ಗುಜರಾತ್: ಸೋಮನಾಥ ದೇವಾಲಯ ಭೂಮಿಯಲ್ಲಿ ನಿರ್ಮಾಣ ಮಾಡಿದ್ದ 150 ಗುಡಿಸಲುಗಳ ತೆರವು
ಗಾಂಧಿನಗರ: ಸೋಮನಾಥ ದೇವಾಲಯ ಟ್ರಸ್ಟ್ ಹಾಗೂ ರಾಜ್ಯ ಸರಕಾರಕ್ಕೆ ಸೇರಿದ ಗುಜರಾತ್‌ನ ಗಿರ್ ಸೋಮನಾಥ್ ಜಿಲ್ಲೆಯಲ್ಲಿರುವ ಸೋಮನಾಥ್ ದೇವಾಲಯದ ಹಿಂದೆ ಇರುವ ಸುಮಾರು 3 ಹೆಕ್ಟೇರ್‌ಗಳು (7.4 ಎಕರೆ) ಭೂಮಿಯಲ್ಲಿ ನಿರ್ಮಾಣ ಮಾಡಿದ 150 ಗುಡಿಸಲುಗಳನ್ನು ಗುಜರಾತ್ ಸರಕಾರ ಶನಿವಾರ ತೆರವುಗೊಳಿಸಿದೆ.
ಸೋಮನಾಥ ದೇವಾಲಯದ ಚುಟವಟಿಕೆಗಳನ್ನು ನಿರ್ವಹಿಸುತ್ತಿರುವ ಶ್ರೀ ಸೋಮನಾಥ ಟ್ರಸ್ಟ್ ಹಾಗೂ ರಾಜ್ಯ ಸರಕಾರಕ್ಕೆ ಸೇರಿದ ಭೂಮಿಯಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡಲಾಗಿದ್ದ 21 ಮನೆಗಳು ಹಾಗೂ 153 ಗುಡಿಸಲುಗಳು ನೆಲಸಮಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾರ್ಜಿ ವಾಧ್ವಾನಿಯಾ ಅವರು ತಿಳಿಸಿದ್ದಾರೆ.
ಐವರು ಮಾಮಲ್ದಾರ್ ಹಾಗೂ ಸುಮಾರು 100 ಮಂದಿ ಕಂದಾಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಬೃಹತ್ ನೆಲಸಮ ಕಾರ್ಯಾಚರಣೆ ನಡೆಸಲಾಯಿತು. ಕಾರ್ಯಾಚರಣೆ ಶಾಂತಿಯುತವಾಗಿ ನೆರವೇರಲು ಭಾರೀ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು ಎಂದು ವಾಧ್ವಾನಿಯಾ ತಿಳಿಸಿದ್ದಾರೆ.
ರಾಜ್ಯ ಕಂದಾಯ ಇಲಾಖೆ ಜಾರಿಗೊಳಿಸಿದ ಸುತ್ತೋಲೆಯಂತೆ ಕಾರ್ಯಾಚರಣೆ ನಡೆಸಿ 3 ಹೆಕ್ಟೇರ್ ಎಕರೆ ಭೂಮಿಯಲ್ಲಿದ್ದ ಮನೆ ಹಾಗೂ ಗುಡಿಸಲುಗಳನ್ನು ತೆರವುಗೊಳಿಸಲಾಯಿತು ಹಾಗೂ ತಂತಿ ಬೇಲಿಯನ್ನು ಅಳವಡಿಸಲಾಯಿತು ಎಂದು ಅವರು ತಿಳಿಸಿದ್ದಾರೆ.
‘‘ಕಂದಾಯ ಇಲಾಖೆ ಜಾರಿಗೊಳಿಸಿದ ಸುತ್ತೋಲೆಯಂತೆ ಭೂಮಿ ಅತಿಕ್ರಮಿಸಿ ಕಟ್ಟಿಕೊಂಡ ಮನೆಗಳನ್ನು ತೆರವುಗೊಳಿಸಲು ನಾವು ಕಾರ್ಯ ನಿರ್ವಹಿಸಿದ್ದೇವೆ ಹಾಗೂ ಭೂಮಿಗೆ ತಂತಿ ಬೇಲಿ ಹಾಕಿದ್ದಾವೆ. ಈ ಕಾರ್ಯಾಚರಣೆಗಿಂತ ಮುನ್ನ ನಾವು ಸಂಪೂರ್ಣ ಪ್ರಕ್ರಿಯೆ ಕುರಿತು ಅವರಿಗೆ ವಿವರಿಸಲು ಭೂ ಅತಿಕ್ರಮಣಕಾರರ ಪ್ರತಿನಿಧಿಗಳ ಸಭೆಯನ್ನು ಜನವರಿ 25ರಂದು ಕರೆದಿದ್ದೆವು’’ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.