ಗುಜರಾತ್: ಬಿಜೆಪಿ ಅಭ್ಯರ್ಥಿ ಪರಷೋತ್ತಮ ರೂಪಾಲಾ ವಿರುದ್ಧ ತೀವ್ರಗೊಂಡ ಕ್ಷತ್ರಿಯ ಸಮುದಾಯದ ಪ್ರತಿಭಟನೆ

Update: 2024-04-21 15:22 GMT

ಪರಷೋತ್ತಮ ರೂಪಾಲಾ | PC: PTI

ಅಹ್ಮದಾಬಾದ್ : ರಾಜಕೋಟ್ ಬಿಜೆಪಿ ಅಭ್ಯರ್ಥಿ ಹಾಗೂ ಕೇಂದ್ರ ಸಚಿವ ಪರಷೋತ್ತಮ ರೂಪಾಲಾ ಮತ್ತು ಬಿಜೆಪಿ ವಿರುದ್ಧ ಕ್ಷತ್ರಿಯ ಸಮುದಾಯದ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದು,ಗುಜರಾತಿನಲ್ಲಿ ಉದ್ವಿಗ್ನತೆ ಹೆಚ್ಚುತ್ತಿದೆ. ನಿರಂತರ ಪ್ರತಿಭಟನೆಗಳ ಹೊರತಾಗಿಯೂ ರೂಪಾಲಾ ಎ.16ರಂದು ರಾಜಕೋಟ್ ಲೋಕಸಭಾ ಕ್ಷೇತ್ರದಿಂದ ತನ್ನ ನಾಮಪತ್ರವನ್ನು ಸಲ್ಲಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ ಕ್ಷತ್ರಿಯ ಸಮುದಾಯವು ಪ್ರತಿಭಟನೆಗಳ ಹೊಸ ಸುತ್ತನ್ನು ಘೋಷಿಸಿದೆ. ಗುಜರಾತಿನಾದ್ಯಂತ ರಜಪೂತ ಮಹಿಳೆಯರು ಸರದಿ ಉಪವಾಸವನ್ನು ಆರಂಭಿಸಲಿದ್ದು,ಇದು ಮತದಾನದ ದಿನವಾದ ಮೇ 7ರವರೆಗೂ ಮುಂದುವರಿಯಲಿದೆ. ಜೊತೆಗೆ ಬಿಜೆಪಿ ವಿರುದ್ಧ ಅಸಮಾಧಾನದ ದ್ಯೋತಕವಾಗಿ ಐದು ಪ್ರದೇಶಗಳಲ್ಲಿ ಸಾಂಕೇತಿಕ ‘ಧರ್ಮ ರಥ’ ಗಳನ್ನು ಪ್ರದರ್ಶಿಸಲಾಗುವುದು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜಕೋಟ್ನ ಕ್ಷ್ರತಿಯ ಸಮುದಾಯದ ಮುಖಂಡ ಪಿ.ಟಿ.ಜಡೇಜಾ ಅವರು,‘ರೂಪಾಲಾ ಅವರು ತನ್ನ ನಾಮಪತ್ರವನ್ನು ಹಿಂದೆಗೆದುಕೊಳ್ಳಲು ಅಥವಾ ಸರಕಾರವು ಮಧ್ಯಪ್ರವೇಶಿಸಿ ಅವರ ನಾಮಪತ್ರವನ್ನು ಹಿಂಪಡೆಯಲು ನಾವು ಬಿಜೆಪಿಗೆ ಎ.22ರವರೆಗೆ ಸಮಯಾವಕಾಶ ನೀಡಿದ್ದೇವೆ. ಸರಕಾರವು ಕ್ರಮವನ್ನು ಕೈಗೊಳ್ಳಲು ವಿಫಲಗೊಂಡರೆ ನಾವು ಬಿಜೆಪಿ ವಿರುದ್ಧ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸುತ್ತೇವೆ ’ ಎಂದು ತಿಳಿಸಿದರು.

