ಗುಜರಾತ್ | ನವಸಾರಿ ಮತ್ತು ವಲ್ಸಾಡ್ ಜಿಲ್ಲೆಗಳಲ್ಲಿ ಭಾರೀ ಮಳೆ, ಉಕ್ಕಿಹರಿಯುತ್ತಿರುವ ನದಿಗಳು
ಅಹ್ಮದಾಬಾದ್ : ದಕ್ಷಿಣ ಗುಜರಾತಿನ ನವಸಾರಿ ಮತ್ತು ವಲ್ಸಾಡ್ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ನದಿಗಳು ಉಕ್ಕಿ ಹರಿಯುತ್ತಿವೆ. ಸೋಮವಾರ ಜಲಾವೃತಗೊಂಡಿರುವ ತಗ್ಗು ಪ್ರದೇಶಗಳಿಂದ 1,000ಕ್ಕೂ ಅಧಿಕ ಜನರನ್ನು ಸ್ಥಳಾಂತರಿಸಲಾಗಿದೆ.
ನವಸಾರಿ ಜಿಲ್ಲೆಯ ಖೇರಾಗಾಮ್ ತಾಲೂಕಿನಲ್ಲಿ ಸೋಮವಾರ ಬೆಳಿಗ್ಗೆ ಆರು ಗಂಟೆಗೆ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ 229 ಮಿ.ಮೀ.ಮಳೆಯಾಗಿದೆ. ದಕ್ಷಿಣ ಗುಜರಾತಿನ ಡಾಂಗ್ಸ್ ಮತ್ತು ತಾಪಿ ಜಿಲ್ಲೆಗಳ 12 ತಾಲೂಕುಗಳಲ್ಲಿ ಈ ಅವಧಿಯಲ್ಲಿ 100 ಮಿ.ಮೀ.ಗೂ ಅಧಿಕ ಮಳೆಯಾಗಿದೆ ಎಂದು ರಾಜ್ಯ ತುರ್ತು ಕಾಯಾಚರಣೆ ಕೇಂದ್ರವು ತಿಳಿಸಿದೆ.
ವಲ್ಸಾಡ್ ತಾಲೂಕಿನಲ್ಲಿ ಔರಂಗ್ ನದಿಯು ಅಪಾಯ ಮಟ್ಟವನ್ನು ಮೀರಿ ಹರಿಯುತ್ತಿದ್ದರೆ, ನೆರೆಯ ನವಸಾರಿ ಜಿಲ್ಲೆಯಲ್ಲಿ ಕಾವೇರಿ ಮತ್ತು ಅಂಬಿಕಾ ನದಿಗಳ ನೀರು ತಗ್ಗುಪ್ರದೇಶಗಳಿಗೆ ನುಗ್ಗಿದೆ.
ಅಂಬಿಕಾ ಮತ್ತು ಕಾವೇರಿ ನದಿಗಳಲ್ಲಿ ಪ್ರವಾಹ ಉಂಟಾದ ಬಳಿಕ ನವಸಾರಿ ಜಿಲ್ಲೆಯ ಗಣದೇವಿ ತಾಲೂಕಿನಲ್ಲಿ ಸುಮಾರು ಒಂದು ಸಾವಿರ ಜನರನ್ನು ಸ್ಥಳಾಂತರಿಸಲಾಗಿದೆ. ವಲ್ಸಾಡ್ ಜಿಲ್ಲೆಯಲ್ಲಿ ನೆರೆನೀರು ತುಂಬಿದ್ದ ಹೊಂಡದಲ್ಲಿ ಸಿಕ್ಕಿಕೊಂಡಿದ್ದ ಏಳು ಕಾರ್ಮಿಕರನ್ನು NDRF ಸಿಬ್ಬಂದಿಗಳು ರಕ್ಷಿಸಿದ್ದಾರೆ. ಜಿಲ್ಲೆಯ ಧರಮ್ಪುರ ತಾಲೂಕಿನಲ್ಲಿ ವ್ಯಕ್ತಿಯೋರ್ವ ನೆರೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ.
ಗುಜರಾತಿನಲ್ಲಿ ಈವರೆಗೆ ವಾಡಿಕೆಯ ಶೇ.67ಕ್ಕೂ ಅಧಿಕ ಮಳೆಯಾಗಿದೆ. ನರ್ಮದಾ ಜಿಲ್ಲೆಯ ಸರ್ದಾರ್ ಸರೋವರ ಅಣೆಕಟ್ಟಿನಲ್ಲಿ ನೀರಿನ ಸಂಗ್ರಹ 2,04,901 ಮಿಲಿಯನ್ ಘನ ಅಡಿ ದಾಸ್ತಾನು ಸಾಮರ್ಥ್ಯದ ಶೇ.60ನ್ನು ದಾಟಿದೆ.