ಗುಜರಾತ್ ಕದನ: ವೈಟ್ ವಾಶ್ ತಪ್ಪಿಸಿಕೊಳ್ಳಲಿದೆಯೇ ಕಾಂಗ್ರೆಸ್?
ಹೊಸದಿಲ್ಲಿ: ಕ್ರಿಕೆಟ್ ಪರಿಭಾಷೆಯಲ್ಲಿ ಗುಜರಾತ್ ರಾಜ್ಯಕ್ಕೆ ಸಂಬಂಧಿಸಿದಂತೆ 2024ರ ಸಾರ್ವತ್ರಿಕ ಚುನಾವಣೆಯನ್ನು ಬಣ್ಣಿಸುವುದಾದರೆ ಈ ಬಾರಿಯ ಕದನ ಉರಿ ಚೆಂಡು ಎಸೆಯುವ ವೇಗದ ಬೌಲರ್ ಗಳು ಹಾಗೂ ನಿರ್ದಯವಾಗಿ ಬೌಲರ್ ಗಳ ಮೇಲೆ ಸವಾರಿ ಮಾಡಬಲ್ಲ ಪಿಂಚ್ ಹಿಟ್ಟರ್ ಗಳಿಂದ ಕೂಡಿದ ಬಲಿಷ್ಠ ತಂಡ ಮತ್ತು 2019 & 2014ರಲ್ಲಿ ವೈಟ್ ವಾಶ್ ಆಗಿರುವ ದುರ್ಬಲ ತಂಡಗಳ ನಡುವಿನ ಹೋರಾಟ.
ರಾಜಕೀಯ ಪಂಡಿತರು, ವೀಕ್ಷಕ ವಿವರಣೆಕಾರರು ಮತ್ತು ಪ್ರೇಕ್ಷಕರ ಚರ್ಚೆಯ ವಸ್ತು ಗೆಲುವಿನ ಅಂತರ ಮಾತ್ರ. ಏಕೆಂದರೆ ಪಂದ್ಯದಲ್ಲಿ ಒಂದು ಎಸೆತ ಎಸೆಯುವ ಮುನ್ನವೇ ಬಲಿಷ್ಠ ತಂಡ ರನ್ ಗಳಿಸಿದೆ.
ರಾಜ್ಯದ ಇತಿಹಾಸದಲ್ಲಿ 1960ರಿಂದ ಇದೇ ಮೊದಲ ಬಾರಿಗೆ ಬಿಜೆಪಿಯ ಸೂರತ್ ಕ್ಷೇತ್ರದ ಅಭ್ಯರ್ಥಿ ಮುಕೇಶ್ ದಲಾಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ನೀಲೇಶ್ ಕುಂಭಾನಿ ಅವರ ನಾಮಪತ್ರ ತಿರಸ್ಕೃತಗೊಂಡಿದ್ದು, ಉಳಿದ ಎಲ್ಲ ಅಭ್ಯರ್ಥಿಗಳು ಕಣದಿಂದ ಹಿಂದೆ ಸರಿದಿದ್ದಾರೆ.
ಆದರೆ ಇಲ್ಲಿ ಬಿಜೆಪಿ ಅವಿರೋಧ ಆಯ್ಕೆಯಾಗಿರುವುದು ಬಿಜೆಪಿ ಹಾಗೂ ಜಿಲ್ಲಾಡಳಿತಕ್ಕೆ ಒಂದು ಅರ್ಥದಲ್ಲಿ ಸವಾಲಾಗಿ ಪರಿಣಮಿಸಿದೆ. ನವಸಾರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಸೂರತ್ ಪಟ್ಟಣದ ಮಜೂರಾ, ಉಧ್ನಾ, ಲಿಂಬಾಯತ್ ಮತ್ತು ಚೋರಿಯಾಸಿ ಪ್ರದೇಶಗಳ ಮತ ಪಡೆಯುವುದು ಹೇಗೆ ಎನ್ನುವ ಲೆಕ್ಕಾಚಾರ ನಡೆಯುತ್ತಿದೆ. ರಾಜ್ಯ ಬಿಜೆಪಿ ಅದ್ಯಕ್ಷ ಸಿ.ಆರ್.ಪಾಟೀಲ್ ಇಲ್ಲಿ ಕಾಂಗ್ರೆಸ್ ನ ನಿಶದ್ ದೇಸಾಯಿ ವಿರುದ್ಧ ಸೆಣೆಸುತ್ತಿದ್ದಾರೆ.
ಮೋದಿ ಜನಪ್ರಿಯತೆ ಹಿನ್ನೆಲೆಯಲ್ಲಿ ಬಿಜೆಪಿ ಎಲ್ಲ 26 ಕ್ಷೇತ್ರಗಳನ್ನು ಅತ್ಯಧಿಕ ಮತಗಳಿಂದ ಗೆಲ್ಲುವ ಹುಮ್ಮಸ್ಸಿನಲ್ಲಿದೆ. ಗಾಂಧಿನಗರದಲ್ಲಿ ಅಮಿತ್ ಶಾ 10 ಲಕ್ಷಕ್ಕಿಂತ ಅಧಿಕ ಮತಗಳಿಂದ ಗೆಲ್ಲುತ್ತಾರೆ ಎನ್ನುವ ಲೆಕ್ಕಾಚಾರ ಆ ಪಕ್ಷದ್ದು. 2009ರ ಚುನಾವಣೆಯಲ್ಲಿ ಬಿಜೆಪಿ ಶೇಕಡ 47.4 ಮತ ಪಡೆದಿದ್ದರೆ, ಕಾಂಗ್ರೆಸ್ 43.9 ಶೇಕಡ ಮತ ಪಡೆದಿತ್ತು. 2014 ಹಾಗೂ 2019ರಲ್ಲಿ ಬಿಜೆಪಿ ತನ್ನ ಮತ ಪ್ರಮಾಣವನ್ನು ಶೇಕಡ 59 ಮತ್ತು 62.2ಕ್ಕೆ ಹೆಚ್ಚಿಸಿಕೊಂಡಿದೆ. ಕಾಂಗ್ರೆಸ್ನ ಪಾಲು ಶೇಕಡ 32.9 ಮತ್ತು 32.1ಕ್ಕೆ ಕುಸಿದಿದೆ.
ಆದರೆ ಈ ಬಾರಿ ಬಿಜೆಪಿ ಸಂಪೂರ್ಣವಾಗಿ ಮೋದಿಯವರ ವೈಯಕ್ತಿಕ ವರ್ಚಸ್ಸನ್ನು ಪಣಕ್ಕಿಟ್ಟು ಕಣಕ್ಕೆ ಇಳಿದಿದೆ. ಮೈಸುಡುವ ಬಿಸಿಲು ಮತದಾನದ ಮೇಲೆ ಪರಿಣಾಮ ಬೀರಬಹುದು ಎಂದು ನಿರೀಕ್ಷಿಸಲಾಗಿದ್ದು, ಇದು ರಾಜಕೀಯ ಲೆಕ್ಕಾಚಾರವನ್ನು ಬದಲಿಸಬಲ್ಲದು ಎಂದು ವಿಶ್ಲೇಷಿಸಲಾಗುತ್ತಿದೆ.