‘ಅಹ್ಮದಾಬಾದ್ನಲ್ಲಿ ಕ್ಷತ್ರಿಯ ಸಮನ್ವಯ ಸಮಿತಿಯ ನೇತೃತ್ವದಲ್ಲಿ ಕ್ಷತ್ರಿಯ ಸಮುದಾಯದ ಆಂದೋಲನದ ಭಾಗ ಎರಡು ಆರಂಭಗೊಂಡಿದೆ. ಆನಂದ ಮತ್ತು ವಡೋದರಾದಲ್ಲಿ ಕ್ಷತ್ರಿಯ ಮತದಾರರು ಗಣನೀಯ ಸಂಖ್ಯೆಯಲ್ಲಿದ್ದು,ಅಲ್ಲಿ ಸಮಾವೇಶಗಳನ್ನು ಆಯೋಜಿಸಲಿದ್ದೇವೆ. ದಿನಾಂಕಗಳು ಮತ್ತು ಸ್ಥಳಗಳನ್ನು ಶೀಘ್ರವೇ ಪ್ರಕಟಿಸಲಾಗುವುದು. ಬಿಜೆಪಿ ವಿರುದ್ಧ ತಮ್ಮ ಮತಗಳನ್ನು ಚಲಾಯಿಸುವಂತೆ ಕ್ಷತ್ರಿಯ ಸಮುದಾಯವನ್ನು ನಾವು ಆಗ್ರಹಿಸುತ್ತಿದ್ದೇವೆ ’ ಎಂದು ತಿಳಿಸಿದ ಜಡೇಜಾ,‘ಗಣನೀಯ ಸಂಖ್ಯೆಯಲ್ಲಿ ರಜಪೂತ ಮತದಾರರನ್ನು ಹೊಂದಿರುವ ಗುಜರಾತಿನ ಎಂಟು ಜಿಲ್ಲೆಗಳಲ್ಲಿ ಬಿಜೆಪಿಗೆ ಸವಾಲೊಡ್ಡಲು ನಾವು ಕಾರ್ಯತಂತ್ರವನ್ನು ರೂಪಿಸಿದ್ದೇವೆ. ಓರ್ವ ರಜಪೂತ ಯುವಕ ಬಿಜೆಪಿ ವಿರುದ್ಧ ಮತ ಚಲಾಯಿಸುವಂತೆ ಇತರ ಮೂವರನ್ನು ಉತ್ತೇಜಿಸುವುದು ನಮ್ಮ ಯೋಜನೆಯಲ್ಲಿ ಸೇರಿದೆ. ಈ ಆಂದೋಲನವು ಗ್ರಾಮೀಣ ಪ್ರದೇಶಗಳಿಗೂ ವಿಸ್ತರಣೆಗೊಳ್ಳಲಿದೆ ಮತ್ತು ಎಲ್ಲ ಕಡೆಗಳಲ್ಲಿ ಬಿಜೆಪಿಯನ್ನು ವಿರೋಧಿಸಲು ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಗುವುದು ’ ಎಂದರು.

ರೂಪಾಲಾ ವಿರುದ್ಧ ಆಕ್ರೋಶವೇಕೆ?

ತನ್ನ ಇತ್ತೀಚಿನ ಚುನಾವಣಾ ಪ್ರಚಾರ ಸಭೆಯಲ್ಲಿ ಹಲವಾರು ರಜಪೂತ ದೊರೆಗಳು ಮತ್ತು ವಿದೇಶಿ ಆಕ್ರಮಣಕೋರರ ನಡುವಿನ ಸಹಯೋಗಗಳನ್ನು ಪ್ರಸ್ತಾಪಿಸಿದ್ದ ರೂಪಾಲಾ, ಅವರ ನಡುವಿನ ‘ರೋಟಿ ಔರ್ ಬೇಟಿ( ವ್ಯಾಪಾರ ಮತ್ತು ಮದುವೆ)’ ಸಂಬಂಧಗಳನ್ನು ಉಲ್ಲೇಖಿಸಿದ್ದರು. ಇದು ರಜಪೂತ ಸಮುದಾಯವನ್ನು ಕೆರಳಿಸಿದೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News