬಾಬರಿ ಮಸೀದಿಯನ್ನು ಉರುಳಿಸಲಾಗಿದೆ ಎಂದು ತನ್ನ ತೀರ್ಪಿನಲ್ಲಿ ಅಭಿಪ್ರಾಯಿಸಿತ್ತು ಎಂದು ಹೇಳಿರುವ ಮಾಜಿ ಸರಕಾರಿ ನೌಕರರು,ಕಳೆದ ಮೂರು ದಶಕಗಳ ಸಂಕಷ್ಟಪೀಡಿತ ಇತಿಹಾಸವನ್ನು ಗಮನಿಸಿ ಪ್ರಧಾನಿಯ ಬದಲು ಹಿಂದು ಧಾರ್ಮಿಕ ಮುಖಂಡರು ಪ್ರಾಣ ಪ್ರತಿಷ್ಠಾಪನೆಯನ್ನು ನೆರವೇರಿಸಿದ್ದರೆ ಅದು ಸೂಕ್ತವಾಗುತ್ತಿತ್ತು, ಆದರೆ ಪ್ರಧಾನಿ ಈ ಕಾರ್ಯವನ್ನು ನಡೆಸಿದ್ದು ಸಂವಿಧಾನದ ಪೀಠಿಕೆಯಲ್ಲಿ ಹೇಳಲಾಗಿರುವ ಜಾತ್ಯತೀತತೆಯ ಮೂಲಭೂತ ನಂಬಿಕೆಗೆ ವಿರುದ್ಧವಾಗಿದೆ ಎಂದಿದ್ದಾರೆ.

ರಾಮಮಂದಿರ ಉದ್ಘಾಟನೆಯ ಹಿಂದಿನ ತಿಂಗಳಲ್ಲಿಯ ಮತ್ತು ಮಂದಿರ ಉದ್ಘಾಟನೆಗೊಂಡ ನಂತರದಲ್ಲಿಯ ಬೆಳವಣಿಗೆಗಳು ಇನ್ನಷ್ಟು ಕಳವಳಕಾರಿಯಾಗಿವೆ ಎಂದಿರುವ ಸಿಸಿಜಿ,ಮಹಾರಾಷ್ಟ್ರದ ಮೀರಾ ರೋಡ್ ಸೇರಿದಂತೆ ಹಲವು ಸ್ಥಳಗಳು ಹಿಂದು ಸಮುದಾಯದ ಕೆಲವು ಶಕ್ತಿಗಳಿಂದ ಅನಗತ್ಯ ವಿಜಯೋತ್ಸವ ಪ್ರದರ್ಶನ ಮತ್ತು ಇದಕ್ಕೆ ಮುಸ್ಲಿಮ್ ಸಮುದಾಯದ ಕೆಲವು ಶಕ್ತಿಗಳಿಂದ ಪ್ರತಿಕ್ರಿಯೆಗಳಿಗೆ ಸಾಕ್ಷಿಯಾಗಿವೆ ಎಂದು ಹೇಳಿದೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News