ಗುಜರಾತಿನ ಔಷಧಿ ಕಂಪನಿಯಿಂದ 5,000 ಕೋಟಿ ರೂ. ಮೌಲ್ಯದ ಕೊಕೇನ್ ವಶ
ಹೊಸದಿಲ್ಲಿ: ದಿಲ್ಲಿ ಮತ್ತು ಗುಜರಾತ್ ಪೋಲಿಸರು ರವಿವಾರ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಗುಜರಾತಿನ ಅಂಕಲೇಶ್ವರದ ಆವ್ಕಾರ್ ಡ್ರಗ್ಸ್ ಲಿಮಿಟೆಡ್ ಕಂಪನಿಯ ಆವರಣದಿಂದ 518 ಕೆ.ಜಿ.ಕೊಕೇನ್ ವಶಪಡಿಸಿಕೊಂಡಿದ್ದು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಮೌಲ್ಯ ಸುಮಾರು 5,000 ಕೋಟಿ ರೂ.ಗಳಾಗಿವೆ ಎನ್ನಲಾಗಿದೆ.
ದಿಲ್ಲಿ ಪೋಲಿಸ್‌ನ ವಿಶೇಷ ಘಟಕವು ಕೈಗೊಂಡಿರುವ ಕಾರ್ಯಾಚರಣೆಯ ಅಂಗವಾಗಿ ಈ ದಾಳಿಯನ್ನು ನಡೆಸಲಾಗಿದೆ. ಅ.1ರಂದು ದಕ್ಷಿಣ ದಿಲ್ಲಿಯ ಮಹಿಪಾಲಪುರದಲ್ಲಿ ತುಷಾರ ಗೋಯಲ್ ಎಂಬ ವ್ಯಕ್ತಿಗೆ ಸೇರಿದ ಗೋದಾಮಿನ ಮೇಲೆ ದಾಳಿ ನಡೆಸಿದ್ದ ವಿಶೇಷ ಘಟಕವು 562 ಕೆಜಿ ಕೊಕೇನ್ ಮತ್ತು 40 ಕೆಜಿ ಹೈಡ್ರೋಪೋನಿಕ್ ಮರಿಜುವಾನಾ ವಶಪಡಿಸಿಕೊಂಡಿತ್ತು.
ತನಿಖೆಯ ಸಂದರ್ಭದಲ್ಲಿ ಅ.10ರಂದು ದಿಲ್ಲಿಯ ರಮೇಶ ನಗರದ ಅಂಗಡಿಯೊಂದರಿಂದ ಇನ್ನೂ 208 ಕೆಜಿ ಕೊಕೇನ್ ವಶಪಡಿಸಿಕೊಳ್ಳಲಾಗಿತ್ತು ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.
ವಶಪಡಿಸಿಕೊಳ್ಳಲಾದ ಮಾದಕದ್ರವ್ಯಗಳು ಫಾರ್ಮಾ ಸೊಲ್ಯೂಷನ್ ಸರ್ವಿಸಸ್ ಹೆಸರಿನ ಕಂಪನಿಗೆ ಸೇರಿದ್ದು,ಅದನ್ನು ಆವ್ಕಾರ್ ಡ್ರಗ್ಸ್ ಲಿ.ಕಂಪನಿಯಿಂದ ಖರೀದಿಸಲಾಗಿತ್ತು ಎನ್ನುವುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.
ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯಂತೆ ಆವ್ಕಾರ್ ಡ್ರಗ್ಸ್ 2016ರಲ್ಲಿ ಸ್ಥಾಪನೆಗೊಂಡಿತ್ತು ಮತ್ತು 2018ರಲ್ಲಿ ಗುಜರಾತ್ ಕೈಗಾರಿಕಾ ಅಭಿವೃದ್ಧಿ ನಿಗಮವು ಕಂಪನಿಗೆ ಅಂಕಲೇಶ್ವರ ಕೈಗಾರಿಕಾ ಪ್ರದೇಶದಲ್ಲಿ 4,733.50 ಚ.ಮೀ.ಭೂಮಿಯನ್ನು ಮಂಜೂರು ಮಾಡಿತ್ತು.
ಭಾರತವನ್ನು ಪ್ರವೇಶಿಸಿದ ಕೊಕೇನ್ ಮೊದಲು ಆವ್ಕಾರ್ ಡ್ರಗ್ಸ್ ಕಂಪನಿಯನ್ನು ತಲುಪುತ್ತಿತ್ತು. ಇಲ್ಲಿ ಅದನ್ನು ಸಂಸ್ಕರಿಸಲಾಗುತ್ತಿತ್ತು ಎಂದು ಅಧಿಕಾರಿ ತಿಳಿಸಿದರು.
ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕೆಲವರನ್ನು ವಶಕ್ಕೆ ತೆಗೆದುಕೊಂಡಿರುವ ಪೋಲಿಸರು ಅವರ ವಿಚಾರಣೆ ನಡೆಸುತ್ತಿದ್ದಾರೆ.
ಮೂರು ಕಾರ್ಯಾಚರಣೆಗಳಲ್ಲಿ ಈವರೆಗೆ ಒಟ್ಟು 13,000 ಕೋಟಿ ರೂ. ಮೌಲ್ಯದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದರು.